ಕೊರೋನ ನಾಲ್ಕನೇ ಅಲೆ ಮತ್ತು ಮೊಸಳೆ ಬಂತು ಮೊಸಳೆ ಕತೆ!

Update: 2022-04-27 03:39 GMT

ಒಮಿಕ್ರಾನ್ ಹೆಸರಿನಲ್ಲಿ ಮತ್ತೆ ಲಾಕ್‌ಡೌನ್ ಹೇರುವುದಕ್ಕೆ ಸಕಲ ಪ್ರಯತ್ನ ನಡೆದಿದ್ದರೂ, ಬಳಿಕ ತಮ್ಮವರಿಂದಲೇ ತೀವ್ರ ಆಕ್ಷೇಪ ಎದ್ದುದರಿಂದ ಸರಕಾರ ಹಿಂದೆ ಸರಿದಿತ್ತು. ಲಾಕ್‌ಡೌನ್ ವಿಷಯ ಎತ್ತುತ್ತಿದ್ದಂತೆಯೇ ಸಾರ್ವಜನಿಕರು ಜಾಗೃತರಾಗಿ ಸರಕಾರದ ಕ್ರಮವನ್ನು ಪ್ರಶ್ನಿಸತೊಡಗಿದರು. ಕೊರೋನ, ಒಮಿಕ್ರಾನ್ ಹೆಸರಿನಲ್ಲಿ ಕೆಲವು ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆಯನ್ನು ಸಾಧಿಸುತ್ತಿರುವುದು ಜನರ ಗಮನಕ್ಕೂ ಬಂದಿತ್ತು. ಕಾರ್ಪೊರೇಟ್ ಆಸ್ಪತ್ರೆಗಳ ಮಾಫಿಯಾ, ಲಸಿಕೋದ್ಯಮಗಳು ಲಾಕ್‌ಡೌನ್‌ನ್ನು ಬಳಸಿಕೊಂಡು ಜನಸಾಮಾನ್ಯರನ್ನು ಬ್ಲಾಕ್‌ಮೇಲ್ ಮಾಡುತ್ತಿವೆ ಎಂದು ಜನರು ಆರೋಪಿಸತೊಡಗಿದರು ಮಾತ್ರವಲ್ಲ, ಸರಕಾರದ ವಿರುದ್ಧ ಪ್ರತಿಭಟನೆಗೂ ಇಳಿದರು. ಯಾವಾಗ ಲಾಕ್‌ಡೌನ್ ವಿರುದ್ಧ ಜನರು ಜಾಗೃತಿಯಾದರೋ ಒಮ್ಮಿಂದೊಮ್ಮೆ 'ಒಮಿಕ್ರಾನ್' ಪರಾರಿಯಾಗಿ ಬಿಟ್ಟಿತು. ಎಂದು ಸರಕಾರ ಒಂದೊಂದೇ ನಿರ್ಬಂಧಗಳನ್ನು ಹಿಂದೆಗೆದುಕೊಂಡಿತ್ತು.

