ರಶ್ಯ ಬೆಂಬಲಿಸಿದರೆ ತೀವ್ರ ಪರಿಣಾಮ: ಚೀನಾಕ್ಕೆ ಅಮೆರಿಕ ಎಚ್ಚರಿಕೆ; ಭಾರತಕ್ಕೆ ನೆರವಿನ ವಾಗ್ದಾನ

Update: 2022-04-22 16:29 GMT
Photo: PTI

ಬ್ರಸೆಲ್ಸ್, ಎ.22: ರಶ್ಯಕ್ಕೆ ವಸ್ತುರೂಪದ ಬೆಂಬಲ ಒದಗಿಸಿದರೆ ತೀವ್ರ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿರುವ ಅಮೆರಿಕದ ವಿದೇಶಾಂಗ ಸಚಿವಾಲಯದ ಸಹಾಯಕ ಕಾರ್ಯದರ್ಶಿ ವೆಂಡಿ ಶೆರ್ಮನ್, ಭಾರತಕ್ಕೆ ನೆರವು ಮುಂದುರಿಸುವುದಾಗಿ ಭರವಸೆ ನೀಡಿದ್ದಾರೆ.

 ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಯೂನಿಯನ್ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಮಾತನಾಡಿದ ಶೆರ್ಮನ್, ಉಕ್ರೇನ್ ವಿಷಯಕ್ಕೆ ಸಂಬಂಧಿಸಿ ತಪ್ಪು ಮಾಹಿತಿ ಪ್ರಸಾರ ಮಾಡುತ್ತಿರುವ ರಶ್ಯಕ್ಕೆ ಚೀನಾ ಬೆಂಬಲ ನೀಡುತ್ತಿದೆ. ರಶ್ಯದ ಯುದ್ಧದಿಂದ ಚೀನಾ ಸೂಕ್ತ ಪಾಠ ಕಲಿಯುತ್ತದೆ ಮತ್ತು ಅಮೆರಿಕವನ್ನು ಅದರ ಮಿತ್ರರಾಷ್ಟ್ರಗಳಿಂದ ಪ್ರತ್ಯೇಕಿಸುವ ಪ್ರಯತ್ನ ಫಲಿಸುವುದಿಲ್ಲ ಎಂಬುದನ್ನು ಅರಿತುಕೊಳ್ಳುವುದಾಗಿ ಆಶಿಸುತ್ತೇನೆ ಎಂದರು.

  ನಿರ್ಬಂಧ, ರಫ್ತು ನಿಯಂತ್ರಣ, ನಿಯೋಜನೆ ಸೇರಿದಂತೆ ರಶ್ಯಕ್ಕೆ ಯಾವ ರೀತಿ ತಿರುಗೇಟು ನೀಡಿದ್ದೇವೆ ಎಂಬುದನ್ನು ಚೀನಾ ಗಮನಿಸಿದೆ. ಆದ್ದರಿಂದ ರಶ್ಯಕ್ಕೆ ವಸ್ತು ರೂಪದ ಬೆಂಬಲ ಒದಗಿಸಿದರೆ ಅದರ ವಿರುದ್ಧ ಕೈಗೊಳ್ಳಲಿರುವ ಕ್ರಮದ ಪಟ್ಟಿಯ ಬಗ್ಗೆ ಅವರಿಗೆ ತಿಳಿದಿದೆ ಎಂದವರು ಹೇಳಿದರು. ರಶ್ಯದೊಂದಿಗಿನ ಕಾರ್ಯತಂತ್ರದ ಸಂಬಂಧವನ್ನು ಬಲಿಷ್ಟಗೊಳಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಚೀನಾ ಇತ್ತೀಚೆಗೆ ಹೇಳಿಕೆ ನೀಡಿತ್ತು.

ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಚೀನಾದ ನಿಲುವನ್ನೇ ಭಾರತವೂ ತಳೆದಿದೆ. ಕದನ ವಿರಾಮದ ಆಗ್ರಹಕ್ಕೆ ಬೆಂಬಲ ನೀಡುವ ಜತೆಗೆ, ರಶ್ಯವನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಮೇಲಿನ ಮತಾನದಿಂದ ದೂರ ಉಳಿಯುತ್ತಾ ಬಂದಿದೆ.

     ರಶ್ಯದ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆಯನ್ನು ಕ್ರಮೇಣ ಕಡಿಮೆಗೊಳಿಸುತ್ತಾ ಹೋಗುವ ನಿಟ್ಟಿನಲ್ಲಿ ಭಾರತಕ್ಕೆ ಬೆಂಬಲ ನೀಡಲು ಅಮೆರಿಕ ಕಾರ್ಯಕ್ರಮ ರೂಪಿಸಲಿದೆ. ರಶ್ಯದ ಶಸ್ತ್ರಾಸ್ತ್ರದಿಂದ ರೂಪಿತಗೊಂಡಿರುವ ತಮ್ಮ ರಕ್ಷಣಾ ವ್ಯವಸ್ಥೆಗೆ ಯಾವುದೇ ಭವಿಷ್ಯವಿಲ್ಲ ಎಂಬುದನ್ನು ಭಾರತ ಅರಿತುಕೊಳ್ಳಲಿದೆ. ಯಾಕೆಂದರೆ ರಶ್ಯದ ಶಸ್ತ್ರಾಸ್ತ್ರ ನಿರ್ಮಾಣ ಕಾರ್ಖಾನೆಯ ಮೇಲೂ ನಮ್ಮ ನಿರ್ಬಂಧ ಜಾರಿಯಾಗಿದೆ ಎಂದು ಶರ್ಮನ್ ಹೇಳಿದರು. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾದಿಂದ ಎದುರಾಗುವ ಬೆದರಿಕೆಯ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತೆ ಖಾತರಿಪಡಿಸಲು ರಶ್ಯದ ಶಸ್ತ್ರಾಸ್ತ್ರ ಅತ್ಯಗತ್ಯವಾಗಿದೆ. ಇತರ ಪರ್ಯಾಯ ವ್ಯವಸ್ಥೆ ದುಬಾರಿಯಾಗುತ್ತದೆ ಎಂದಿದ್ದರು.

ಈ ಮಧ್ಯೆ, ರಶ್ಯದೊಂದಿಗಿನ ಸ್ನೇಹ ಸಂಬಂಧವು ಝೆಕ್ ಗಣರಾಜ್ಯದೊಂದಿಗಿನ ಬಾಂಧವ್ಯಕ್ಕೆ ಅಡ್ಡಿಯಾಗಬಹುದು ಎಂದು ಝೆಕೊಸ್ಲಾವಾಕಿಯಾದ ಸಹಾಯಕ ವಿದೇಶ ಸಚಿವ ಮಾರ್ಟಿನ್ ತ್ಲಾಪ ಚೀನಾವನ್ನು ಎಚ್ಚರಿಸಿದ್ದಾರೆ. ಝೆಕೊಸ್ಲಾವಾಕಿಯಾದೊಂದಿಗೆ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ತೀವ್ರ ಪ್ರಯತ್ನ ನಡೆಸುತ್ತಿರುವ ಚೀನಾ ತನ್ನ ನಿಯೋಗವನ್ನು ಆ ದೇಶಕ್ಕೆ ರವಾನಿಸಿದೆ. ಕೇಂದ್ರ ಮತ್ತು ಪೂರ್ವ ಯುರೋಪ್ ವ್ಯವಹಾರಕ್ಕೆ ಸಂಬಂಧಿಸಿದ ಚೀನಾದ ವಿಶೇಷ ಪ್ರತಿನಿಧಿ ಹುವೊ ಯುಝೆನ್ ನೇತೃತ್ವದ ನಿಯೋಗವನ್ನು ಭೇಟಿಯಾದ ಮಾರ್ಟಿನ್ ತ್ಲಾಪ ಈ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News