ನ್ಯಾಯ ವ್ಯವಸ್ಥೆಯ ಮೇಲೆ ಬುಲ್ಡೋಜರ್

Update: 2022-04-21 03:08 GMT

ಇನ್ನು ಮುಂದೆ ಕೋಮುಗಲಭೆಗಳನ್ನು ಮಹಾನಗರ ಪಾಲಿಕೆಗಳ ಬುಲ್ಡೋಜರ್‌ಗಳು ನಿರ್ವಹಿಸಲಿವೆ. ಪೊಲೀಸ್ ತನಿಖೆ, ನ್ಯಾಯಾಲಯ, ವಿಚಾರಣೆ ಯಾವುದರ ಅಗತ್ಯವೂ ಇಲ್ಲ. ಮಹಾನಗರ ಪಾಲಿಕೆ ಯಾರು ಅಪರಾಧಿ ಎನ್ನುವುದನ್ನು ಘೋಷಿಸುತ್ತದೆ ಮತ್ತು ಅದರ ಅಧೀನದಲ್ಲಿರುವ ಅಧಿಕಾರಿಗಳು ಬುಲ್ಡೋಜರ್‌ಗಳ ಜೊತೆಗೆ ಆರೋಪಿಗಳ ಮನೆಯನ್ನು, ಕಾಲನಿಗಳನ್ನು ಕೆಡವಿ ಹಾಕುತ್ತಾರೆ. ಈಗಾಗಲೇ ಭಾರತದ ಅರ್ಥ ವ್ಯವಸ್ಥೆಯನ್ನು ಬುಲ್ಡೋಜರ್‌ಗಳನ್ನು ಬಳಸಿ ಕೆಡವಿ ಹಾಕಲಾಗಿದೆ. ಇದೀಗ ಅಳಿದುಳಿದ ನ್ಯಾಯ ವ್ಯವಸ್ಥೆಯನ್ನು ಬುಲ್ಡೋಜರ್ ಮೂಲಕ ಕೆಡವಿ ಹಾಕುವ ಮಹತ್ತರ ಕೆಲಸವನ್ನು ನಗರ ಸಂಸ್ಥೆಗಳು ಕೈಗೆತ್ತಿಕೊಂಡಿವೆ.

ದಿಲ್ಲಿಯ ಹನುಮ ಜಯಂತಿ ಮೆರವಣಿಗೆಯ ವೇಳೆ ಘರ್ಷಣೆ ಭುಗಿಲೆದ್ದು ಪರಸ್ಪರ ಕಲ್ಲು ತೂರಾಟಗಳು ನಡೆದವು. ಈ ಹಿಂದೆ ಸಿಎಎ ಹೋರಾಟದ ಸಂದರ್ಭದಲ್ಲಿ ದಿಲ್ಲಿ ಗಲಭೆಯಲ್ಲಿ ಸಂಭವಿಸಿದ್ದೇ ಇಲ್ಲಿ ಪುನರಾವರ್ತನೆಯಾಗಿದೆ. ಪೊಲೀಸರು ಮತ್ತು ಬಿಜೆಪಿಯ ಮುಖಂಡರು ಜಂಟಿಯಾಗಿ ನಿರ್ದಿಷ್ಟ ಸಮುದಾಯದ ಜನರನ್ನು ಆರೋಪಿಗಳಾಗಿ ಗುರುತಿಸಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಮುಖಂಡನ ನಿರ್ದೇಶನದಂತೆ, ಆರೋಪಿಗಳ ಮನೆ, ಅಂಗಡಿಗಳ ಮೇಲೆ ಬುಲ್ಡೋಜರ್‌ಗಳನ್ನು ಹರಿಸಿ ಅವುಗಳನ್ನು ಧ್ವಂಸಗೊಳಿಸಲಾಗಿದೆ. ಸುಪ್ರೀಂಕೋರ್ಟ್ ಈ ಕೃತ್ಯಕ್ಕೆ ತಡೆಯೊಡ್ಡಿದ ಬಳಿಕವೂ ಈ ಧ್ವಂಸ ಕಾರ್ಯಾಚರಣೆ ಮುಂದುವರಿಯಿತು. ಬಹುತೇಕ ಬಡವರೇ ಆಗಿರುವ ಈ ಪ್ರದೇಶದ ಜನರು ಏಕಾಏಕಿ ಬೀದಿ ಪಾಲಾಗಿದ್ದಾರೆ. ಈ ಬುಲ್ಡೋಜರ್ ಕಾರ್ಯಾಚರಣೆ ಮೊದಲು ಮಧ್ಯ ಪ್ರದೇಶದಲ್ಲಿ ಸುದ್ದಿಯಾಗಿತ್ತು. ಇಲ್ಲಿನ ಖರ್ಗಾಂವ್ ನಗರದಲ್ಲಿ ರಾಮನವಮಿಯ ಸಂದರ್ಭದಲ್ಲಿ ಕೋಮುಸಂಘರ್ಷಗಳು ನಡೆದಿದ್ದವು. ಈ ಸಂಘರ್ಷದ ಬಳಿಕ ಏಕಮುಖವಾಗಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮುಸ್ಲಿಮರ ಮೇಲೆ ದಾಳಿಗಳು ನಡೆದವು. ಬುಲ್ಡೋಜರ್‌ಗಳ ಮೂಲಕ ಹಲವು ಮನೆಗಳನ್ನು ಕೆಡವಿ ಹಾಕಲಾಯಿತು. ‘ಇಲ್ಲಿ ಅಕ್ರಮ ಮನೆಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದು ಬಳಿಕ ಅಧಿಕಾರಿಗಳು ಸಮರ್ಥಿಸಲು ಮುಂದಾದರು. ಆದರೆ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಸರಕಾರದ ನೇತೃತ್ವದಲ್ಲಿ ನಡೆದ ದಾಳಿಯಾಗಿತ್ತು ಇದು.

