ಜಾಮೀನು ನಿರಾಕರಣೆ ಪ್ರಶ್ನಿಸಿ ಉಮರ್ ಖಾಲಿದ್ ಮೇಲ್ಮನವಿ: ದಿಲ್ಲಿ ಪೊಲೀಸರಿಗೆ ಉಚ್ಚ ನ್ಯಾಯಾಲಯದಿಂದ ನೋಟಿಸ್

Update: 2022-04-22 15:07 GMT
Photo: PTI

ಹೊಸದಿಲ್ಲಿ,ಎ,22: ಈಶಾನ್ಯ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಒಳಸಂಚು ಪ್ರಕರಣದಲ್ಲಿ ತನಗೆ ಜಾಮೀನು ನಿರಾಕರಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜೆಎನ್‌ಯುದ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸಲ್ಲಿಸಿರುವ ಮೇಲ್ಮನವಿ ಕುರಿತು ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ದಿಲ್ಲಿ ಪೊಲೀಸರಿಗೆ ನೋಟಿಸನ್ನು ಹೊರಡಿಸಿದೆ.

ಒಳಸಂಚು ಪ್ರಕರಣದಲ್ಲಿ ಆರೋಪಿಯಾಗಿರುವ ಖಾಲಿದ್‌ರನ್ನು ಐಪಿಸಿಯ ವಿವಿಧ ಕಲಮ್‌ಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ 2020,ಸೆ.13ರಂದು ಬಂಧಿಸಲಾಗಿತ್ತು.

ಅರ್ಜಿಗೆ ಉತ್ತರಿಸುವಂತೆ ತನಿಖಾ ಸಂಸ್ಥೆಗೆ ನಿರ್ದೇಶ ನೀಡಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಎ.27ಕ್ಕೆ ನಿಗದಿಗೊಳಿಸಿದೆ.

ಖಾಲಿದ್ ಭಾಷಣದ ಸಂಬಂಧಿತ ಭಾಗವನ್ನು ಆಲಿಸಿದ ನ್ಯಾಯಾಲಯವು,‘ಶಹೀದ್ ಭಗತ್ ಸಿಂಗ್ ಮತ್ತು ಮಹಾತ್ಮಾ ಗಾಂಧಿಯವರು ಎಂದಾದರೂ ಇಂತಹ ಭಾಷೆಯನ್ನು ಬಳಸಿದ್ದರೇ? ಮುಕ್ತ ಭಾಷಣಕ್ಕೆ ಅನುಮತಿ ನೀಡಲು ನಮಗೆ ಯಾವುದೇ ಸಮಸ್ಯೆಯಿಲ್ಲ,ಆದರೆ ನೀವು ಹೇಳಿದ್ದೇನು? ಇದೆಲ್ಲವೂ ಅವಮಾನಕಾರಿ ಮತ್ತು ಅಸಹ್ಯಕರವಾಗಿದೆ. ನಿಮ್ಮ ಅಭಿವ್ಯಕ್ತಿಗಳು ಜನರನ್ನು ಅವಮಾನಿಸಿವೆ ಎಂದು ನೀವು ಭಾವಿಸಿಲ್ಲವೇ? ಅದು ಹೆಚ್ಚುಕಡಿಮೆ ಒಂದು ಸಮುದಾಯವು ಮಾತ್ರ ಭಾರತದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿತ್ತು ಎಂಬ ಭಾವನೆಯನ್ನು ನಮ್ಮ ಮೇಲೆ ಉಂಟು ಮಾಡುವಂತಿದೆ’ ಎಂದು ಹೇಳಿತು.

2022,ಮಾ.24ರಂದು ಖಾಲಿದ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ವಿಚಾರಣಾ ನ್ಯಾಯಾಲಯವು,ಅವರ ವಿರುದ್ಧದ ಆರೋಪವು ಮೇಲ್ನೋಟಕ್ಕೆ ನಿಜವಾಗಿದೆ ಎಂದು ನಂಬಲು ಕಾರಣಗಳಿವೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News