ಇದೀಗ ಬೂಸ್ಟರ್ ಡೋಸ್ ಮಾರುಕಟ್ಟೆಗೆ ಇಳಿದ ಬೆನ್ನಿಗೇ ಕೊರೋನ ಕೂಡ ಬೀದಿಗೆ ಇಳಿದಿದೆ. ಈ ಕೊರೋನಕ್ಕೆ ರಾಜಕೀಯ ಪ್ರಜ್ಞೆ ತುಂಬಾ ಚೆನ್ನಾಗಿದೆ. ಹಾಗೆಯೇ ಇದಕ್ಕೆ ಲಸಿಕಾ ಕಂಪೆನಿಗಳ ಜೊತೆಗೆ ಪಾಲುದಾರಿಕೆಯೂ ಇದ್ದಂತಿದೆ. ಇತ್ತೀಚಿನ ಯಾವುದೇ ಚುನಾವಣೆಗಳ ಸಂದರ್ಭಗಳಲ್ಲಿ ಕೊರೋನ ಯಾರಿಗೂ ಯಾವುದೇ ಸಮಸ್ಯೆಯನ್ನು ಸೃಷ್ಟಿಸಲಿಲ್ಲ. ಮುಖಕ್ಕೆ ಮಾಸ್ಕ್ ಬೇಕಾಗಿರಲಿಲ್ಲ, ಸುರಕ್ಷಾ ಅಂತರವನ್ನು ಕಾಪಾಡಬೇಕಾಗಿರಲಿಲ್ಲ. ಈ ದೇಶಕ್ಕೆ ಚುನಾವಣೆ ಎಷ್ಟು ಮುಖ್ಯ ಎನ್ನುವುದು ಕೊರೋನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಹಾಗೆಯೇ ಯಾವ ಲಸಿಕೆ ಕಂಪೆನಿಗಳಾಗಲಿ, ಅವುಗಳ ಜೊತೆಗೆ ಶೇ.40 ಕಮಿಷನ್ ಪಡೆದು ಹೊಂದಾಣಿಕೆ ಮಾಡಿಕೊಂಡ ರಾಜಕಾರಣಿಗಳಾಗಲಿ ನಷ್ಟಕ್ಕೀಡಾಗಬಾರದು ಎನ್ನುವ ಅರ್ಥಶಾಸ್ತ್ರವನ್ನೂ ಈ ಕೊರೋನ ಚೆನ್ನಾಗಿ ಜೀರ್ಣ ಮಾಡಿಕೊಂಡಂತಿದೆ. ಆದುದರಿಂದಲೇ ಲಸಿಕೆ ಮಾರುಕಟ್ಟೆಗೆ ಬಂದಾಕ್ಷಣ, ಕೊರೋನ ಸದ್ದು ಮಾಡುತ್ತದೆ. ತಮಾಷೆಯೆಂದರೆ, ಇಂದಿಗೂ ಗ್ರಾಮೀಣ ಪ್ರದೇಶದ ಅಸಂಖ್ಯೆಯ ಜನರು ಈ ಕೊರೋನದ ಬಗ್ಗೆ ಯಾವ ಮಾಹಿತಿಯೂ ಇಲ್ಲದೆ ತಮ್ಮಷ್ಟಕ್ಕೆ ತಾವು ಆರೋಗ್ಯವಾಗಿ ಬದುಕುತ್ತಿದ್ದಾರೆ. ಯಾವಾಗ ಸರಕಾರ ನಿರ್ಬಂಧಗಳನ್ನು ವಿಧಿಸುತ್ತಾ ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ಹಸ್ತಕ್ಷೇಪ ನಡೆಸಲಾರಂಭಿಸುತ್ತದೋ ಆಗ ಕೊರೋನ ಜನರನ್ನು ಬೇರೆ ಬೇರೆ ರೂಪದಲ್ಲಿ ಕಾಡ ತೊಡಗುತ್ತದೆ. ಇದೀಗ ಕೊರೋನ ನಾಲ್ಕನೆಯ ಅಲೆಯ ರೂಪದಲ್ಲಿ ಬರಲಿದ್ದೇನೆ ಎಂದು ಸರಕಾರಕ್ಕೆ 'ವಾಟ್ಸ್‌ಆ್ಯಪ್' ಮಾಡಿದೆ. ಆದುದರಿಂದ ಸರಕಾರ ಸಾರ್ವಜನಿಕರ ಮೇಲೆ ನಿರ್ಬಂಧಗಳನ್ನು ಹೇರಲು ತುದಿಗಾಲಿನಲ್ಲಿ ನಿಂತಿದೆ. 'ಮುನ್ನೆಚ್ಚರಿಕಾ ಡೋಸ್ ಲಸಿಕೆ ಪಡೆಯಿರಿ' ಎಂದೂ ಡಂಗುರ ಸಾರುತ್ತಿದೆ.

