​ಆಂತರಿಕ ಭದ್ರತೆ ಕುರಿತು ರಾಷ್ಟ್ರೀಯ ದತ್ತಾಂಶ ಕೋಶ ಸಿದ್ಧಗೊಳ್ಳುತ್ತಿದೆ: ಶಾ

Update: 2022-04-21 18:22 GMT


ಹೊಸದಿಲ್ಲಿ,ಎ.21: ಕೇಂದ್ರವು ಆಂತರಿಕ ಭದ್ರತೆ ಕುರಿತು ರಾಷ್ಟ್ರೀಯ ದತ್ತಾಂಶ ಕೋಶವನ್ನು ರೂಪಿಸುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುರುವಾರ ಇಲ್ಲಿ ತಿಳಿಸಿದರು. ದತ್ತಾಂಶ ಕೋಶವು ಭಯೋತ್ಪಾದಕ ಕೃತ್ಯಗಳು, ಭಯೋತ್ಪಾದನೆಗೆ ಹಣಕಾಸು ನೆರವು, ಖೋಟಾನೋಟುಗಳು, ಮಾದಕ ದ್ರವ್ಯಗಳು, ಕಳ್ಳಸಾಗಣೆ ಮತ್ತು ಇಂತಹ ಹೆಚ್ಚಿನ ಅಪರಾಧಗಳ ಕುರಿತು ವಿವರಗಳನ್ನು ಒಳಗೊಂಡಿರುತ್ತದೆ.

‘ತನಿಖೆಗಳು ಇನ್ನು ಮುಂದೆ ಶಂಕಿತರಿಗೆ ಚಿತ್ರಹಿಂಸೆ ನೀಡುವ ಥರ್ಡ್-ಡಿಗ್ರಿ ಪದ್ಧತಿಯನ್ನು ಅವಲಂಬಿಸುವಂತಿಲ್ಲ. ತನಿಖೆಗಳು ಕೌಶಲ್ಯ, ದತ್ತಾಂಶ ಮತ್ತು ಮಾಹಿತಿಯನ್ನು ಅವಲಂಬಿಸಿರಬೇಕು. ನಾವು ಈ ಸುಧಾರಣೆಯನ್ನು ತರಲು ಬಯಸಿದ್ದರೆ ದತ್ತಾಂಶ ಕೋಶದ ಸೃಷ್ಟಿ ಮತ್ತು ಡಿಜಿಟಲ್ ವಿಧಿವಿಜ್ಞಾನದಲ್ಲಿ ಪರಿಣತಿಯ ಅಗತ್ಯವಿದೆ . ದತ್ತಾಂಶ ಕೋಶವು ರಾಜ್ಯ ಪೊಲೀಸ್ ಪಡೆಗಳಿಗೆ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ನೆರವಾಗಲಿದೆ ’ಎಂದು ಇಲ್ಲಿ ಡಾ.ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಎನ್ಐಎದ 13 ನೇ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದ ಶಾ ತಿಳಿಸಿದರು.
ನರೇಂದ್ರ ಮೋದಿ ಸರಕಾರವು ದೇಶದಲ್ಲಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದ ಅವರು, ಭಯೋತ್ಪಾದನೆಯು ಮಾನವ ಹಕ್ಕುಗಳ ಉಲ್ಲಂಘನೆಯ ಅತ್ಯಂತ ದೊಡ್ಡ ರೂಪವಾಗಿದೆ. ಮಾನವ ಹಕ್ಕುಗಳನ್ನು ರಕ್ಷಿಸಲು ಭಯೋತ್ಪಾದನೆಯ ಮೂಲೋತ್ಪಾಟನೆ ಅಗತ್ಯವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News