ನಮಗೆ ತೊಂದರೆ ನೀಡಲೆಂದು ಬಿಜೆಪಿಯಿಂದ ದ್ವೇಷ ರಾಜಕಾರಣ: ಡಿ.ಕೆ.ಶಿವಕುಮಾರ್

Update: 2022-04-22 15:19 GMT

ಬೆಂಗಳೂರು, ಎ. 22: ‘ಮೇಕೆದಾಟು ಪಾದಯಾತ್ರೆ ಸಂಬಂಧ ರಾಮನಗರ, ಕನಕಪುರ, ಬೆಂಗಳೂರಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಮಗೆ ತೊಂದರೆ ನೀಡಿ, ಕೋರ್ಟ್‍ಗೆ ಅಲೆಸಬೇಕೆಂದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ಕಲಂ 144 ಉಲ್ಲಂಘನೆ ಮಾಡಿದ್ದರು. ಅಲ್ಲಿ ಕಾನೂನು ಇರಲಿಲ್ಲವೇ? ಕಾನೂನು ಉಲ್ಲಂಘನೆ ಆಗಿಲ್ಲವೇ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಶುಕ್ರವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ನಾವು ದೇಶದ ರೈತರ ಪರವಾಗಿ ಹೋರಾಟ ಮಾಡಿದ ವಿಚಾರವಾಗಿ ನಮ್ಮ ಮೇಲೆ ದೂರು ದಾಖಲಾಗಿದ್ದು, ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾರೆಂಟ್ ಆಗಿತ್ತು. ದಾಖಲಾದ ದೂರಿನಲ್ಲಿ 2021ರ ಜನವರಿ 20ರಂದು ಫ್ರೀಡಂಪಾರ್ಕ್‍ನಲ್ಲಿ 10 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿದ್ದು, ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊದಲ ಆರೋಪಿ ನಾನಾಗಿದ್ದು, ಉಳಿದಂತೆ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಮಂಜುನಾಥ್, ಶಫಿವುಲ್ಲಾ ಹಾಗೂ ಬಸನಗೌಡ ಬಾದರ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು.

ಇದನ್ನೂ ಓದಿ... ಕೊರೋನ ನಿಯಮ ಉಲ್ಲಂಘನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ವಾರೆಂಟ್ ಜಾರಿ

ಪ್ರತಿಭಟನೆಯಲ್ಲಿ 10 ಸಾವಿರ ಜನ ಸೇರಿದ್ದರೂ ಕೇವಲ ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ. ನಾವು ಕಾನೂನು ಗೌರವಿಸಿ ಜಾಮೀನು ಪಡೆದು ಬಂದಿದ್ದೇವೆ. ಅದು ಬೇರೆ ವಿಚಾರ. ಆದರೆ ಪ್ರತಿವೊಂದು ಪ್ರಕರಣದಲ್ಲೂ ನಮ್ಮ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿದೆ. ನಾವು ಹೋರಾಟ ಮಾಡಿದ ಪರಿಣಾಮದಿಂದ ಪ್ರಧಾನಿ ಮೋದಿ ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದರು. ರಾಜ್ಯದಲ್ಲಿ ಇನ್ನೂ ಕಾಯ್ದೆ ಹಿಂಪಡೆದಿಲ್ಲ. ರೈತರ ಪರ ಧ್ವನಿ ಎತ್ತುವ ಕಾಂಗ್ರೆಸ್ ಧ್ವನಿ ಅಡಗಿಸುವ ಪ್ರಯತ್ನ ಇದಾಗಿದೆ' ಎಂದು ವಾಗ್ದಾಳಿ ನಡೆಸಿದರು.

‘ಇನ್ನು ಪಿಎಸ್ಸೈ ನೇಮಕಾತಿ ಹಗರಣ ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ನಾವೇ ಇದನ್ನು ಮೊದಲು ಬೆಳಕಿಗೆ ತಂದಿದ್ದೇವೆ. ಈ ಹಗರಣ ನಡೆದ ಶಿಕ್ಷಣ ಸಂಸ್ಥೆ ಸಂಸ್ಥಾಪಕರು ಗೃಹ ಸಚಿವರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ಪರೀಕ್ಷೆ ಬರೆದ 52 ಸಾವಿರ ಅಭ್ಯರ್ಥಿಗಳಿಗೆ ವಂಚನೆ ಆಗಿದೆ. ಪ್ರತಿ ಹುದ್ದೆಗೆ 70ರಿಂದ 80 ಲಕ್ಷ ರೂ.ಹಣ ಕೊಟ್ಟಿರುವ ವರದಿ ಬಂದಿದೆ. ಇದೊಂದು ಭ್ರಷ್ಟ ಸರಕಾರ. ಈ ಸರಕಾರ ಕೋವಿಡ್ ಬೆಡ್, ಔಷಧಿ, ನೇಮಕಾತಿ, ಮಠಗಳಿಂದಲೂ ಕಮಿಷನ್‍ನಿಂದ ಹಿಡಿದು, ಬೆಂಗಳೂರು ಪಾಲಿಕೆ ಕಸ ಗುಡಿಸುವ ವಿಚಾರದವರೆಗೂ ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News