ಅಸಮಾನತೆಯ ಕುದುರೆಯನ್ನು ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ: ಹಿರಿಯ ಸಾಹಿತಿ ದೇವನೂರ ಮಹಾದೇವ

Update: 2022-04-14 10:12 GMT

ಮೈಸೂರು: ಇಂದು ದೇಶದಲ್ಲಿ ಅಸಮಾನತೆ ಹೆಚ್ಚಿದ್ದು, ಈ ಅಸಮಾನತೆಯ ಹುಚ್ಚು ಕುದುರೆಯನ್ನು ದ್ವೇಷ, ಅಸಹನೆಯ ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.

ಭಾರತೀಯ ಪರಿವರ್ತನ ಸಂಘವು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 131 ನೇ ಜಯಂತಿ ಅಂಗವಾಗಿ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿದ್ದ ಸಮಾನತೆಗಾಗಿ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಅಂಬೇಡ್ಕರ್ ಅವರು ಹುಟ್ಟಿದ ದಿನ. ಈ ನೆನಪಿಗಾಗಿ ‘ಸಮಾನತೆಗಾಗಿ ಓಟ’ ನಡೆಯುತ್ತಿದೆ. ಅದಕ್ಕೆ ಚಾಲನೆ ಕೊಡಲು ಬಂದಿದ್ದೇನೆ. ನೋಡುವುದಕ್ಕೆ ಮಾಜಿ ಆಟಗಾರ, ಹಾಲಿ ಕೋಚ್‌ನಂತೆ ಡ್ರೆಸ್‌ ಕೋಡ್‌ನಲ್ಲೇನೋ ಬಂದಿದ್ದೇನೆ. ಕ್ಷಮೆ ಇರಲಿ. ನಾನು ಎಂದೂ ಓಡಿದವನು ಅಲ್ಲ, ನಿಮ್ಮೊಡನೆ ನಿಮ್ಮ ಹಿಂದೆ ಹಿಂದೆಯಾದರೂ ಓಡುವ ಚೈತನ್ಯವೂ ಈಗ ನನಗಿಲ್ಲ. ಓಡುತ್ತಿರುವ ಎಳೆಯರ ಬೆನ್ನು ತಟ್ಟಲು ಬಂದಿದ್ದೇನೆ. ಯಾಕೆಂದರೆ ನೀವು ಇಂದು ಓಡುತ್ತಿರುವುದು ಸಮಾನತೆಗಾಗಿ ಓಟ.

ಸಮಾನತೆಗಾಗಿ ಓಡುತ್ತಿರುವ ಎಳೆಯ ಸ್ನೇಹಿತರೆ ಇಂದು ನೀವು ತುಂಬಾ ವೇಗವಾಗಿ ಓಡಬೇಕಾಗಿದೆ. ಯಾಕೆಂದರೆ ಅಸಮಾನತೆ ಇಂದು ಎಂದೂ ಇಲ್ಲದಷ್ಟು ಹುಚ್ಚು ಕುದುರೆಯಂತೆ ಓಡುತ್ತಿದೆ. ಇದಾಗಲೇ ಅದು ತುಂಬ ದೂರ ಓಡಿದೆ. ಈ ದೇಶಕ್ಕೆ ದಿಕ್ಕು ತೋರಿಸುತ್ತಿರುವ ಚಿಂತಕ, ಹೋರಾಟಗಾರ ಯೋಗೇಂದ್ರ ಯಾದವ್ ಮೊನ್ನೆ ಮೊನ್ನೆ ತಾನೇ ಮೈಸೂರಿಗೆ ಬಂದಿದ್ದರು. ಅವರು ಮಾತಾಡುತ್ತ ಒಂದು ನುಡಿಗಟ್ಟು ಹೇಳಿದ್ದರು.

‘‘ಭಾರತದ ಪ್ರಧಾನಿ ಮೋದಿಯವರ ಬಾಯಲ್ಲಿ ಸೀತಾಪತಿ ಅಂದರೆ- ರಾಮ, ಭಾರತದ ಪ್ರಧಾನಿ ಮೋದಿಯವರ ಹೃದಯದಲ್ಲಿ ನೀತಾತಿ ಅಂದರೆ- ಅಂಬಾನಿ’’

