ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ರಶ್ಯದಿಂದ ತೈಲ ಖರೀದಿಯನ್ನು ದ್ವಿಗುಣಗೊಳಿಸುತ್ತಿರುವ ಭಾರತ

Update: 2022-04-20 16:12 GMT

ಹೊಸದಿಲ್ಲಿ,ಎ.20: ಉಕ್ರೇನ್ ನಲ್ಲಿ ಯುದ್ಧವು ಮೂರನೇ ತಿಂಗಳನ್ನು ಸಮೀಪಿಸುತ್ತಿರುವಂತೆ ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ಭಾರತವು ಒಪೆಕ್ ತೈಲ ಉತ್ಪಾದಕ ದೇಶಗಳ ಪ್ರತಿಯೊಂದೂ ಪ್ರಮುಖ ದರ್ಜೆಯ ಉತ್ಪನ್ನವನ್ನು ಪಕ್ಕಕ್ಕೆ ತಳ್ಳಿ ರಶ್ಯದಿಂದ ಕಚ್ಚಾತೈಲ ಖರೀದಿಯನ್ನು ದ್ವಿಗುಣಗೊಳಿಸುತ್ತಿದೆ.

ಭಾರತದ ಸಂಸ್ಕರಣಾಗಾರದ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಹೇಳುವಂತೆ ಸರಕಾರಿ ಸ್ವಾಮ್ಯದ ತೈಲ ಸಂಸ್ಕರಣೆ ಕಂಪನಿಗಳು ಉತ್ತಮ ಖರೀದಿ ದರಗಳನ್ನು ಪಡೆಯಲು ಬಹಿರಂಗ ಟೆಂಡರ್‌ಗಳ ಮೂಲಕ ಕಚ್ಚಾತೈಲ ಖರೀದಿಯ ಬದಲು ಖಾಸಗಿಯಾಗಿ ಮಾತುಕತೆಗಳ ಮೂಲಕ ಖರೀದಿಯತ್ತ ಕಣ್ಣು ಹಾಯಿಸುತ್ತಿವೆ. ಭಾರತವು ಪಶ್ಚಿಮದಿಂದ ಪೂರೈಕೆಯಾಗುವ ಮುಂಚೂಣಿಯ ಉರಲ್ಸ್ ಕಚ್ಚಾತೈಲದಿಂದ ಹಿಡಿದು ಚೀನಾ ಸಾಮಾನ್ಯವಾಗಿ ಒಲವು ಹೊಂದಿರುವ ದೂರ ಪೂರ್ವದ ಅಪರೂಪದ ಇಎಸ್‌ಪಿಒವರೆಗೆ ಪ್ರತಿಯೊಂದನ್ನೂ ಖರೀದಿಸಿದೆ.

 ಭಾರತವು ರಶ್ಯದ ಜೊತೆಗೆ ಶಸ್ತ್ರಾಸ್ತ್ರ ಖರೀದಿ ಸೇರಿದಂತೆ ದೀರ್ಘಕಾಲಿಕ ಸಂಬಂಧವನ್ನು ಹೊಂದಿದ್ದು,ಈಗ ತೈಲ ಖರೀದಿಯು ಹಣಕಾಸು ನಿರ್ಬಂಧಗಳನ್ನು ಎದುರಿಸುತ್ತಿರುವ ಆ ದೇಶದ ಖಜಾನೆಯನ್ನು ತುಂಬಿಸಲು ನೆರವಾಗುತ್ತಿದೆ. ಭಾರತವು ತನ್ನ ಇಂಧನ ಆಮದುಗಳನ್ನು ವೈವಿಧ್ಯಗೊಳಿಸಲು ನೆರವಾಗಲು ತನ್ನ ದೇಶವು ಸಿದ್ಧವಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಕಳೆದ ವಾರ ಮಾತುಕತೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದರು. ಆದರೆ ಕೆಲವು ದೇಶಗಳಿಂದ ರಶ್ಯದ ಕಚ್ಚಾ ತೈಲಕ್ಕೆ ಸ್ವಯಂ ನಿರ್ಬಂಧವು ಅದನ್ನು ಅಗ್ಗ ಮತ್ತು ಆಕರ್ಷಕವನ್ನಾಗಿಸಿದೆ.

ಉಭಯ ನಾಯಕರ ಮಾತುಕತೆಗೆ ಮುನ್ನ ಈ ತಿಂಗಳ ಆರಂಭದಲ್ಲಿ ಬೈಡೆನ್ ಅವರ ಹಿರಿಯ ಆರ್ಥಿಕ ಸಲಹೆಗಾರರು ರಶ್ಯದೊಂದಿಗೆ ಒಡನಾಟದ ವಿರುದ್ಧ ಭಾರತಕ್ಕೆ ಅಮೆರಿಕವು ಎಚ್ಚರಿಕೆಯನ್ನು ನೀಡಿದೆ ಎಂದು ಹೇಳಿದ್ದರು. ಯುದ್ಧವು ಹಣದುಬ್ಬರವನ್ನು ಹೆಚ್ಚಿಸಿದೆ ಮತ್ತು ಬೆಂಚ್ಮಾರ್ಕ್ ಕಚ್ಚಾತೈಲಗಳ ವಾಯಿದಾ ದರಗಳು ಪ್ರತಿ ಬ್ಯಾರೆಲ್ ಗೆ 100 ಡಾ.ಮೀರಲು ಕಾರಣವಾಗಿದೆ.

ಭಾರತವು ಫೆಬ್ರವರಿ ಅಂತ್ಯದಿಂದ ಹಾಜರ್ ಮಾರುಕಟ್ಟೆಯಲ್ಲಿ ಮಿಲಿಯಾಂತರ ಬ್ಯಾರೆಲ್ ಉರಲ್ಸ್ ಕಚ್ಚಾತೈಲದ ಜೊತೆಗೆ ಇಎಸ್ಪಿಒ ಕಾರ್ಗೋವನ್ನೂ ಖರೀದಿಸಿದ್ದು,ಅವು ಪ್ರಸಕ್ತ ಗುಜರಾತಿನ ಜಾಮನಗರ ಜಿಲ್ಲೆಯ ಸಿಕ್ಕಾ ಬಂದರಿಗೆ ಆಗಮಿಸುತ್ತಿವೆ. ದೂರ ಪೂರ್ವ ಶ್ರೇಣಿಯ ಕಚ್ಚಾತೈಲವನ್ನು ಸಣ್ಣ ಹಡಗುಗಳಲ್ಲಿ ರವಾನಿಸಲಾಗುತ್ತದೆ ಮತ್ತು ಪಯಣವು ಹೆಚ್ಚಿನ ಸಮಯವನ್ನೂ ತೆಗೆದುಕೊಳ್ಳುತ್ತದೆ. ಹೀಗಾಗಿ ಅದು ಆರ್ಥಿಕವಾಗಿ ಲಾಭದಾಯಕವಲ್ಲ ಮತ್ತು ಭಾರತದ ತೈಲ ಸಂಸ್ಕರಣೆ ಕಂಪನಿಗಳು ಅದನ್ನು ಆಮದು ಮಾಡಿಕೊಳ್ಳುವುದು ಅಪರೂಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News