ಸರಕಾರವೇ ನೇರವಾಗಿ ಜನರ ಮೇಲೆ ದಾಳಿ ನಡೆಸಲು ಆರಂಭವಾದುದು ಸಿಎಎ ಪ್ರತಿಭಟನೆಗಳ ಬಳಿಕ. ದಿಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಸಿಎಎ ಪ್ರತಿಭಟನೆ ತೀವ್ರಗೊಂಡಾಗ ಅದನ್ನು ದಮನಿಸುವುದಕ್ಕಾಗಿ ಇಡೀ ಸಮುದಾಯವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾರಂಭಿಸಿತು. ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಂದು ಹಾಕಲಾಯಿತು ಮಾತ್ರವಲ್ಲ, ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮನೆಗಳನ್ನು, ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಮುಂದಾಯಿತು. ಆದರೆ ನ್ಯಾಯಾಲಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಛೀಮಾರಿ ಹಾಕಿತು. ಇದೀಗ ದಿಲ್ಲಿಯಲ್ಲಿ ನಡೆದಿರುವುದು ಉತ್ತರ ಪ್ರದೇಶದ ಮಾದರಿಯೇ ಆಗಿದೆ. ಈ ದೇಶದ ಅಲ್ಪಸಂಖ್ಯಾತರು ಯಾವುದೇ ಹಿಂಸೆಗೆ, ದೌರ್ಜನ್ಯಗಳಿಗೆ ಪ್ರತಿರೋಧವನ್ನು ತೋರಿಸಬಾರದು. ಅದನ್ನು ಸಹಿಸುತ್ತಾ ಬದುಕಬೇಕು ಎನ್ನುವ ಸಂದೇಶ ಈ ಬುಲ್ಡೋಜರ್ ದಾಳಿಯಿಂದ ನೀಡಲಾಗಿದೆ.

