ಪಿಎಸ್ಸೈ ನೇಮಕಾತಿ ಅಕ್ರಮ: ಗಲ್ಲಿಗೇರಿಸಲ್ಪಟ್ಟ ಸಂತ್ರಸ್ತರು

Update: 2022-04-30 04:22 GMT

ಕೊನೆಗೂ ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಪ್ರಧಾನ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸಹಿತ ಐವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಅದೇನೋ ಸ್ಟೇಟಸ್ ಹಾಕಿದರು ಎಂದು ಆರೋಪಿಸಿದಾಕ್ಷಣ ಅವರನ್ನು ಕ್ರಿಮಿನಲ್ ಆರೋಪಿಗಳಂತೆ ತಕ್ಷಣ ಬಂಧಿಸಿ, ಜೈಲಿಗೆ ಅಟ್ಟಲು ತೋರಿಸುವ ಉತ್ಸಾಹವನ್ನು ಈ ಅಕ್ರಮಕ್ಕೆ ಸಂಬಂಧಿಸಿ ಪೊಲೀಸರು ಪ್ರದರ್ಶಿಸಲಿಲ್ಲ. ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಎನ್ನುವುದು ಮಾಧ್ಯಮಗಳಲ್ಲಿ ಬಹಿರಂಗವಾದ ಬಳಿಕವೂ ಆಕೆಯ ಬಂಧನಕ್ಕೆ ಮೀನಾಮೇಷ ಎಣಿಸಲಾಯಿತು. ಆಕೆಯನ್ನು ಬಂಧಿಸದೇ ಇರಲು ಸರಕಾರದಿಂದಲೇ ಗರಿಷ್ಠ ಪ್ರಯತ್ನ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಕೊನೆಗೂ ಆಕೆಯನ್ನು ಬಂಧಿಸುವುದು ಅನಿವಾರ್ಯವೆನಿಸಿದಾಗ, ‘ಆಕೆಗೂ ಬಿಜೆಪಿಗೂ ಸಂಬಂಧವಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡತೊಡಗಿದರು. ಜೊತೆಗೆ ಕಾಂಗ್ರೆಸ್ ಮುಖಂಡ ಡಿಕೆಶಿಯವರ ಜೊತೆಗೆ ಸಂಬಂಧ ಕಲ್ಪಿಸತೊಡಗಿದರು. ಆದರೆ ಬಿಜೆಪಿ ಮುಖಂಡರ ಪ್ರಯತ್ನಗಳೆಲ್ಲವೂ ವಿಫಲವಾಯಿತು. ಇದೀಗ ಅನಿವಾರ್ಯ ಸ್ಥಿತಿಯಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಬಂಧನವಾದ ತಕ್ಷಣ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದು ನಾವು ಭಾವಿಸಬೇಕಾಗಿಲ್ಲ. ಆರೋಪಿಗಳ ಬಂಧನವೇ ಇಷ್ಟು ಕಷ್ಟವಾದರೆ, ಇನ್ನು ವಿಚಾರಣೆಯ ಸ್ಥಿತಿ ಹೇಗಿರಬಹುದು? ಪ್ರಮುಖ ಆರೋಪಿ ಪ್ರತಿನಿಧಿಸುವ ರಾಜಕೀಯ ಪಕ್ಷ ರಾಜ್ಯವನ್ನು ಆಳುತ್ತಿವೆ. ಗೃಹ ಇಲಾಖೆಯೂ ಅವರ ಕೈಯಲ್ಲಿವೆ. ಸರಕಾರದೊಳಗಿರುವ ಜನರ ಕೈವಾಡಗಳಿಲ್ಲದೆ ಈ ಅಕ್ರಮವನ್ನು ನಡೆಸುವುದಕ್ಕೆ ದಿವ್ಯಾ ಹಾಗರಗಿಗೆ ಸಾಧ್ಯವೂ ಇಲ್ಲ. ಹೀಗಿರುವಾಗ ಸರಕಾರ ಇಡೀ ಪ್ರಕರಣದ ತನಿಖೆಯನ್ನು ಗುರಿ ತಲುಪುವುದಕ್ಕೆ ಬಿಡುತ್ತದೆಯೆ? ಇಷ್ಟಕ್ಕೂ ಈ ಅಕ್ರಮದಲ್ಲಿ ಕೇವಲ ಅಧಿಕಾರಿಗಳು ಮತ್ತು ತಳಸ್ತರದ ಕಾರ್ಯಕರ್ತರಷ್ಟೇ ಭಾಗಿಯಾಗಿದ್ದಾರೆಯೆ? ಜನಪ್ರತಿನಿಧಿಗಳ ಭಾಗೀ ದಾರಿಕೆಯ ಸಾಧ್ಯತೆಗಳು ಇಲ್ಲವೆ? ಮೊದಲಾದ ಪ್ರಶ್ನೆಗಳು ನಮ್ಮ ಮುಂದೆ ಉತ್ತರಗಳಿಲ್ಲದೆ ಬಿದ್ದುಕೊಂಡಿವೆ. ಇಡೀ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ಸಂತ್ರಸ್ತರಿಗೆ. ಈಗಾಗಲೇ ಗೃಹ ಸಚಿವರು ಶಿಕ್ಷೆಯನ್ನು ಘೋಷಿಸಿಯೂ ಆಗಿದೆ. ಪಿಎಸ್ಸೈ ಪರೀಕ್ಷೆಯನ್ನು ರದ್ದುಗೊಳಿಸಿ ಮತ್ತೊಮ್ಮೆ ಹೊಸದಾಗಿ ಪರೀಕ್ಷೆಯನ್ನು ನಡೆಸುತ್ತೇವೆ ಎಂದು ಗೃಹ ಸಚಿವರು ಘೋಷಿಸಿದ್ದಾರೆ. ಈಗಾಗಲೇ ನ್ಯಾಯ ಬದ್ಧವಾಗಿ ಪರೀಕ್ಷೆ ಬರೆದು ಪಿಎಸ್ಸೈ ಹುದ್ದೆಗೆ ಆಯ್ಕೆಯಾಗಿ ಸಂಭ್ರಮಿಸಿದ್ದ ಅಭ್ಯರ್ಥಿಗಳಿಗೆ ಈ ಮೂಲಕ ಬೆನ್ನಿಗೆ ಚೂರಿ ಹಾಕಿದಂತಾಗಿದೆ. ಹಲವು ವರ್ಷಗಳ ಸಿದ್ಧತೆಗೆ ಸಿಕ್ಕಿದ ಫಲ ಯಾರದೋ ಕಾರಣದಿಂದ ಕೈಚೆಲ್ಲುವಂತಾಗಿದೆ. ಸರಕಾರದ ವೈಫಲ್ಯದಿಂದ ಅಕ್ರಮ ನಡೆದಿದ್ದರೆ, ಅದಕ್ಕೆ ಬೆಲೆ ತೆರಬೇಕಾದವರು ಬಡವರ್ಗದಿಂದ ಗ್ರಾಮೀಣ ಪ್ರದೇಶದಿಂದ ಬಂದ ಅಭ್ಯರ್ಥಿಗಳು. ಅವರೀಗ ಮತ್ತೊಮ್ಮೆ ಹೊಸದಾಗಿ ಪರೀಕ್ಷೆ ಬರೆಯಬೇಕು. ಈ ಹಿಂದೆ ಪಿಎಸ್ಸೈ ಹುದ್ದೆಗೆ ಆಯ್ಕೆಯಾದವರು ಈ ಪರೀಕ್ಷೆಯಲ್ಲೇನಾದರೂ ವಿಫಲರಾದರೆ ಅದು ಅವರ ಮನಸ್ಸಿನ ಮೇಲೆ ಬೀರುವ ಪರಿಣಾಮ ಅತ್ಯಂತ ಕೆಟ್ಟದಾಗಿರುತ್ತದೆ. ಜೊತೆಗೆ ಪಿಎಸ್ಸೈ ಹುದ್ದೆಗಳಿಗೆ ರಾಜ್ಯದಲ್ಲಿ ಪರೀಕ್ಷೆಗೆ ಬರೆದಿರುವ ವಿದ್ಯಾರ್ಥಿಗಳು ಈಗಾಗಲೇ ಒಮ್ಮೆ ಶುಲ್ಕ ಕಟ್ಟಿದ್ದಾರೆ. ಇದೀಗ ಯಾರೋ ರಾಜಕೀಯ ಹಿನ್ನೆಲೆಯಿರುವ ವ್ಯಕ್ತಿಗಳು ನಡೆಸಿರುವ ಅಕ್ರಮಗಳಿಂದಾಗಿ ಮತ್ತೊಮ್ಮೆ ಶುಲ್ಕ ಕಟ್ಟಿ ಪರೀಕ್ಷೆ ಬರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಂದರೆ, ಕಾನೂನುವ್ಯವಸ್ಥೆಯ ವೈಫಲ್ಯಕ್ಕೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಶುಲ್ಕ ಕಟ್ಟಬೇಕೆ? ಯಾರೋ ಮಾಡಿದ ಅಕ್ರಮಕ್ಕೆ ವಿದ್ಯಾರ್ಥಿಗಳು ಬೆಲೆ ತೆರಬೇಕು ಎಂದಾದರೆ, ಗೃಹ ಸಚಿವರೂ ಕೂಡ ಸೂಕ್ತ ಬೆಲೆ ತೆರಬೇಕು. ನಡೆದ ಅಕ್ರಮಗಳಿಗಾಗಿ ರಾಜೀನಾಮೆ ನೀಡಬೇಕು. ಇದಕ್ಕೆ ಅವರು ಸಿದ್ಧರಿದ್ದಾರೆಯೆ?