ಭಾರತದ ಪ್ರಧಾನಿ ಮೋದಿಯವರ ಹೃದಯದಲ್ಲಿರುವ ಅಂಬಾನಿ ಲಕ್ಷಾಂತರ ಕೋಟಿಗಳ ಒಡೆಯ. ಭಾರತದಲ್ಲಿ ಇಂತಹ ನೂರಾರು ಬಿಲಿಯರ್ ಕುಟುಂಬಗಳ ಸಂಪತ್ತು ಒಟ್ಟಾದರೆ ಅದು ದೇಶದ ಒಟ್ಟು ಸಂಪತ್ತಿನ ಅರ್ಧಭಾಗದಷ್ಟು ಆಗುತ್ತದಂತೆ. ಬಡವರ ಸಂಖ್ಯೆ ದಿನ ದಿನವೂ ಹೆಚ್ಚುತ್ತಿದೆ. ಇಷ್ಟೊಂದು ಅಸಮಾನತೆ ಇಂದು ದೇಶದಲ್ಲಿದೆ. ಈ ಅಸಮಾನತೆಯ ಹುಚ್ಚು ಕುದುರೆಯನ್ನು ದ್ವೇಷ ಅಸಹನೆಯ ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ. ಅಸಮಾನತೆಯ ಹುಚ್ಚು ಕುದುರೆ ಹುಚ್ಚೆದ್ದು ಓಡುತ್ತಿದೆ. ಆದರಿಂದ ಕಚ್ಚಿಸಿಕೊಳ್ಳದೆ ನೀವು ಎಚ್ಚರ ವಹಿಸಿ ಓಡಬೇಕಾಗಿದೆ. ನೀವು ಎಳೆಯರಾದ್ದರಿಂದ ನೀವು ಗೆಲ್ಲುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ಗೆಲ್ಲಲೇ ಬೇಕು ಎಂದು ಕರೆ ನೀಡಿದರು.

ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಎಸಿಪಿ ಎಸ್.ಗಂಗಾಧರಸ್ವಾಮಿ, ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ ಅಧೀಕ್ಷಕ ಎಂ.ಯೋಗೇಂದ್ರ, ಆದಾಯ ತೆರಿಗೆ ಇಲಾಖೆಯ ಆಡಳಿತಾಧಿಕಾರಿ ಮಹದೇವಯ್ಯ, ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಮಲ್ಲಿಕಾರ್ಜುನ್, ಅರವಳಿಕೆ ತಜ್ಞ ಡಾ.ಶ್ಯಾಮ್ ಪ್ರಸಾದ್, ಜಾ.ದಳ ಮುಖಂಡ ದೇವರಾಜ್ ಒಡೆಯರ್, ಸಾಹಿತಿ ಸೋಸಲೆ ಗಂಗಾಧರ್, ದುರ್ಗಾಂಬ ಎಂಟರ್‌ಪ್ರೈಸಸ್‌ನ ಎನ್.ಶಂಕರ, ಶ್ರೀಕಂಠೇಶ್ವರ ಎಂಟರ್‌ ಪ್ರೈಸಸ್‌ನ ಜಗದೀಶ್, ತೇಜಸ್ವಿನಿ ಎಂಟರ್‌ ಪ್ರೈಸಸ್‌ನ ರಾಮಕೃಷ್ಣ, ಬಿಪಿಎಸ್ ಜಿಲ್ಲಾ ಸಂಚಾಲಕ ಸೋಸಲೆ ಸಿದ್ದರಾಜು, ಜಿಲ್ಲಾಧ್ಯಕ್ಷ ಭೀಮನಹಲ್ಳಿ ಸೋಮೇಶ್, ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ, ಜಯಶಂಕರ್ ಮೇಸ್ತ್ರಿ ಮತ್ತಿತರರು ಪಾಲ್ಗೊಂಡಿದ್ದರು.

ಸಮಾನತೆಗಾಗಿ ಓಟದಲ್ಲಿ ಪಾಲ್ಗೊಂಡ ಕಿರಿ-ಹಿರಿಯರು

ಭಾರತೀಯ ಪರಿವರ್ತನ ಸಂಘ ಆಯೋಜಿಸಿದ್ದ ಸಮಾನತೆಗಾಗಿ ಓಟದಲ್ಲಿ ಕಿರಿಯರು- ಹಿರಿಯರು ಪಾಲ್ಗೊಂಡಿದ್ದರು. ಪುರಭವನದಿಂದ ಆರಂಭವಾದ ಓಟ ಹಾರ್ಡಿಂಜ್ ವೃತ್ತ, ಗನ್‌ಹೌಸ್, ರಾಮಸ್ವಾಮಿ ವೃತ್ತ, ಆರ್‌ಟಿಓ, ಅಶೋಕ ವೃತ್ತ, ಕೃಷ್ಣ ಬುಲೇವಾರ್ಡ್ ರಸ್ತೆ, ಕಲಾಮಂದಿರ ರಸ್ತೆ, ರೈಲ್ವೆ ವೃತ್ತ, ಇರ್ವಿನ್ ರಸ್ತೆ ಮಾರ್ಗವಾಗಿ ಪುರಭವನದಲ್ಲಿ ಅಂತ್ಯವಾಯಿತು. ಸುಮಾರು ೧೨ ಕಿ.ಮೀ. ಓಟದಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಪ್ರಲಾಕ್ಷ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ತೇಜಸ್ವಿನಿ ಎಂಟರ್‌ ಪ್ರೈಸಸ್‌ನಿಂದ ಟಿ-ಷರ್ಟ್ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News