ನಕಲಿ ನಿವೇಶನ ಹಂಚಿಕೆ ಆರೋಪ: ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್

Update: 2022-04-14 12:35 GMT

ಬೆಂಗಳೂರು, ಎ.14: ನಕಲಿ ನಿವೇಶನಗಳ ಹಂಚಿಕೆಯ ದುರುದ್ದೇಶದಿಂದ ದಾಖಲೆಗಳನ್ನು ಹಂಚಿಕೊಂಡಿದ್ದ ಆರೋಪದಡಿ ಐವರು ಬಿಡಿಎ ಎಂಜಿನಿಯರ್ ಗಳ ವಿರುದ್ಧ ದೋಷಾರೋಪ ಪಟ್ಟಿ ಆಧರಿಸಿ ಮುಂದಿನ ಪ್ರಕ್ರಿಯೆ ಜರುಗಿಸಲು ಮುಂದಾಗಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎಂಜಿನಿಯರ್ ಗಳಾದ ಎ.ಕೃಷ್ಣಮೂರ್ತಿ, ಕೆ.ಎನ್.ರವಿಕುಮಾರ್, ಸಿ.ಶ್ರೀನಿವಾಸ್, ಶಬ್ಬೀರ್ ಅಹ್ಮದ್ ಮತ್ತು ಎಂ.ಎಂ.ಫಾರೂಖ್ ಅಝಮ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ಮಾಡಿದೆ. 
ಇದೇ ವೇಳೆ ವಿಚಾರಣೆಗೆ(ಪ್ರಾಸಿಕ್ಯೂಷನ್‍ಗೆ) ಅನುಮತಿ ನೀಡುವ ಕುರಿತಂತೆ ಪ್ರಕರಣವನ್ನು ಸರಕಾರಕ್ಕೆ(ಸಕ್ಷಮ ಪ್ರಾಧಿಕಾರ) ಹಿಂದಿರುಗಿಸಿದೆ. 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅರ್ಜಿದಾರ ಎಂಜಿನಿಯರ್ ಗಳಿಗೆ ಕರಡು ಸಿಡಿಆರ್ (ಕರೆಕ್ಟ್ ಡೈಮೆನ್ಷನ್ ರಿಪೋರ್ಟ್) ಸಿದ್ಧಪಡಿಸುವ ಜವಾಬ್ದಾರಿ ನೀಡಿತ್ತು. ಈ ಸಂದರ್ಭದಲ್ಲಿ ಅವರು ಬಿಡಿಎ ವ್ಯಾಪ್ತಿಗೆ ಬರುವ ನಿವೇಶನಗಳನ್ನು ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಹಂಚಿಕೆ ಮಾಡುವ ಸಂಬಂಧ ಇಂದ್ರ ಕುಮಾರ್ ಎಂಬಾತನ ಜೊತೆಗೂಡಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು. ಮತ್ತು ಕರಡು ಸೂಕ್ತ ಆಯಾಮ ವರದಿ ಹಂಚಿಕೊಂಡಿದ್ದಾರೆ ಎಂದು ಐವರ ವಿರುದ್ಧವೂ ವಿಚಕ್ಷಣಾ ದಳದಲ್ಲಿ ದೂರು ದಾಖಲಿಸಲಾಗಿತ್ತು.

ವಿಚಕ್ಷಣ ದಳದ ಅಧಿಕಾರಿಗಳು ಇಂದ್ರ ಕುಮಾರ್ ಮನೆಯಲ್ಲಿ ಶೋಧ ನಡೆಸಿದ ಅರ್ಜಿದಾರ ಎಂಜಿನಿಯರ್‍ಗಳು ಸಿದ್ಧಪಡಿಸಿದ್ದರು ಎನ್ನಲಾದ ಕರಡು ಸಿಡಿಆರ್ ದೊರೆತಿದ್ದವು. ನಂತರ ತನಿಖೆ ನಡೆಸಿದ್ದ ಪೊಲೀಸರು 2021ರ ಡಿಸೆಂಬರ್ 4ರಂದು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಆದರೆ, ಪ್ರಾಸಿಕ್ಯೂಷನ್‍ಗೆ ಪೂರ್ವಾನುಮತಿ ಕೋರಿ ಪೊಲೀಸರು ಸಲ್ಲಿಸಿದ್ದ ಮನವಿ ಕುರಿತಂತೆ ಸರಕಾರ (ಸಕ್ಷಮ ಪ್ರಾಧಿಕಾರ) ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಮಧ್ಯೆ ವಿಚಾರಣಾ ನ್ಯಾಯಾಲಯವು ಆರೋಪಪಟ್ಟಿಯನ್ನು ವಿಚಾರಣೆಗೆ ಪರಿಗಣಿಸಿ ಆದೇಶಿಸಿತ್ತು. ಸಕ್ಷಮ ಪ್ರಾಧಿಕಾರ ಪ್ರಾಸಿಕ್ಯೂಷನ್‍ಗೆ ಪೂರ್ವಾನುಮತಿ ನೀಡದಿದ್ದರೂ, ವಿಚಾರಣಾ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News