ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ: ಶಿಯೋಮಿ ಸ್ಮಾರ್ಟ್‌ಫೋನ್ ಕಂಪನಿಯ 5,551 ಕೋ.ರೂ.ಜಪ್ತಿ ಮಾಡಿದ ಈ.ಡಿ

Update: 2022-04-30 16:19 GMT

ಹೊಸದಿಲ್ಲಿ,ಎ.30: ಜಾರಿ ನಿರ್ದೇಶನಾಲಯ (ಈ.ಡಿ.)ವು ಭಾರತೀಯ ವಿದೇಶಿ ವಿನಿಮಯ ಕಾಯ್ದೆಯ ಉಲ್ಲಂಘನೆಯ ಆರೋಪದಲ್ಲಿ ಚೀನಾದ ಪ್ರಮುಖ ಸ್ಮಾರ್ಟ್ಫೋನ್ ಕಂಪನಿ ಶಿಯೋಮಿಯ ಬ್ಯಾಂಕ್ ಖಾತೆಗಳಿಂದ 5,551.27 ಕೋ.ಗಳನ್ನು ಶನಿವಾರ ಜಪ್ತಿ ಮಾಡಿಕೊಂಡಿದೆ.

ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ,1999ರಡಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ.(ಶಿವೋಮಿ ಇಂಡಿಯಾ) ವಿರುದ್ಧ ಈ.ಡಿ.ಈ ಕ್ರಮವನ್ನು ಕೈಗೊಂಡಿದೆ. ಕಂಪನಿಯು ಎಂಐ ಬ್ರಾಂಡ್ ಹೆಸರಿನಡಿ ದೇಶದಲ್ಲಿ ಮೊಬೈಲ್ ಪೋನ್‌ಗಳ ಮಾರಾಟಗಾರ ಮತ್ತು ವಿತರಕನಾಗಿದೆ.

ಕಂಪನಿಯಿಂದ ಅಕ್ರಮ ಹಣ ರವಾನೆಗಳಿಗೆ ಸಂಬಂಧಿಸಿದಂತೆ ಈ.ಡಿ.ಈ ವರ್ಷದ ಫೆಬ್ರವರಿಯಲ್ಲಿ ತನಿಖೆಯನ್ನು ಆರಂಭಿಸಿತ್ತು.

2014ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಗಳಿಗೆ ನಾಂದಿ ಹಾಡಿದ್ದ ಶಿವೋಮಿ ಕಂಪನಿಯು 2015ರಲ್ಲಿ ಹಣ ರವಾನೆಯನ್ನು ಆರಂಭಿಸಿತ್ತು. ಅದು ಈವರೆಗೆ ಶಿಯೋಮಿ ಸಮೂಹದ ಅಂಗಸಂಸ್ಥೆ ಸೇರಿದಂತೆ ಮೂರು ವಿದೇಶಿ ಕಂಪನಿಗಳಿಗೆ ರಾಯಧನದ ಸೋಗಿನಲ್ಲಿ 5,551.27 ಕೋ.ರೂ.ಗಳಿಗೆ ಸಮನಾದ ವಿದೇಶಿ ವಿನಿಮಯವನ್ನು ರವಾನಿಸಿದೆ ಎಂದು ತಿಳಿಸಿರುವ ಈ.ಡಿ.,ಶಿವೋಮಿ ಇಂಡಿಯಾ ಚೀನಾ ಮೂಲದ ತನ್ನ ಮಾತೃ ಸಮೂಹದ ಕಂಪನಿಗಳ ಸೂಚನೆಯ ಮೇರೆಗೆ ರಾಯಧನಗಳ ಹೆಸರಿನಲ್ಲಿ ಇಷ್ಟೊಂದು ಭಾರೀ ಮೊತ್ತವನ್ನು ರವಾನಿಸಿತ್ತು ಎಂದು ಹೇಳಿದೆ. ಅಮೆರಿಕ ಮೂಲದ ಇತರ ಎರಡು ಕಂಪನಿಗಳಿಗೆ ರವಾನಿಸಲಾಗಿರುವ ಮೊತ್ತವೂ ಅಂತಿಮವಾಗಿ ಶಿವೋಮಿ ಸಮೂಹ ಸಂಸ್ಥೆಗಳ ಲಾಭಕ್ಕಾಗಿಯೇ ಎಂದು ಹೇಳಲಾಗಿದೆ.

ಶಿಯೋಮಿ ಸಂಪೂರ್ಣವಾಗಿ ತಯಾರಾದ ಮೊಬೈಲ್ ಪೋನ್‌ಗಳ ಮತ್ತು ಇತರ ಉತ್ಪನ್ನಗಳನ್ನು ಭಾರತದಲ್ಲಿಯ ತಯಾರಕರಿಂದಲೇ ಖರೀದಿಸುತ್ತಿದೆ. ಅದು ಹಣವನ್ನು ವರ್ಗಾವಣೆ ಮಾಡಿರುವ ಮೂರು ವಿದೇಶಿ ಕಂಪನಿಗಳಿಂದ ಯಾವುದೇ ಸೇವೆಯನ್ನು ಪಡೆದುಕೊಂಡಿಲ್ಲ ಎಂದು ಈ.ಡಿ.ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News