ಉಕ್ರೇನ್ ಸಂಘರ್ಷ: ಈಸ್ಟರ್ ಕದನ ವಿರಾಮ ಪ್ರಸ್ತಾವ ತಿರಸ್ಕರಿಸಿದ ರಷ್ಯಾ

Update: 2022-04-22 01:46 GMT

ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಸುಮಾರು ಎರಡು ತಿಂಗಳಾಗುತ್ತಿದ್ದು, ಯುದ್ಧಪೀಡಿತ ದೇಶ ಸುಮಾರು 60 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

"ಯುದ್ಧ ಇನ್ನೂ ನಡೆಯುತ್ತಿದ್ದು, ವೆಚ್ಚ ಹೆಚ್ಚುತ್ತಿದೆ" ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಹೇಳಿದ್ದಾರೆ. ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಂದಿಟ್ಟ ಈಸ್ಟರ್ ಕದನ ವಿರಾಮ ಪ್ರಸ್ತಾವವನ್ನು ರಷ್ಯಾ ತಿರಸ್ಕರಿಸಿದೆ.

ಆದಾಗ್ಯೂ ಶಾಂತಿ ಮರುಸ್ಥಾಪನೆಯ ವಿಶ್ವಾಸ ತಮಗಿದೆ ಎಂದು ಝೆಲೆನ್ಸ್ಕಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಹೇಳಿದ್ದಾರೆ. ಸಂಪ್ರದಾಯವಾದಿ ಕ್ರಿಶ್ಚಿಯನ್ನರ ಈಸ್ಟರ್ ಅವಧಿ ಶನಿವಾರ ತಡರಾತ್ರಿಯಿಂದ ರವಿವಾರ ಮುಂಜಾನೆವರೆಗೆ ಇರುತ್ತದೆ.

ಯುದ್ಧಪೀಡಿತ ದೇಶದ ಪುನಶ್ಚೇತನಕ್ಕೆ ತಿಂಗಳಿಗೆ 7 ಶತೋಟಿ ಡಾಲರ್ ನೆರವಿನ ಅಗತ್ಯವಿದೆ ಎಂದು ಝೆಲೆನ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ. "ಜೀವನಕ್ಕೆ ಆರ್ಥಿಕ ನೆಲೆಯಾಗಬಹುದಾದ ಉಕ್ರೇನ್‍ನ ಪ್ರತಿಯೊಂದು ವಸ್ತುಗಳನ್ನೂ ರಷ್ಯಾ ಸೇನೆ ನಾಶಪಡಿಸುವ ಗುರಿ ಹೊಂದಿದೆ. ಇದರಲ್ಲಿ ರೈಲು ಹಳಿ ಮತ್ತು ನಿಲ್ದಾಣಗಳು, ಆಹಾರ ಗೋದಾಮುಗಳು, ತೈಲ, ತೈಲ ಶುದ್ಧೀಕರಣ ಘಟಕಗಳು ಸೇರಿವೆ" ಎಂದು ವಿಶ್ವಬ್ಯಾಂಕ್ ಮತ್ತು ಐಎಂಎಫ್ ಅಧಿಕಾರಿಗಳಿಗೆ ವಿಡಿಯೊ ಲಿಂಕ್ ಮೂಲಕ ಹೇಳಿದ್ದಾರೆ.

ಯುದ್ಧಪೀಡಿತ ದೇಶಕ್ಕೆ ನೆರವು ಮುಂದುವರಿಸಿರುವ ಅಮೆರಿಕ ಹೊಸದಾಗಿ 1.3 ಶತಕೋಟಿ ಡಾಲರ್ ನೆರವು, ಹೊಸ ಶಸ್ತ್ರಾಸ್ತ್ರಗಳು ಮತ್ತು ಆರ್ಥಿಕ ನೆರವನ್ನು ಘೋಷಿಸಿದೆ. ಇದರಲ್ಲಿ 800 ದಶಲಕ್ಷ ಡಲರ್ ಸೇನಾ ನೆರವು ಕೂಡಾ ಸೇರಿದೆ.

ಈ ನಡುವೆ ಹಲವು ವಾರಗಳಿಂದ ಭೀಕರ ಕದನ ನಡೆಯುತ್ತಿರುವ ಮರಿಯೊಪೋಲ್ ಬಂದರು ನಗರದಲ್ಲಿ ಸಂಪೂರ್ಣ ವಿಜಯ ಸಾಧಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News