ತನಿಖೆ ಪೂರ್ಣಗೊಳ್ಳುವ ಮುನ್ನವೇ ಪರೀಕ್ಷೆ ರದ್ದು ಮಾಡಿ, ಮರುಪರೀಕ್ಷೆಗೆ ಆದೇಶಿಸಿರುವುದು ಖಂಡನೀಯ: ಡಿ.ಕೆ.ಶಿವಕುಮಾರ್

Update: 2022-04-30 12:06 GMT

ಬೆಂಗಳೂರು, ಎ. 30: ‘ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ತನಿಖೆ ಪೂರ್ಣಗೊಳ್ಳುವ ಮುನ್ನವೇ ಪರೀಕ್ಷೆ ರದ್ದು ಮಾಡಿ, ಮರುಪರೀಕ್ಷೆಗೆ ಆದೇಶಿಸಿರುವುದು ಖಂಡನೀಯ. ಇದು ಈ ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಪಕ್ಷದ ನಾಯಕರ ರಕ್ಷಣೆಯ ಪ್ರಯತ್ನವಾಗಿದ್ದು, ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ನೇಮಕಾತಿ ಸಮಿತಿ ರದ್ದು ಮಾಡಿ, ಪರೀಕ್ಷೆಯೇ ಮಾನದಂಡ ಎಂದು ಪ್ರವೇಶ ಪರೀಕ್ಷೆಗಳನ್ನು ಆರಂಭಿಸಲಾಯಿತು. ಇದು ಆರಂಭವಾದ ನಂತರ ಕೆಪಿಎಸ್ಸಿ ನೇಮಕಾತಿಯಲ್ಲಿ ಗೊಂದಲ ಉದ್ಭವಿಸಿದ್ದನ್ನು ನೋಡಿದ್ದೇವೆ. ಇದರ ವಿಚಾರಣೆ ನಡೆದಿದ್ದು, ಕೋರ್ಟ್ ಹಾಗೂ ಸರಕಾರ ಭಿನ್ನ ತೀರ್ಮಾನ ಕೈಗೊಂಡಿರುವುದನ್ನು ನೋಡಿದ್ದೇವೆ' ಎಂದರು.

‘ಸರಕಾರದ ಎಲ್ಲ ನೇಮಕಾತಿ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ, ಅಕ್ರಮ, ಹಗರಣಗಳ ಸರಮಾಲೆ ಇದೆ. ಪಿಡಬ್ಲ್ಯೂಡಿ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮವಾಗಿದೆ. ಯುವಕರ, ಉದ್ಯೋಗಾಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ. ಪಿಎಸ್ಸೈ ನೇಮಕಾತಿ ಅಕ್ರಮ ವಿಚಾರವಾಗಿ ತನಿಖೆ ನಡೆಯುತ್ತಿದೆ. ಇಪ್ಪತ್ತು ದಿನಗಳ ನಂತರ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಯವರು ಈ ಅಕ್ರಮದ ಆರೋಪವನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿಸಿದ್ದರು. ಕಾಂಗ್ರೆಸ್‍ನವರೂ ಇದರಲ್ಲಿ ಭಾಗಿಯಾಗಿದ್ದಾರೆಂದು ಬಿಂಬಿಸಲು ಪ್ರಯತ್ನಿಸಿದರು. ಬಿಜೆಪಿಯವರು ತಾವು ಹಣ್ಣು ತಿಂದು ಬೇರೆಯವರ ಮೂತಿ ಮೇಲೆ ಸಿಪ್ಪೆ ಇಡುವ ಪ್ರಯತ್ನ ಮಾಡುತ್ತಾರೆ. ಅದು ಯಶಸ್ಸಾಗುವುದಿಲ್ಲ' ಎಂದು ವಾಗ್ದಾಳಿ ನಡೆಸಿದರು.

‘ಈ ನಿರ್ಣಯ ಕೈಗೊಳ್ಳಬೇಕಾದರೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಖಚಿತವಾಗಿರಬೇಕು. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರೇ ಈ ಪಿಎಸ್ಸೈ ನೇಮಕಾತಿಯಲ್ಲಿ ಯಾರು ಅಕ್ರಮ ಮಾಡಿದ್ದಾರೋ, ಅವರನ್ನು ಹೊರತುಪಡಿಸಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಸರಕಾರ ಅವರ ಹೇಳಿಕೆ ನಿರ್ಲಕ್ಷಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇದೊಂದು ಅಕ್ರಮವಾಗಿದ್ದು, ಬಿಜೆಪಿ ನಾಯಕರ ರಕ್ಷಣೆಗೆ ಪರೀಕ್ಷೆ ರದ್ದು ಪಡಿಸಲಾಗಿದೆ' ಎಂದು ಅವರು ಟೀಕಿಸಿದರು.

