ಸ್ಮಾರ್ಟ್ ಸಿಟಿ ಹುಬ್ಬಳ್ಳಿಯ ಪಝಲ್ ಕಾರ್ ಪಾರ್ಕಿಂಗ್ ಬಗ್ಗೆ ಗೊತ್ತೇ ?

Update: 2022-04-30 02:13 GMT

ಹುಬ್ಬಳ್ಳಿ: ರಾಜ್ಯದ ಮೊಟ್ಟಮೊದಲ ಪಝಲ್ ಪಾರ್ಕಿಂಗ್ ವ್ಯವಸ್ಥೆ ನಗರದ ಎಂಜಿ ಪಾರ್ಕ್‍ನಲ್ಲಿ ಶನಿವಾರ ಉದ್ಘಾಟನೆಯಾಗಲಿದೆ. ಇದು ನಗರದಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಅದರಲ್ಲೂ ಮುಖ್ಯವಾಗಿ ಕಾರು ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ನೆರವಾಗಲಿದೆ. ಸ್ಮಾರ್ಟ್‍ಸಿಟಿ ಯೋಜನೆಯಡಿ 4.59 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

ಆಟಿಕೆ ರೈಲು, ಸಂಪೂರ್ಣ ಸುಸಜ್ಜಿತ ಇಂದಿರಾಗಾಂಧಿ ಗಾಜಿನ ಮನೆ, ಎಂಜಿ ಪಾರ್ಕ್, ಸಂಗೀತ ಕಾರಂಜಿ ಹಾಗೂ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ ಸೇರಿದಂತೆ ಐದು ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಪಝಲ್ ಪಾರ್ಕಿಂಗ್ ಕೂಡಾ ಒಂದು.

"ಒಂದು ವರ್ಷದ ಹಿಂದೆಯೇ ಇದು ಮುಕ್ತಾಯವಾಗಬೇಕಿತ್ತು. ಆದರೆ ಸಾಂಕ್ರಾಮಿಕದಿಂದಾಗಿ ವಿಳಂಬವಾಯಿತು" ಎಂದು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಹೇಳಿದ್ದಾರೆ.

ಪುಣೆ ಮೂಲದ ಕಂಪನಿ ಈ ಸಂಪೂರ್ಣ ಸ್ವಯಂಚಾಲಿತ ಪಝಲ್ ಪಾರ್ಕಿಂಗ್ ಸೌಲಭ್ಯ ಅಭಿವೃದ್ಧಿಪಡಿಸಿದೆ. ಕಡಿಮೆ ಜಾಗದಲ್ಲೇ ಹೆಚ್ಚು ಕಾರುಗಳನ್ನು ನಿಲುಗಡೆ ಮಾಡಲು ಇದು ಸ್ಥಳಾವಕಾಶ ಒದಗಿಸಲಿದೆ. ಈ ಸೌಲಭ್ಯದಲ್ಲಿ ಆರು ಸ್ತರಗಳಿದ್ದು, ಪ್ರತಿ ಸ್ತರದಲ್ಲಿ ಆರು ಕಾರುಗಳನ್ನು ನಿಲ್ಲಿಸಲು ಅವಕಾಶವಿದೆ. ಸಂಪೂರ್ಣ ಸ್ವಯಂಚಾಲಿತವಾಗಿ ಇದು ಕಾರ್ಯ ನಿರ್ವಹಿಸಲಿದೆ.

ಪಾರ್ಕಿಂಗ್ ಜಾಗದ ಅಭಾವದಿಂದಾಗಿ ಹೊಸೂರು ವೃತ್ತ, ಎಂಜಿ ಪಾರ್ಕ್ ಮತ್ತು ಐಟಿ ಪಾರ್ಕ್ ಪ್ರದೇಶದಲ್ಲಿ ವಾಹನದಟ್ಟಣೆ ಆಗುತ್ತದೆ. ಈ ವ್ಯವಸ್ಥೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಿದೆ ಎಂದು ಅವರು ವಿವರಿಸಿದರು.

ಇದು 600 ಚದರ ಅಡಿಯ ಪ್ರಾಯೋಗಿಕ ಯೋಜನೆಯಾಗಿದೆ. ಬೇರೆ ವ್ಯವಸ್ಥೆಯಲ್ಲಿ 36 ಕಾರು ಪಾರ್ಕ್ ಮಾಡಲು 2300 ಚದರ ಅಡಿ ಜಾಗ ಬೇಕು. ಇದನ್ನು ನಿರ್ಮಿಸಿರುವ ಕಂಪನಿ ಐದು ವರ್ಷ ಇದನ್ನು ನಿರ್ವಹಿಸಲಿದೆ. ಪ್ರತಿ ಕಾರು ನಿಲುಗಡೆಗೆ 30 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News