ಕಲಬುರಗಿಯಲ್ಲಿ 41.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು, ಬಿಸಿ ಗಾಳಿಯ ಆತಂಕ

Update: 2022-04-28 14:32 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು, ಎ. 28: ಇತ್ತೀಚೆಗೆ ಸುರಿದ ಸಿಡಿಲು-ಗುಡುಗು ಸಹಿತ ಮಳೆಯಿಂದ ಜನತೆ ಸ್ವಲ್ಪ ಮಟ್ಟಿನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ, ಬೇಸಿಗೆಯ ಬಿರು ಬಿಸಿಲಿನ ಝಳ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜನತೆಯನ್ನು ಅತ್ಯಂತ ಕಳವಳಕ್ಕೀಡು ಮಾಡಿರುವುದಲ್ಲದೆ, ಬಿಸಿ ಗಾಳಿಯ ಆತಂಕವನ್ನು ಸೃಷ್ಟಿಸಿದೆ.

ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮೂರ್ನಾಲ್ಕು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕಲಬುರಗಿಯಲ್ಲಿ ಅತ್ಯಂತ ಹೆಚ್ಚು 41 ಡಿಗ್ರಿ ಸೆಲ್ಸಿಯಸ್ಸ್ ನಷ್ಟು ಉಷ್ಣಾಂಶ ದಾಖಲಾಗಿದೆ. ಬಿರು ಬಿಸಿಲಿನ ಝಳದಿಂದ ಕಾದ ನೆಲ ಬಿಸಿಲ ಧಗೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸುಡುಬಿಸಿಲಿನಿಂದ ಜನತೆ ಬಳಲಿ ಬೆಂಡಾಗಿದ್ದಾರೆ. 

ವಾತಾವರಣದಲ್ಲಿ ಕಡಿಮೆ ತೇವಾಂಶದ ಕಾರಣ ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ಝಳ ಮತ್ತು ಉಷ್ಣಾಂಶ ಹೆಚ್ಚಾಗುತ್ತಿದೆ. ಮುಂದಿನ ಮೂರು ದಿನ ಮತ್ತಷ್ಟು ಉಷ್ಣಾಂಶ ಹೆಚ್ಚಳವಾಗಲಿದೆ. ಮುಂದಿನ ಮೂರು ದಿನಗಳಲ್ಲಿ ಉಷ್ಣಾಂಶ 42 ಮತ್ತು 43 ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಳಗ್ಗೆ 8ಗಂಟೆಯಿಂದಲೇ ಬಿಸಿಲಿನ ಝಳದ ಅನುಭವ ಮೈಗೆ ತಟ್ಟಲಿದ್ದು, ಮಧ್ಯಾಹ್ನದ ವೇಳೆಗೆ ಬಿರು ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಮನೆ, ಕಚೇರಿಗಳಲ್ಲಿ ಕೂರಲು-ನಿಲ್ಲಲು ಸಾಧ್ಯವಿಲ್ಲ. ಹೊರಗೆ ಬಂದರೆ ಬಿಸಿಲಿನ ಬೇಗೆಗೆ ಮೈಯಲ್ಲಿನ ಬೆವರು ಬಟ್ಟೆಯನ್ನು ಒದ್ದೆ ಮಾಡುತ್ತಿದೆ. ಹೊರಗೆ ಕೆಲಸ ಮಾಡುವ ಕೂಲಿ ಕಾರ್ಮಿಕರ, ಪೌರಕಾರ್ಮಿಕರು ಮತ್ತು ದುಡಿಯುವ ವರ್ಗದ ಜನರ ಸ್ಥಿತಿ ಬಹಳ ಕಷ್ಟಕರವಾಗಿದೆ.