ಯಾವುದೇ ಪ್ರತಿಭಟನೆ ನಡೆದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟಾದರೆ ಅದನ್ನು ಆರೋಪಿಗಳ ಕುಟುಂಬವೇ ಭರಿಸಬೇಕು ಎಂದು ಸರಕಾರ ಹೇಳುತ್ತದೆ. ಮಧ್ಯ ಪ್ರದೇಶದಲ್ಲಿ ಮತ್ತು ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಮಾರಂಭದ ಮೆರವಣಿಗೆ ನಡೆಸಿದವರೂ ಅಂದಿನ ಘಟನೆಗಳಿಗೆ ಮುಖ್ಯ ಕಾರಣಕರ್ತರು. ಅದರ ಆಯೋಜಕರ ಮೇಲೂ ಕ್ರಮ ತೆಗೆದುಕೊಳ್ಳುವುದು ಸರಕಾರದ ಕರ್ತವ್ಯವಾಗಿತ್ತು. ಇಕ್ಕೆಡೆಗಳಿಂದ ದಾಳಿ ನಡೆದಿದೆಯಾದರೆ ಎರಡೂ ಕಡೆಯ ದುಷ್ಕರ್ಮಿಗಳ ಮೇಲೂ ಕ್ರಮ ಕಠಿಣ ತೆಗೆದುಕೊಳ್ಳುವುದರಿಂದ ಮಾತ್ರ ಅಂತಹ ಘಟನೆಗಳು ಪುನರಾವರ್ತಿಸದಂತೆ ನೋಡಿಕೊಳ್ಳ ಬಹುದು. ಪ್ರತಿಭಟನೆ, ದಾಂಧಲೆ ನಡೆಸಿದ ದುಷ್ಕರ್ಮಿಗಳಿಂದಲೇ ಆಸ್ತಿಪಾಸ್ತಿ ನಷ್ಟವನ್ನು ಭರಿಸುವ ಮೊದಲು ಅವರ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕು. ಅದಕ್ಕೆ ಮೊದಲೇ ಅವರನ್ನು ಅಪರಾಧಿಗಳೆಂದು ಘೋಷಿಸಿ, ಅವರ ಆಸ್ತಿಪಾಸ್ತಿಯ ಮೇಲೆ ಬುಲ್ಡೋಜರ್ ಹರಿಸುವ ಹಕ್ಕು ಸರಕಾರಕ್ಕಿದೆಯೇ? ನಾಳೆ ಈ ಆರೋಪಿಗಳು ನಿರಪರಾಧಿಗಳೆಂದು ಸಾಬೀತಾದರೆ ಆ ಮನೆಗಳನ್ನು ಸರಕಾರ ಪುನರ್ ನಿರ್ಮಿಸಿ ಕೊಡುವುದೇ? ಅವರಿಗಾದ ಅನ್ಯಾಯಕ್ಕೆ ಪರಿಹಾರವನ್ನು ನೀಡುವುದೇ? ಇದೊಂದು ರೀತಿಯಲ್ಲಿ ನ್ಯಾಯ ವ್ಯವಸ್ಥೆಗೆ ಮಾಡುವ ದ್ರೋಹವಲ್ಲವೆ? ಈಗೀಗ ಎಲ್ಲ ಕೋಮುಗಲಭೆಗಳಲ್ಲೂ ಸರಕಾರದ ಭಾಗೀದಾರಿಕೆಯಿರುವುದರಿಂದ, ಇಂಥ ಬುಲ್ಡೋಜರ್‌ಗಳು ನಿರ್ದಿಷ್ಟ ಸಮುದಾಯದ ಬದುಕಿನ ಮೇಲೆ ಮಾತ್ರ ಹರಿಯುತ್ತವೆ. ಆದುದರಿಂದಲೇ, ಸಂವಿಧಾನ ವಿರೋಧಿಯಾದ ಈ ಸರಕಾರಿ ಗೂಂಡಾಗಿರಿಯನ್ನು ಜನಸಾಮಾನ್ಯರು ಒಕ್ಕೊರಲಲ್ಲಿ ಪ್ರಶ್ನಿಸಬೇಕಾಗಿದೆ.

