ಪಿಎಸ್‌ಐ ಮರುಪರೀಕ್ಷೆ ಮಾಡೋದು ಸರ್ಕಾರಕ್ಕೆ ಅನಿವಾರ್ಯ: ಸಚಿವ ಆರಗ ಜ್ಞಾನೇಂದ್ರ

Update: 2022-04-30 12:24 GMT

ಶಿವಮೊಗ್ಗ, ಎ.30: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯುತ್ತಿದೆ. ಆರೋಪಿಗಳ ಬಂಧನ ಕೂಡ ಆಗಿದೆ. ಆರೋಪಿಗಳು ಬೇರೆ ರೀತಿಯಲ್ಲಿ ತಂತ್ರಜ್ಞಾನ ಬಳಸಿ, ಅಕ್ರಮ ಮಾಡಿದ್ದಾರೆ. ಹೀಗಾಗಿ, ಮರುಪರೀಕ್ಷೆ ಮಾಡೋದು ಸರ್ಕಾರಕ್ಕೆ ಅನಿವಾರ್ಯ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೋಟಿಫಿಕೇಶನ್ ರದ್ದು ಮಾಡಿಲ್ಲ, ಪರೀಕ್ಷೆಯನ್ನು ಮಾತ್ರ ರದ್ದು ಮಾಡಿದ್ದೇವೆ. ಪ್ರಾಮಾಣಿಕ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ತೊಂದರೆ ಆಗಬಾರದು. ಈ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಿ, ಮರುಪರೀಕ್ಷೆಗೆ ಸರ್ಕಾರ ಆದೇಶ ಮಾಡಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಪರೀಕ್ಷೆಯಲ್ಲಿ ಫೇಲ್ ಆದವರಿಗೆ ಮತ್ತೊಂದು ಅವಕಾಶ ಸಿಗಲಿದೆ. ಯಾರು ಅಕ್ರಮ ಮಾಡಿದ್ದಾರೆ ಅವರಿಗೆ ತಕ್ಕ ಪಾಠ ಆಗಲಿದೆ. ದೈಹಿಕ ಪರೀಕ್ಷೆ ಇರುವುದಿಲ್ಲ, ಕೇವಲ ಲಿಖಿತ ಪರೀಕ್ಷೆ ಮಾಡುತ್ತೇವೆ ಎಂದು ತಿಳಿಸಿದರು.

ಎಲ್ಲಾ ಮುನ್ನಚ್ಚರಿಕೆ ಮತ್ತು ತಂತ್ರಜ್ಞಾನ ಬಳಸಿ ಪಿಎಸ್‌ಐ ಪರೀಕ್ಷೆ ನಡೆಸಲಾಗುವುದು. ಮತ್ತೆ ಪರೀಕ್ಷೆ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಅಕ್ರಮ ಮಾಡುವವರಿಗೆ ತಕ್ಕ ಪಾಠ ಆಗಬೇಕು. ಆ ನಿಟ್ಟಿನಲ್ಲಿ ಸಹ ಕಾನೂನು ತಿದ್ದುಪಡಿ ಮಾಡ್ತೇವೆ. ಕಷ್ಟಪಟ್ಟು ಓದಿದವರಿಗೆ ಅನುಕೂಲವಾಗಬೇಕು. ಹಣ ಕೊಟ್ಟು ಕೊಂಡುಕೊಳ್ಳುವವರಿಗೆ ಅಲ್ಲ ಎಂದರು.

ನನ್ನನ್ನು ಅರೆಸ್ಟ್ ಮಾಡಿ ಎಂದಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಸಿಐಡಿ ನೋಟಿಸ್ ನೀಡಿದ್ರೂ ಬಂದಿಲ್ಲ.ಅವರ ಬಳಿ ಸಾಕ್ಷಿಗಳಿದ್ದರೆ ಸಿಐಡಿಗೆ ನೀಡಲಿ, ಮೀಡಿಯಾ ಮುಂದೆ ಅಲ್ಲ. ಅದನ್ನು ಬಿಟ್ಪು ಕೇವಲ ಈ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ದಾಖಲೆಗಳನ್ನು ತನಿಖಾಧಿಕಾರಿಯ ಮುಂದೆ ಕೊಡದೇ ಪಲಾಯನ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯ ಲಾಭ ಬೇಕು, ಪ್ರಾಮಾಣಿಕ ತನಿಖೆ ಬೇಡವಾಗಿದೆ. ಪಿಎಸ್‌ಐ ನೇಮಕಾತಿ ಅಕ್ರಮವಾಗಿದೆ ಎಂದು ನಾವೇ ಒಪ್ಪಿಕೊಂಡಿದ್ದೇವೆ. ದಾಖಲೆ ಸಿಕ್ಕ ಎರಡು ಗಂಟೆಯಲ್ಲಿ ನಾನೇ ಸಿಒಡಿ ತನಿಖೆಗೆ ಆದೇಶ ಮಾಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News