ಮನೆ, ಕಚೇರಿಗಳಲ್ಲಿ ಕೆಲಸ ಮಾಡುವವರು ಸದಾ ಫ್ಯಾನ್, ಕೂಲರ್, ಎಸಿ ಹಾಕಿಸಿಕೊಂಡೇ ಇರಬೇಕಾಗಿದೆ. ಈ ಮಧ್ಯೆ ಬಿಸಿಲ ಝಳದ ಪರಿಣಾಮ ಅಜೀರ್ಣ, ವಾಂತಿ, ಬೇಧಿಯಂತಹ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. 

ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಝಳ ಮತ್ತಷ್ಟು ಹೆಚ್ಚಿದೆ. ಈ ಬಾರಿ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು  ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ಎದುರಿಸಬೇಕಾದ ಅನಿವಾರ್ಯ. ಅಡ್ಡಮಳೆ, ವಾಯುಮಾಲಿನ್ಯ ಸಹಿತ ಇನ್ನಿತರ ವೈಪರೀತ್ಯದ ಕಾರಣ ಈ ಬಾರಿ ವಾಡಿಕೆಗಿಂತ ಬಿಸಿಲು ಹೆಚ್ಚಾಗಿದೆ. ಆದರೆ, ‘ಎಪ್ರಿಲ್ ಅಂತ್ಯ ಮತ್ತು ಮೇ ತಿಂಗಳಲ್ಲಿ ಬೇಸಿಗೆ ಬಿಸಿಲಿನ ಕಾರಣ ಉಷ್ಣಾಂಶ ಸಹಜವಾಗಿಯೇ ಹೆಚ್ಚಾಗಿರಲಿದೆ, ಇದರಲ್ಲಿ ವಿಶೇಷವೇನೂ ಇಲ್ಲ' ಎಂದು ಹವಾಮಾನ ಇಲಾಖೆ ತಜ್ಞ ಎ.ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಬಿಸಿಲ ಬೇಗೆ ನಡುವೆ ಕೈ ಸುಡುವ ದರ ಏರಿಕೆ: ಬೇಸಿಗೆಯ ಬಿರು ಬಿಸಿಲಿನಿಂದ ಕಂಗೆಟ್ಟ ಜನತೆ ಅದರಿಂದ ಪಾರಾಗಲು ಮನೆ, ಕಚೇರಿ ಹಾಗೂ ನೆರಳನ್ನು ಆಶ್ರಯಿಸಿದ್ದು, ಜೊತೆಗೆ ಎಳನೀರು, ಲಿಂಬೆ ಶರಬತ್ತು ಸಹಿತ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಆದರೂ ಅವುಗಳನ್ನು ಸೇವಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಕಾರಣ ಬೆಲೆ ಏರಿಕೆ. ಒಂದು ಲಿಂಬೆ ಹಣ್ಣಿನ ದರ 10 ರೂ.ಮೀರಿದೆ. ಎಳನೀರು ಬೆಲೆಯೂ ಕೈಗೆಟುಕದಂತಿದೆ. ಇನ್ನೂ ಕಲ್ಲಂಗಡಿ ಕೆ.ಜಿ.ಗೆ 30ರೂ. ದಾಟಿದ್ದರೆ, ಕರಬೂಜ ಹಣ್ಣಿನ ದರ ಸ್ವಲ್ಪ ಕಡಿಮೆಯಿದೆ. ನಗರ ಪ್ರದೇಶಗಳಲ್ಲಿ ಜನತೆ ಐಸ್ ಕ್ರೀಂ ಮೊರೆ ಹೋಗುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಪದೇ ಪದೇ ಕೈ ಕೊಡುತ್ತಿರುವ ವಿದ್ಯುತ್‍ನಿಂದ ಕುಡಿಯುವ ನೀರು ಸಂಗ್ರಹಿಸಿಕೊಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊಳವೆ ಬಾವಿಗಳಲ್ಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೆರೆ-ಕುಂಟೆಗಳು ಒಣಗಿದ್ದು, ಇದರಿಂದ ಜಾನುವಾರುಗಳು, ಪ್ರಾಣಿ, ಪಕ್ಷಿಗಳಿಗೂ ನೀರಿಲ್ಲ. ಇನ್ನೂ ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿದೆ. ಬಿರು ಬಿಸಿಲು ರಾಜ್ಯದ ಜನತೆಯನ್ನು ಅಕ್ಷರಶಃ ಕಂಗೆಡಿಸಿದೆ.