ಸಾಧಾರಣವಾಗಿ ಇಂತಹ ಅಕ್ರಮಗಳು ಬಯಲಾಗುವುದು ತೀರಾ ಅಪರೂಪ. ಎಲ್ಲೋ ಕೆಲವು ಅಕ್ರಮಗಳಷ್ಟೇ ಬೆಳಕಿಗೆ ಬರುತ್ತವೆ. ಅದರ ಅರ್ಥ ಉಳಿದ ಪರೀಕ್ಷೆಗಳೆಲ್ಲ ಸಕ್ರಮವಾಗಿ ನಡೆದಿವೆ ಎಂದಲ್ಲ. ಆ ಅಕ್ರಮಗಳು ಬೆಳಕಿಗೆ ಬರಲಿಲ್ಲ ಎನ್ನುವುದಷ್ಟೇ ನಮ್ಮ ಸಮಾಧಾನ. ಇಂತಹ ಅಕ್ರಮಗಳ ಹಾದಿಯ ಮೂಲಕ ಪೊಲೀಸ್ ಇಲಾಖೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡವರು ಸಮಾಜಕ್ಕೆ ಯಾವ ರೀತಿಯಲ್ಲಿ ನ್ಯಾಯ ನೀಡಬಲ್ಲರು? ಇಷ್ಟಕ್ಕೂ ಪಿಎಸ್ಸೈ ಹುದ್ದೆಯ ಆಯ್ಕೆ ಬರೇ ಪರೀಕ್ಷೆಯ ಆಧಾರದಲ್ಲಷ್ಟೇ ನಡೆಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಪ್ರತಿಭಾವಂತರು ಕೂಡ ಅಂತಿಮ ಆಯ್ಕೆಯ ಸಂದರ್ಭದಲ್ಲಿ ಸಂಬಂಧಪಟ್ಟವರಿಗೆ ಅಕ್ರಮವಾಗಿ ಹಣವನ್ನು ಒಪ್ಪಿಸಲೇಬೇಕಾಗುತ್ತದೆ. ‘ಹಣವಿಲ್ಲದೆ ಆಯ್ಕೆಯಿಲ್ಲ’ ಎನ್ನುವುದು ಪೊಲೀಸ್ ಇಲಾಖೆಯಲ್ಲಿರುವ ಎಲ್ಲ ಅಧಿಕಾರಿಗಳಿಗೂ ಸ್ಪಷ್ಟವಾಗಿ ಗೊತ್ತಿದೆ. ಈ ಬಾರಿ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಪ್ರತಿಭಾವಂತರೂ ಇದ್ದಾರೆ. ಆದರೆ ಅವರೂ ಅನಿವಾರ್ಯವಾಗಿ ಹಣವನ್ನು ನೀಡಬೇಕಾದಂತಹ ಸನ್ನಿವೇಶ ಎದುರಾಗುತ್ತದೆ. ಇವೆಲ್ಲವೂ ತೆರೆಮರೆಯಲ್ಲಿ ನಡೆಯುತ್ತವೆ. ಹೀಗೆ ಸಾಲಸೋಲ ಮಾಡಿ ಹಣ ಕೊಟ್ಟ ಪ್ರತಿಭಾವಂತ ಅಭ್ಯರ್ಥಿಗಳೆಲ್ಲ ಅಕ್ಷರಶಃ ಬೀದಿಪಾಲಾಗಬೇಕಾಗುತ್ತದೆ. ಯಾಕೆಂದರೆ ಹೀಗೆ ಅನಧಿಕೃತವಾಗಿ ನೀಡಿದ ಹಣವನ್ನು ಬಹಿರಂಗ ಪಡಿಸುವಂತೆಯೂ ಇಲ್ಲ. ಒಂದು ವೇಳೆ, ಪಿಎಸ್ಸೈ ನೇಮಕಾತಿ ರದ್ದಾದರೆ, ಆಯ್ಕೆಯಾದ ಅಭ್ಯರ್ಥಿಗಳು ಯಾರ್ಯಾರಿಗೆ ಎಷ್ಟೆಷ್ಟು ಹಣ ನೀಡಿದ್ದೇವೆ ಎನ್ನುವುದನ್ನು ಬಹಿರಂಗ ಪಡಿಸಬೇಕು. ಆ ಮೂಲಕ ನಮ್ಮ ವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎನ್ನುವುದು ಬೆಳಕಿಗೆ ಬರಲಿ.

