ಹಿಜಾಬ್‌ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್‌ ಸಮ್ಮತಿ

Update: 2022-04-26 16:28 GMT

ಹೊಸದಿಲ್ಲಿ,ಎ.26: ಹಿಜಾಬ್ ನಿಷೇಧ ವಿಷಯದಲ್ಲಿ ಕರ್ನಾಟಕ ಸರಕಾರದ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಶೀಘ್ರವೇ ನಡೆಸುವುದಾಗಿ ಮಂಗಳವಾರ ತಿಳಿಸಿದ ಸರ್ವೋಚ್ಚ ನ್ಯಾಯಾಲಯವು,‌ ಕೊಂಚ ಕಾಯುವಂತೆ ತುರ್ತು ವಿಚಾರಣೆಯನ್ನು ಕೋರಿದ್ದ ವಕೀಲರಿಗೆ ಸೂಚಿಸಿತು.

‘ನಾವು ಅದನ್ನು ವಿಚಾರಣೆಗೆ ಪಟ್ಟಿ ಮಾಡುತ್ತೇವೆ. ಎರಡು ದಿನಗಳ ಕಾಲ ಕಾಯಿರಿ ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ವಿಷಯವನ್ನು ಉಲ್ಲೇಖಿಸಿದ್ದ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಅವರಿಗೆ ತಿಳಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳು ಮತ್ತು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಿಂದ ಮೇಲ್ಮನವಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿವೆ. ಹಿಜಾಬ್ ಧರಿಸುವ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶವನ್ನು ನಿರಾಕರಿಸಲಾಗುತ್ತಿದೆ ಎಂದು ತುರ್ತು ವಿಚಾರಣೆಯನ್ನು ಕೋರಿದ್ದ ಅರ್ಜಿಯಲ್ಲಿ ಮೇಲ್ಮನವಿದಾರರು ತಿಳಿಸಿದ್ದರು.

ಹಿಜಾಬ್ ಧರಿಸುವುದು ಇಸ್ಲಾಮ್‌ನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಸಂವಿಧಾನದ 25ನೇ ವಿಧಿಯಡಿ ಧಾರ್ಮಿಕ ಸ್ವಾತಂತ್ರವು ನ್ಯಾಯಸಮ್ಮತ ನಿರ್ಬಂಧಗಳಿಗೆ ಒಳಪಟ್ಟಿದೆ ಎಂದು ಮಾ.15ರಂದು ತನ್ನ ಆದೇಶದಲ್ಲಿ ಹೇಳಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣಪೀಠವು,ತರಗತಿಗಳಲ್ಲಿ ಸ್ಕಾರ್ಫ್‌ಗಳನ್ನು ಧರಿಸುವ ಹಕ್ಕು ಕೋರಿ ಉಡುಪಿಯ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು.

ಸಮವಸ್ತ್ರಗಳನ್ನು ನಿಗದಿಗೊಳಿಸಿರುವ ಸರಕಾರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಬಹುದು ಎಂಬ ಕರ್ನಾಟಕ ಸರಕಾರದ ಫೆ.5ರ ಆದೇಶವನ್ನೂ ಎತ್ತಿಹಿಡಿದಿದ್ದ ಉಚ್ಚ ನ್ಯಾಯಾಲಯವು, ನಿಯಮಗಳಂತೆ ಕಾಲೇಜು ಸಮವಸ್ತ್ರಗಳಿಗೆ ಇಂತಹ ನಿರ್ಬಂಧಗಳು ಸಾಂವಿಧಾನಿಕ ಅನುಮತಿಯನ್ನು ಹೊಂದಿವೆ ಎಂದು ಸ್ಪಷ್ಟಪಡಿಸಿತ್ತು.

ಮೇಲ್ಮನವಿಗಳ ತುರ್ತು ವಿಚಾರಣೆಯನ್ನು ನಡೆಸಬೇಕು,ಇಲ್ಲದಿದ್ದರೆ ವಿದ್ಯಾರ್ಥಿನಿಯರಿಗೆ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಕಳೆದ ತಿಂಗಳು ಮಾಡಿಕೊಳ್ಳಲಾಗಿದ್ದ ಮನವಿಗೆ ಪ್ರತಿಕ್ರಿಯಿಸಿದ್ದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಮಣ,ಅವರು ಇದಕ್ಕೂ ಪರೀಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರಲ್ಲದೆ,ವಿಷಯವನ್ನು ಸೂಕ್ಷ್ಮಗೊಳಿಸದಂತೆ ಕಕ್ಷಿದಾರರಿಗೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News