‘ಈ ಪ್ರಕರಣದಿಂದ ರಾಜ್ಯದ ಘನತೆ ಏನಾಗಿದೆಯೆಂದು ಸರಕಾರ ಅರಿತಿದೆಯೆ? ಪೊಲೀಸ್ ಅಧಿಕಾರಿಯಾಗುವ ಅಭ್ಯರ್ಥಿಗಳಲ್ಲಿ ಈ ಭ್ರಷ್ಟಾಚಾರದ ಭಾವನೆ ಮೂಡಿದರೆ ಮುಂದೆ ಏನಾಗಬಹುದು ಎಂಬ ಪರಿಜ್ಞಾನ ಸರಕಾರಕ್ಕೆ ಇದೆಯಾ? ಇತರೆ ಇಲಾಖೆಗಳಲ್ಲಿ ನೇಮಕಾತಿ ಅಕ್ರಮದ ಬಗ್ಗೆ ಸಚಿವರು ಏಕೆ ಮಾತನಾಡುತ್ತಿಲ್ಲ. ವಿಪಕ್ಷ ನಾಯಕರು ಕೆಲವು ಸಚಿವರ ರಾಜೀನಾಮೆ ಕೇಳಿದ್ದಾರೆ. ಆದರೆ ಕೊಡದಷ್ಟು ಅವರು ಭಂಡರಾಗಿದ್ದಾರೆ' ಎಂದು ಅವರು ವಾಗ್ದಾಳಿ ನಡೆಸಿದರು.

‘ಈ ಅಕ್ರಮಕ್ಕೆ ಮುಖ್ಯಮಂತ್ರಿ ಜವಾಬ್ದಾರರಾಗಿದ್ದಾರೆ. ನಿಮ್ಮ ಸರಕಾರ ಅಕ್ರಮಗಳ ಸರಮಾಲೆ ಧರಿಸಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ನಿಮ್ಮ ನಾಯಕರು, ಅಧಿಕಾರಿಗಳ ಹೆಸರನ್ನು ನಾವು ಬಹರಂಗ ಪಡಿಸುವ ಮುನ್ನ ನೀವೇ ಬಹಿರಂಗ ಮಾಡಬೇಕು. ಇಡೀ ನಿಮ್ಮ ಪಕ್ಷ ಈ ನೇಮಕಾತಿ ಅಕ್ರಮದ ಕೊಳಕಿನಲ್ಲಿ ಮುಳುಗಿ ಒದ್ದಾಡುತ್ತಿದೆ. ಈ ಮಕ್ಕಳು ಕೋರ್ಟ್ ಮೆಟ್ಟಿಲೇರಲು ನೀವೇ ದಾರಿ ಮಾಡಿಕೊಡುತ್ತಿದ್ದೀರಿ. ಕೋರ್ಟ್ ವಿಚಾರಣೆ ಹೆಸರಲ್ಲಿ ಇದು ಮುಂದಕ್ಕೆ ಹೋಗಬೇಕು ಎಂಬುದು ನಿಮ್ಮ ಕುತಂತ್ರ' ಎಂದು ದೂರಿದರು.

ಅಧಿವೇಶನದಲ್ಲೇ ಸುಳ್ಳು ಹೇಳಿದ ಸಚಿವರು

‘ಗೃಹಸಚಿವರು ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅಧಿವೇಶನದಲ್ಲೇ ಹೇಳಿದ್ದರು. ನಮ್ಮ ಶಾಸಕರು, ನಾಯಕರು ಈ ಅಕ್ರಮದ ವಿಚಾರ ಬಹಿರಂಗ ಪಡಿಸಿದರೆ, ಅವರನ್ನು ಬೆದರಿಸಲು ನೋಟಿಸ್ ನೀಡುತ್ತೀರಿ. ಕಾಂಗ್ರೆಸ್ ಪಕ್ಷ ಇದಕ್ಕೆಲ್ಲ ಹೆದರುವುದಿಲ್ಲ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ನಿಮ್ಮ ಮುಖಂಡರೇ ಗೌಪ್ಯ ಸ್ಥಳದಲ್ಲಿ ಇಟ್ಟಿದ್ದರು ಎಂದು ನಿಮಗೆ ಗೊತ್ತಿದೆ. ಅವರ ವಿಚಾರಣೆ ಮಾಡುವ ಮುನ್ನವೇ, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂದು ಬಹಿರಂಗವಾಗುವ ಮುನ್ನವೇ ಈ ಹಿಂದೆ ನಡೆದಿರುವ ಪರೀಕ್ಷೆ ರದ್ದು ಮಾಡಿ ಮರುಪರೀಕ್ಷೆಗೆ ಆದೇಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ?'

-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News