ಕಲ್ಲಿದ್ದಲು,ವಿದ್ಯುತ್ ಕೊರತೆ: ಕೇಂದ್ರ ಸರಕಾರದ ವಿರುದ್ಧ ಪಿ. ಚಿದಂಬರಂ ವಾಗ್ದಾಳಿ

Update: 2022-04-30 06:43 GMT

ಹೊಸದಿಲ್ಲಿ: ವ್ಯಾಪಕ ವಿದ್ಯುತ್ ಕಡಿತದ ವಿಷಯದ ಬಗ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿ, ಕಲ್ಲಿದ್ದಲು ಹೊತ್ತ ರೈಲುಗಳನ್ನು ಓಡಿಸುವ ಮೂಲಕ  ಸರಕಾರವು "ಪರಿಪೂರ್ಣ ಪರಿಹಾರ" ವನ್ನು ಕಂಡುಕೊಂಡಿದೆ ಎಂದು ಕುಟುಕಿದ್ದಾರೆ.

ಶಾಖೋತ್ಪನ್ನ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯ ಬಗ್ಗೆ ವಿರೋಧ ಪಕ್ಷಗಳು ಕೇಂದ್ರವನ್ನು ದೂಷಿಸುತ್ತಿದ್ದಂತೆ ವಿವಿಧ ರಾಜ್ಯಗಳು ಶುಕ್ರವಾರದಂದು ವಿದ್ಯುತ್ ಕೊರತೆಯಿಂದ ಕಂಗಲಾಗಿವೆ.

ಈ ವಿಷಯದ ಬಗ್ಗೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಚಿದಂಬರಂ, "ಸಮೃದ್ಧ ಕಲ್ಲಿದ್ದಲು, ದೊಡ್ಡ ರೈಲು ಜಾಲ, ಉಷ್ಣ ಸ್ಥಾವರಗಳಲ್ಲಿ ಬಳಕೆಯಾಗದ ಸಾಮರ್ಥ್ಯ. ಆದರೂ, ತೀವ್ರ ವಿದ್ಯುತ್ ಕೊರತೆಯಿದೆ. ಇದಕ್ಕೆ  ಮೋದಿ ಸರಕಾರವನ್ನು ದೂಷಿಸಲಾಗುವುದಿಲ್ಲ. ಇದಕ್ಕೆ 60 ವರ್ಷಗಳ ಕಾಂಗ್ರೆಸ್ ಆಡಳಿತವೇ ಕಾರಣ!" ಕಲ್ಲಿದ್ದಲು, ರೈಲ್ವೆ ಅಥವಾ ವಿದ್ಯುತ್ ಸಚಿವಾಲಯಗಳಲ್ಲಿ ಯಾವುದೇ ಅಸಮರ್ಥತೆ ಇಲ್ಲ. ಆರೋಪವು ಹಿಂದಿನ ಕಾಂಗ್ರೆಸ್ ಸಚಿವರ ಮೇಲೆಯೇ ಇದೆ'' ಎಂದು ಚಿದಂಬರಂ ಹೇಳಿದರು.

" ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿ , ಕಲ್ಲಿದ್ದಲು ರೇಕ್‌ಗಳನ್ನು ಚಲಾಯಿಸುವ ಮೂಲಕ ಸರಕಾರವು ಪರಿಪೂರ್ಣ ಪರಿಹಾರವನ್ನು ಕಂಡುಕೊಂಡಿದೆ! ಮೋದಿ ಹೈ, ಮಮ್ಕಿನ್ ಹೈ," ಎಂದು ಮಾಜಿ ಕೇಂದ್ರ ಸಚಿವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಕಲ್ಲಿದ್ದಲು ಸರಕು ಸಾಗಣೆಗೆ ಅನುಕೂಲವಾಗುವಂತೆ ರೈಲ್ವೆಯು 42 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿತು.  ಆಗ್ನೇಯ ಮಧ್ಯ ರೈಲ್ವೆ ವಿಭಾಗವು ಕಲ್ಲಿದ್ದಲು ಉತ್ಪಾದಿಸುವ ಪ್ರದೇಶಗಳನ್ನು ಒಳಗೊಂಡಿದ್ದು ಅಲ್ಲಿ  34 ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News