ಶೇ.40ರಷ್ಟು ಕಮಿಷನ್, ಬಿಟ್ ಕಾಯಿನ್ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಎಡ ಪಕ್ಷಗಳಿಂದ ಒತ್ತಾಯ

Update: 2022-04-22 14:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.22: ಕಾಮಗಾರಿ, ಗೋಶಾಲೆಗಳಿಗೆ ಮೇವು ಸೇರಿದಂತೆ ಮಠಗಳಿಗೆ ನೀಡುವ ಅನುದಾನದಲ್ಲಿ ಶೇ.40 ಕಮಿಷನ್ ಭ್ರಷ್ಟಾಚಾರವನ್ನು ಹಾಗೂ ರಾಜ್ಯದ ಪ್ರಭಾವಿ ರಾಜಕಾರಿಣಿಗಳು ಮತ್ತವರ ಮಕ್ಕಳು ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿರುವ ಬಿಟ್ ಕಾಯಿನ್ ಲೂಟಿಯನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕು ಇಲ್ಲವೇ ಅಧಿಕಾರ ಬಿಟ್ಟು ತೊಲಗಬೇಕು ಎಂದು ಸರಕಾರವನ್ನು ಎಡ ಮತ್ತು ಪ್ರಜಾಸತ್ತಾತ್ಮಕ ಏಳು ಪಕ್ಷಗಳು ಒತ್ತಾಯಿಸಿವೆ. 

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಸಿಪಿಐಎಂನ ಕಾರ್ಯದರ್ಶಿ ಯು. ಬಸವರಾಜ ಅವರು ಮಾತನಾಡಿ, ಪ್ರತಿಯೊಂದು ಗುತ್ತಿಗೆ ಕೆಲಸದಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಒಟ್ಟು ಕಾಮಗಾರಿಯ ಶೇ.40 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಇದರಿಂದ ಕಾಮಗಾರಿ ನಿರ್ವಹಣೆಗೆ, ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗಿದೆ. ಇದನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ದೇಶದ ಪ್ರಧಾನ ಮಂತ್ರಿಗಳಿಗೆ ಕಳೆದ ಐದಾರು ತಿಂಗಳುಗಳ ಹಿಂದೆಯೇ ಬಹಿರಂಗ ಪತ್ರ ಬರೆದು ಒತ್ತಾಯಿಸಿದೆ. ಆದರೂ ರಾಜ್ಯ ಬಿಜೆಪಿ ಸರಕಾರ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಗುತ್ತಿಗೆ ಕಾಮಗಾರಿಯ ಶೇ.40 ಕಮಿಷನ್ ಒತ್ತಡದಿಂದ ಉಂಟಾದ ಸಾಲದ ಬಾಧೆಯೇ ತನ್ನ ಆತ್ಮಹತ್ಯೆಗೆ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ ಮತ್ತು ಈಶ್ವರಪ್ಪರವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಿದ, ಅವರು ಗೋಶಾಲೆಗಳಿಗೆ ಮೇವು ಒದಗಿಸುವ ಗುತ್ತಿಗೆದಾರರು ಮತ್ತು ಮಠಾಧೀಶರುಗಳು ಮಠಗಳಿಗೆ ನೀಡುವ ಅನುದಾನದಲ್ಲೂ ಈ ಕಮಿಷನ್ ವ್ಯವಹಾರವು ಬಹಿರಂಗವಾಗಿದೆ ಎಂದು ಹೇಳಿದರು.

ಸಿಪಿಐ(ಎಂಎಲ್)ನ ಕಾರ್ಯದರ್ಶಿ ಕ್ಲಿಫ್ಟನ್ ರೋಜಾರಿಯೋ ಅವರು ಮಾತನಾಡಿ, ದಶಸಾವಿರ ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಹಣಕಾಸು ಸಂಸ್ಥೆಗಳ ಸರ್ವರ್‍ಗಳ ಹ್ಯಾಕಿಂಗ್ ಹಗರಣದಲ್ಲಿ ಪಾಲ್ಗೊಂಡ ಆರೋಪಿಯು, ರಾಜ್ಯ ಸರಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಸರ್ವರ್‍ಗಳಿಗೆ ಕನ್ನ ಹಾಕಿ ಅಪಾರ ಪ್ರಮಾಣದ ಹಣವನ್ನು ಲಪಟಾಯಿಸಿರುವುದು ಮತ್ತು ಈತನ ಜೊತೆ ರಾಜ್ಯದ ಕೆಲ ಪ್ರಭಾವಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಕೈ ಜೋಡಿಸಿ ಪಾಲು ಪಡೆದಿರುವುದು ಈಗಾಗಲೇ ಬಯಲಾಗಿದೆ. ಜನ್‍ಧನ ಖಾತೆಯೊಂದರಿಂದಲೇ ಸುಮಾರು 6,000 ಕೋಟಿ ರೂ. ಲಪಟಾಯಿಸಲಾಗಿದೆ ಆದರೂ ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.