ಶಾಸಕರನ್ನು ಅಕ್ರಮವಾಗಿ ದುಡ್ಡು ಕೊಟ್ಟು ಕೊಂಡು ಅಸ್ತಿತ್ವದಲ್ಲಿರುವ ಸರಕಾರ, ನೇಮಕಾತಿಯ ಲಂಚ, ಅಕ್ರಮಗಳನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡೀತು. ಆದುದರಿಂದ, ಮುಂದಿನ ಬಾರಿಯ ನೇಮಕಾತಿಯಲ್ಲೂ ಅಕ್ರಮ ನಡೆಯಬಾರದು ಎಂದಿಲ್ಲ. ಅಕ್ರಮ ನಡೆದುದು ಬೆಳಕಿಗೆ ಬಂದಾಕ್ಷಣ ನೇಮಕಾತಿಯನ್ನು ರದ್ದುಗೊಳಿಸಿ ಮತ್ತೆ ಶುರುವಿಂದ ಪರೀಕ್ಷೆ, ನೇಮಕಾತಿಯನ್ನು ಆರಂಭಿಸುವುದರಿಂದ ಸರಕಾರಿ ವ್ಯವಸ್ಥೆಗೆ ಆಗುವ ನಷ್ಟಗಳೆಷ್ಟು? ಇದನ್ನು ತುಂಬುವವರು ಯಾರು? ಈ ನಿಟ್ಟಿನಲ್ಲಿ ನಿಜವಾದ ಆರೋಪಿಗಳನ್ನು ಬಂಧಿಸಿ, ಪ್ರತಿಭಾವಂತ ಅಭ್ಯರ್ಥಿಗಳ ಆಯ್ಕೆಯನ್ನು ಎತ್ತಿ ಹಿಡಿಯುವುದು ಹೆಚ್ಚು ಸಹ್ಯವಾದುದು. ಮುಂದೆ ಇಂತಹ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ಬೇಕಾದ ನಿಯಮಗಳನ್ನು ರೂಪಿಸುವುದು ಸರಕಾರದ ಹೊಣೆಕಾರಿಕೆಯಾಗಿದೆ. ಮುಖ್ಯವಾಗಿ ಇಂತಹ ಪರೀಕ್ಷೆಗಳಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಮೂಗು ತೂರಿಸದಂತೆ ನೋಡಿಕೊಳ್ಳಬೇಕು. ಹಾಗೆಯೇ ಹಣ, ಲಂಚದ ಮೂಲಕ ನಡೆಯುವ ಆಯ್ಕೆಗಳಿಗೂ ತಡೆ ಬಿದ್ದಾಗ ಮಾತ್ರ ಗ್ರಾಮೀಣ ಪ್ರದೇಶದ ಬಡ ಅಭ್ಯರ್ಥಿಗಳು ಪೊಲೀಸ್ ಇಲಾಖೆಯಂತಹ ಹುದ್ದೆಗಳನ್ನು ಹೆಚ್ಚು ಹೆಚ್ಚು ಪ್ರತಿನಿಧಿಸಲು ಸಾಧ್ಯ. ಆದರೆ ಶೇ. 40 ಕಮಿಷನ್‌ಗಾಗಿ ಸುದ್ದಿಯಲ್ಲಿರುವ ಸರಕಾರದಿಂದ ಇದನ್ನು ನಿರೀಕ್ಷಿಸುವುದು ಎಷ್ಟರಮಟ್ಟಿಗೆ ಸರಿ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News