‘ರಾಜ್ಯದಲ್ಲಿ ಗರಿಷ್ಠ ತಾಪಮಾನ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯಲ್ಲಿ 41.6 ಡಿಗ್ರಿ ಸೆಲ್ಸಿಯಸ್‍ನಷ್ಟು ದಾಖಲಾಗಿದೆ. ಇನ್ನೂ ಬೆಂಗಳೂರಿನಲ್ಲಿ 34 ಡಿಗ್ರಿ, 35 ಡಿಗ್ರಿಯಷ್ಟು ಬಿಸಿಲು ಇರಲಿದೆ. ಹತ್ತು ವರ್ಷಗಳ ಹಿಂದೆ (2016ರ ಎಪ್ರಿಲ್ 25ರಂದು) ಗರಿಷ್ಠ 39.2 ಡಿಗ್ರಿ ಸೆಲ್ಸಿಯಸ್‍ನಷ್ಟು ದಾಖಲಾಗಿತ್ತು. ಮೇ ಮಧ್ಯ ಅಥವಾ ಕೊನೆಯ ವಾರದಲ್ಲಿ ಗುಡುಗಿ ಸಹಿತ ಮಳೆ ಸಾಧ್ಯತೆ ಇದ್ದು, ಅಲ್ಲಿಯ ವರೆಗೆ ಬಿಸಿಲಿನ ಪ್ರಖರತೆ ಇರಲಿದೆ. ಎಪ್ರಿಲ್ ಅಂತ್ಯ ಮತ್ತು ಮೇ ತಿಂಗಳ ಕೊನೆಯ ವರೆಗೂ ಬಿಸಿಲು ಇರುತ್ತದೆ. ಬೇಸಿಗೆ ಸಂದರ್ಭದಲ್ಲಿ ಬಿಸಿಲು ಸಹಜ. ಆದರೆ, ರಾಜ್ಯದಲ್ಲಿ ಬಿಸಿ ಗಾಳಿಯ ಆತಂಕವೇನೂ ಈವರೆಗೂ ಇಲ್ಲ'
-ಎ.ಪ್ರಸಾದ್, ಮುಖ್ಯಸ್ಥರು ಹವಾಮಾನ ಕೇಂದ್ರ ಬೆಂಗಳೂರು 

ಉಷ್ಣಾಂಶ (ಗರಿಷ್ಠ ಕಲಬುರಗಿ, ಕನಿಷ್ಠ ಚಿಕ್ಕಮಗಳೂರು): 
ಬೆಳಗಾವಿ-34.5 ಡಿಗ್ರಿ ಸೆಲ್ಸಿಯಸ್, ಕಾರವಾರ-36.4, ಮಂಗಳೂರು-34.6, ಬೀದರ್-40, ವಿಜಯಪುರ -40, ಬಾಗಲಕೋಟೆ-38.2, ಧಾರವಾಡ-36.7, ಗದಗ-38.4, ಕಲಬುರಗಿ-41.6(ಗರಿಷ್ಠ), ಹಾವೇರಿ-38, ಬೆಂಗಳೂರು-35, ಚಿತ್ರದುರ್ಗ-36.8, ದಾವಣಗೆರೆ-37, ಹಾಸನ-34.4, ಮಂಡ್ಯ-36, ಮೈಸೂರು-36, ಶಿವಮೊಗ್ಗ -36.4, ಚಿಕ್ಕಮಗಳೂರು-32.4(ಕನಿಷ್ಠ) ಡಿಗ್ರಿ ಸೆಲ್ಸಿಯಸ್‍ನಷ್ಟು ದಾಖಲಾಗಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News