ಕೊರೋನ ಎಂದರೆ ಏನು, ಅದರ ಜೊತೆಗೆ ಹೇಗೆ ಬದುಕಬೇಕು ಎನ್ನುವುದನ್ನು ಈಗಾಗಲೇ ಜನಸಾಮಾನ್ಯರು ಕಲಿತುಕೊಂಡಿದ್ದಾರೆ. ಅದರ ಬಗ್ಗೆ ಅನಗತ್ಯ ಗಾಬರಿ ಪಡುವುದನ್ನು ನಿಲ್ಲಿಸಿದ್ದಾರೆ. ಜನಸಾಮಾನ್ಯರು ಹೆದರುತ್ತಿರುವುದು ಸರಕಾರದ ಅನಗತ್ಯ, ಅವೈಜ್ಞಾನಿಕವಾದ ನಿರ್ಬಂಧಗಳಿಗೆ. ಈ ದೇಶದಲ್ಲಿ ಕೊರೋನಾ ಹಾನಿ ಮಾಡಿರುವುದಕ್ಕಿಂತ ಈ ನಿರ್ಬಂಧಗಳೇ ಬಹಳಷ್ಟು ಹಾನಿಯನ್ನು ಉಂಟು ಮಾಡಿವೆೆ. ಇದೀಗ ಹಬ್ಬ ಹರಿದಿನಗಳು ಒಂದೊಂದಾಗಿ ಆಗಮಿಸುತ್ತಿರುವ ಸಂದರ್ಭ. ಉದ್ಯಮಗಳು ನಿಧಾನಕ್ಕೆ ಚಿಗುರಿಕೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ ಸರಕಾರದ ನೇತೃತ್ವದಲ್ಲೇ ಅನಗತ್ಯ ಗಾಬರಿಯನ್ನು ಹುಟ್ಟಿಸುವುದು ಎಷ್ಟು ಸರಿ? ಸರಕಾರಗಳು ನಿರ್ಬಂಧಗಳನ್ನು ಹೇರುತ್ತಿದ್ದಂತೆಯೇ ಅದು ನೇರವಾಗಿ ನಾಡಿನ ಆರ್ಥಿಕತೆಯ ಮೇಲೆ ಪರಿಣಾಮವನ್ನು ಬೀರುತ್ತದೆ. 'ಲಸಿಕೆ ವ್ಯಾಪಾರ'ವೇನೋ ಭರ್ಜರಿಯಾಗಿ ನಡೆಯಬಹುದು. ಆದರೆ ಜನಸಾಮಾನ್ಯರ ಉಳಿದೆಲ್ಲ ವ್ಯಾಪಾರ, ಉದ್ದಿಮೆಗಳು ನೆಲಕಚ್ಚ ತೊಡಗುತ್ತವೆ.

ಲಸಿಕೆಯನ್ನು ಬಲವಂತವಾಗಿ ಸರಕಾರ ಹೇರುವ ಅಗತ್ಯ ಖಂಡಿತ ಇಲ್ಲ. ಒಂದು ವೇಳೆ ಕೊರೋನದಿಂದ ಜನರು ಭಯಭೀತರಾಗಿದ್ದಾರೆ ಎಂದಾದರೆ ಅವರೇ ಲಸಿಕೆಗಳಿಗಾಗಿ ಆಗ್ರಹಿಸುತ್ತಾರೆ ಮತ್ತು ಆಸ್ಪತ್ರೆಗಳಲ್ಲಿ ಲಸಿಕೆಗಾಗಿ ಸರದಿಯಲ್ಲಿ ಕಾಯುತ್ತಾರೆ. ಆದರೆ ಲಸಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಜನರು ಈಗಲೂ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ, ಲಸಿಕೆ ಪಡೆದ ಸಾವಿರಾರು ಜನರಿಗೆ ಮತ್ತೆ ಕೊರೋನ ಬಂದಿದೆ. ಇದೇ ಸಂದರ್ಭದಲ್ಲಿ, ಸಾಕಷ್ಟು ಜನರು ಲಸಿಕೆ ತೆಗೆದುಕೊಂಡಿದ್ದಾರಾದರೂ, ಅವರು ಕೊರೋನಕ್ಕೆ ಹೆದರಿ ತೆಗೆದುಕೊಂಡಿರುವುದಲ್ಲ. ಸರಕಾರದ ಬ್ಲಾಕ್‌ಮೇಲ್‌ಗೆ ಹೆದರಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ತೆಗೆದುಕೊಳ್ಳದೇ ಇದ್ದಲ್ಲಿ ಸೌಲಭ್ಯಗಳಿಲ್ಲ, ರೇಷನ್‌ಗಳಿಲ್ಲ, ಮಕ್ಕಳಿಗೆ ಶಾಲೆಗೆ ಪ್ರವೇಶವಿಲ್ಲ ಎಂಬಿತ್ಯಾದಿ ಬೆದರಿಕೆಯನ್ನು ಒಡ್ಡಿ ಲಸಿಕೆಯನ್ನು ನೀಡಲಾಗಿದೆ. ಈ ದೇಶದ ಕೋಟ್ಯಂತರ ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ. ಆದರೂ ಕೊರೋನ ಅಲೆಯ ಕೂಗು ನಿಂತಿಲ್ಲ. ಇದೊಂದು ರೀತಿ 'ಮೊಸಳೆ ಬಂತು ಮೊಸಳೆ' ಎನ್ನುವ ಕೂಗಿನಂತಾಗಿದೆ. ಜನರು ಈ ಕೂಗನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ.

