ಮುಂದಿನ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ: ಸಚಿವ ಬಿ.ಸಿ. ನಾಗೇಶ್

Update: 2022-04-19 12:45 GMT
 ಸಚಿವ ಬಿ.ಸಿ. ನಾಗೇಶ್

ಬೆಂಗಳೂರು, ಎ.19: ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಭಗವದ್ಗೀತೆ, ಪಂಚತಂತ್ರ ಕಥೆಗಳು, ಮಹಾಭಾರತ ಎಲ್ಲವೂ ಪಠ್ಯದಲ್ಲಿ ಇರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಯಾವ ಧರ್ಮದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಿಗೆ ಬರುತ್ತಾರೋ ಆ ಮಕ್ಕಳು ಕೇಳುವಂತಹ ವಿಚಾರಗಳನ್ನು ಅಳವಡಿಸುತ್ತೇವೆ. ಶೇ.90 ಮಕ್ಕಳು ಯಾವ ಧರ್ಮದವರಾಗಿರುತ್ತಾರೋ ಅವರು, ಆ ಧರ್ಮದ ಅಂಶಗಳು ಹೆಚ್ಚು ಇರುತ್ತವೆ ಎಂದು ಹೇಳಿದರು.

ಮದರಸಾಗಳಲ್ಲಿ ಶಿಕ್ಷಣ ಇಲಾಖೆಯ ಪಠ್ಯಕ್ರಮ ಅಳವಡಿಕೆಗೆ ಮದರಸಾಗಳಿಂದಾಗಲೀ, ಅಲ್ಪಸಂಖ್ಯಾತ ಇಲಾಖೆಯಿಂದಾಗಲೀ ಯಾವುದೇ ಮನವಿ ಬಂದಿಲ್ಲ. ಆದರೆ, ಪೋಷಕರು ಮದರಸಾ ಶಿಕ್ಷಣದಿಂದ ನಮ್ಮ ಮಕ್ಕಳು ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಆಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಕಷ್ಟ ಆಗುತ್ತಿದೆ. ಹಾಗೆಯೇ ವೃತ್ತಿಪರ ಶಿಕ್ಷಣವನ್ನು ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ. ಬೇರೆ ಮಕ್ಕಳಿಗೆ ಕೊಟ್ಟ ಹಾಗೆ ಶಿಕ್ಷಣ ಕೊಡಿ ಎಂಬ ಮನವಿ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಟಿಪ್ಪು- ಅನಗತ್ಯ ಅಂಶಗಳನ್ನು ಕೈಬಿಡಲಾಗುವುದು 

ಪಠ್ಯದಿಂದ ಟಿಪ್ಪು ಮೈಸೂರು ಹುಲಿ ಎಂಬುದನ್ನು ಕೈ ಬಿಟ್ಟಿಲ್ಲ. ಅನಗತ್ಯ ಅಂಶಗಳನ್ನು ಕೈಬಿಡಲಾಗುವುದು. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಟಿಪ್ಪು ಪಾಠವನ್ನು ಪಠ್ಯದಿಂದ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತಾಗಿ ಸಾಕ್ಷಿ ಸಹಿತ ಬೇಡಿಕೆ ಇಟ್ಟಿದ್ದಾರೆ. ಪಠ್ಯದಲ್ಲಿ ಯಾವ ಅಂಶವನ್ನು ಕೈಬಿಡಲಾಗುವುದು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. 

-ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News