ಆರ್‍ಪಿಐನ ಅಧ್ಯಕ್ಷ ಮೋಹನ್ ರಾಜ್ ಅವರು ಮಾತನಾಡಿ, ರಾಜ್ಯ ಸರಕಾರದ ವಿವಿಧ ಇಲಾಖೆಗಳು ಸೇರಿದಂತೆ ಅಭಿವೃದ್ದಿ ನಿಗಮಗಳಲ್ಲಿಯೂ ಭ್ರಷ್ಟಾಚಾರ, ದುರಾಡಳಿತ ವ್ಯಾಪಕವಾಗಿದೆ. ಬಹುತೇಕ ಶಾಸಕರ ಹಿಂಬಾಲಕರು ದೊಡ್ಡ ಪ್ರಮಾಣದ ಲಂಚ ನೀಡುವವರಾಗಿದ್ದಾರೆ. ನಿಜ ಫಲಾನುಭವಿಗಳು ಶಾಸಕರ ಕೃಪೆಯಿಲ್ಲದೇ, ಲಂಚ ನೀಡಲಾಗದೇ ಕಚೇರಿಗಳಿಗೆ ಅಲೆದು ಅತಂತ್ರರಾಗಿದ್ದಾರೆ ಎಂದು ಹೇಳಿದರು. 

ಗೋಷ್ಠಿಯಲ್ಲಿ ಎಸ್‍ಯುಸಿಐನ ಕಾರ್ಯದರ್ಶಿ ಕೆ. ಉಮಾ, ಸ್ವರಾಜ್ ಇಂಡಿಯಾ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ಬಿಜೆಪಿ ಸರಕಾರವು ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ದೂಡಿದೆ. ಈ ಎಲ್ಲಾ ಭ್ರಷ್ಟಾಚಾರವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಿ ನಿಯಂತ್ರಿಸಲು ಕ್ರಮವಹಿಸಬೇಕು. ಹಾಗೆಯೇ ಈ ಭ್ರಷ್ಟಾಚಾರಕ್ಕೆ ತಮ್ಮದೇ ಸರಕಾರ ಮತ್ತು ಮಂತ್ರಿಮಂಡಲವೇ ನೇರ ಹೊಣೆ ಆಗಿರುವುದರಿಂದ ತಕ್ಷಣವೇ ರಾಜೀನಾಮೆ ನೀಡಿ, ಜನರಿಂದ ಮರಳಿ ಆದೇಶ ಪಡೆಯಲು ಚುನಾವಣೆಗೆ ಮುಂದಾಗಬೇಕು.

-ಜಿ.ಆರ್. ಶಿವಶಂಕರ್, ಎಐಎಫ್‍ಬಿಯ ಕಾರ್ಯದರ್ಶಿ 

ಗಂಗಾ ಕಲ್ಯಾಣ ಯೋಜನೆಯಲ್ಲಿ ಸಾವಿರಾರು ಕೋಟಿ ರೂ.ಗಳ ಭಾರೀ ಪ್ರಮಾಣದ ಅವ್ಯವಹಾರ ಮತ್ತು ಭ್ರಷ್ಟಾಚಾರವನ್ನು ಸರಕಾರ ರಚಿಸಿದ ಸದನ ಸಮಿತಿಯೇ ಬಹಿರಂಗ ಪಡಿಸಿದೆ. ಆಸ್ತಿ-ಪಾಸ್ತಿಗಳ ವರ್ಗಾವಣೆ ಮತ್ತು ಪಾಲು ವಿಭಾಗದ ಸಂದರ್ಭಗಳಲ್ಲಿಯೂ, ಭೂಮಿಗಳ ಸರ್ವೇ ಮಾಡಿಸುವಾಗಲೂ, ರೈತರೂ ಸೇರಿದಂತೆ ಎಲ್ಲ ನಾಗರಿಕರು ತೀವ್ರ ಆಕ್ರೋಶಗೊಂಡಿದ್ದಾರೆ. ಕಂದಾಯ ಇಲಾಖೆಯು ಭ್ರಷ್ಟರಿಂದ ಕೂಡಿದೆ. ಪೊಲೀಸ್ ಇಲಾಖೆಯು ಸೇರಿದಂತೆ ಇತರೆಲ್ಲಾ ಇಲಾಖೆಗಳು ಇದರಿಂದ ಹೊರತಲ್ಲ.

-ಮೋಹನ್ ರಾಜ್, ಆರ್‍ಪಿಐನ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News