ರಾಜ್ಯ ಸರಕಾರ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದೆಡೆ 40 ಶೇ. ಕಮಿಷನ್ ಹಗರಣ ಸರಕಾರವನ್ನು ತತ್ತರಿಸುವಂತೆ ಮಾಡಿದೆ. ಇದರ ಬೆನ್ನಿಗೇ ಪಿಎಸ್ಸೈ ನೇಮಕಾತಿ ಹಗರಣವೂ ಸರಕಾರವನ್ನು ಮುಜುಗರಕ್ಕೆ ತಳ್ಳಿದೆ. ಜೊತೆಗೆ ಇನ್ನಷ್ಟು ಹಗರಣಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇವೆಲ್ಲದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿಯೇ ಮತ್ತೆ 'ನಾಲ್ಕನೇ ಅಲೆ'ಯನ್ನು ಸೃಷ್ಟಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಜೊತೆ ಜೊತೆಗೆ, ಬೂಸ್ಟರ್‌ನ್ನು ತೆಗೆದುಕೊಳ್ಳುವಲ್ಲಿ ಜನರು ತೀರಾ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳು ಅವಧಿ ಮುಗಿದು ಕಸದ ತೊಟ್ಟಿ ಸೇರಲಿವೆ ಎನ್ನುವ ಭಯವೂ ಕೆಲವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಲಸಿಕೆಯನ್ನು ಪಡೆಯಲಿ ಎನ್ನುವ ಕಾರಣಕ್ಕಾಗಿಯೇ ಜನರ ನಡುವೆ ಆತಂಕವನ್ನು ಬಿತ್ತಲಾಗುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.

ಇವೆಲ್ಲದರ ಅರ್ಥ ಕೊರೋನ ಅಲೆಯ ಸಾಧ್ಯತೆ ಇಲ್ಲ ಎಂದಲ್ಲ. ಆದರೆ, ಈಗಾಗಲೇ ಲಾಕ್‌ಡೌನ್ ಸಹಿತ ಸರಕಾರದ ನಿರ್ಬಂಧಗಳಿಂದ ಕೊರೋನವನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಜನರ ಸ್ವಯಂ ಜಾಗೃತಿಯಿಂದಷ್ಟೇ ಕೊರೋನವನ್ನು ಎದುರಿಸಲು ಸಾಧ್ಯ. ಮಲೇರಿಯಾ, ಡೆಂಗಿ ಮೊದಲಾದವುಗಳ ಬಗ್ಗೆ ಜನಸಾಮಾನ್ಯರು ಹೇಗೆ ಜಾಗರೂಕರಾಗಿದ್ದಾರೆಯೇ ಹಾಗೆಯೇ ಕೊರೋನದ ಬಗ್ಗೆಯೂ ಜಾಗರೂಕತೆಯನ್ನು ಹೊಂದಿದರೆ ಸಾಕು. ಉಸಿರಾಟದ ಸಮಸ್ಯೆಯಿರುವವರು ವಿಶೇಷ ಕಾಳಜಿಯನ್ನು ವಹಿಸಬೇಕಾಗಿದೆ. ಆದರೆ ಲಾಕ್‌ಡೌನ್‌ನಂತಹ ನಿರ್ಬಂಧಗಳನ್ನು ಸಮಾಜದ ಮೇಲೆ ಹೇರಿದರೆ ಜನರು ಕೊರೋನದ ಬದಲಿಗೆ ಇನ್ನಿತರ ರೋಗರುಜಿನಗಳಿಗೆ ಬಲಿಯಾಗಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕೊರೋನ ಕಾಲದಲ್ಲಿ 'ಹಸಿವು' ಮಾರಕ ರೋಗವಾಗಿ ಪರಿವರ್ತನೆಗೊಂಡಿದೆ. ಅದು ಉಲ್ಬಣಗೊಳ್ಳದಂತೆ ನೋಡಿಕೊಳ್ಳುವುದೇ ಸರಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದರ ಬದಲು 'ಮೊಸಳೆ ಬಂತು ಮೊಸಳೆ' ಎಂದು ಕೂಗುವುದು ಕೊರೋನವನ್ನು ಎದುರಿಸುವ ವಿಧಾನವೇ ಅಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News