ಒಂದು ವೇಳೆ ಆರೋಪಿಯ ಆರೋಪ ಸಾಬೀತಾಯಿತು ಎಂದೇ ಇಟ್ಟುಕೊಳ್ಳೋಣ. ಆಗಲೂ ಆತನ ಮನೆ, ಆಸ್ತಿಯನ್ನು ಮುಟ್ಟುಗೋಲು ಹಾಕುವುದು ಎಷ್ಟರ ಮಟ್ಟಿಗೆ ಸರಿ? ಯಾಕೆಂದರೆ ಆರೋಪಿ ಆರೋಪದಲ್ಲಿ ಭಾಗಿಯಾಗಿರಬಹುದು. ಆದರೆ ಆತನ ಪತ್ನಿ, ತಾಯಿ, ತಂದೆ, ಮಕ್ಕಳು ಆರೋಪದಲ್ಲಿ ಭಾಗಿಯಾಗಿರುವುದಿಲ್ಲ. ಒಬ್ಬ ಮಾಡಿದ ತಪ್ಪಿಗೆ ಇಷ್ಟೂ ಜನರಿಗೆ ಶಿಕ್ಷೆ ವಿಧಿಸುವುದು ಸರಿಯೇ? ಮನೆಯ ಹಿರಿಯನೊಬ್ಬ ಅಥವಾ ಮನೆಯ ಸದಸ್ಯ ತಪ್ಪು ಮಾಡಿದರೆ ಇಡೀ ಮನೆಯ ಮಂದಿಗೆ ಶಿಕ್ಷೆ ನೀಡಲಾಗುತ್ತದೆಯೆ? ಒಂದು ವೇಳೆ ಮನೆ, ಆಸ್ತಿಯನ್ನು ಮುಟ್ಟುಗೋಲು ಮಾಡಿದರೆ ಒಬ್ಬನ ತಪ್ಪಿಗೆ ಎಲ್ಲರಿಗೂ ಶಿಕ್ಷೆ ವಿಧಿಸಿದಂತಾಗುತ್ತದೆ. ಆದುದರಿಂದ ಈ ಸರಕಾರದ ಕ್ರಮದ ವಿರುದ್ಧ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಲಾಗಿದೆ. ನ್ಯಾಯಾಲಯವೂ ಈ ಕ್ರಮವನ್ನು ಆಕ್ಷೇಪಿಸಿದೆ. ಇನ್ನು ಬಡವರು, ಕೂಲಿ ಕಾರ್ಮಿಕರು ಬದುಕುತ್ತಿರುವ ಮನೆಗಳು, ಕೊಳೆಗೇರಿಗಳು, ಕಾಲನಿಗಳ ಮೇಲೆ ಸರಕಾರದ ಕಣ್ಣು ಬಿದ್ದಿದೆ.

ಅವುಗಳನ್ನೆಲ್ಲ ಧ್ವಂಸ ಮಾಡಿ ಅಲ್ಲಿ ಬೃಹತ್ ಕಾರ್ಪೊರೇಟ್ ಕಟ್ಟಡಗಳನ್ನು ಎಬ್ಬಿಸುವುದಕ್ಕೆ ಯೋಜನೆ ರೂಪಿಸಿದೆ. ತನ್ನ ದುರುದ್ದೇಶವನ್ನು ಈಡೇರಿಸಿಕೊಳ್ಳಲು ಕೋಮುಗಲಭೆಗಳನ್ನು ಸರಕಾರ ಬಳಸಿ ಕೊಂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಒಂದೋ ಬಡವರ ಗುಡಿಸಲುಗಳ ಮೇಲೆ ಏಕಾಏಕಿ ಬೆಂಕಿ ಬೀಳುತ್ತದೆ ಅಥವಾ ಇಂತಹ ಕೋಮುಗಲಭೆಗಳಲ್ಲಿ ಅವುಗಳು ಧ್ವಂಸವಾಗುತ್ತವೆ. ಅದೂ ಸಾಧ್ಯವಾಗದೇ ಇದ್ದರೆ, ಅಕ್ರಮದ ಹೆಸರಿನಲ್ಲಿ ಸರಕಾರವೇ ಬುಲ್ಡೋಜರ್‌ಗಳನ್ನು ಹರಿಸಿ ಧ್ವಂಸ ಮಾಡುತ್ತದೆ. ಬಡವರ ಮನೆಗಳನ್ನು ಧ್ವಂಸಗೊಳಿಸಿ, ಆ ಸ್ಥಳವನ್ನು ಸ್ವಾಧೀನಗೊಳಿಸುವ ನಗರಪಾಲಿಕೆಯ ಸಂಚಿನ ಭಾಗ ಇದಾಗಿದೆ. ಸರಕಾರ ತಕ್ಷಣ ಧ್ವಂಸಗೊಳಿಸಿದ ಮನೆಗಳನ್ನು ಮರು ನಿರ್ಮಾಣ ಮಾಡಿಕೊಡಬೇಕು. ಜೊತೆಗೆ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ಕೆಲಸವನ್ನು ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News