ಅಯೋಧ್ಯೆ:‌ ಮುಸ್ಲಿಂ ಗುರುತಿನಲ್ಲಿ ಗಲಭೆಗೆ ಸಂಚು ಹೂಡಿದ್ದ ಮುಖ್ಯ ಆರೋಪಿ ರೌಡಿ ಶೀಟರ್, ಮುಸ್ಲಿಮರ ಬದ್ಧದ್ವೇಷಿ

Update: 2022-04-30 17:42 GMT
photo:twitter

ಹೊಸದಿಲ್ಲಿ,ಎ.30: ಅಯೋಧ್ಯೆಯಲ್ಲಿ ಇತ್ತೀಚಿಗೆ ದುಷ್ಕರ್ಮಿಗಳ ಗುಂಪೊಂದು ಕೆಲವು ಮಸೀದಿಗಳ ಬಳಿ ಹಂದಿ ಮಾಂಸ, ಇಸ್ಲಾಮಿಕ್ ಗ್ರಂಥದ ಕೆಲವು ಹರಿದ ಪುಟಗಳು ಮತ್ತು ಮುಸ್ಲಿಮರನ್ನು ನಿಂದಿಸುವ ಪತ್ರಗಳನ್ನು ಎಸೆದು ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಮನೀಷ್ ಮಿಶ್ರಾ ರೌಡಿ ಶೀಟರ್ ಆಗಿದ್ದು ಮುಸ್ಲಿಮರ ಬದ್ಧದ್ವೇಷಿಯಾಗಿದ್ದಾನೆ.

ಸುದ್ದಿಸಂಸ್ಥೆಯಿಂದ ಮಿಶ್ರಾನ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳ ಪರಿಶೀಲನೆಯಿಂದ ಆತ ಹವ್ಯಾಸಿ ಅಪರಾಧಿಯಾಗಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ. ಹಿಂದೆ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಅಯೋಧ್ಯೆಯಲ್ಲಿ ಕುಖ್ಯಾತನಾಗಿರುವ ಮಿಶ್ರಾ ಹಲವಾರು ಸಂದರ್ಭಗಳಲ್ಲಿ ಮುಸ್ಲಿಮರ ಹತ್ಯೆಗೆ ಪಣ ತೊಟ್ಟಿದ್ದ,ಅವರ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದ ಮತ್ತು ತಾನು ಕೊಲ್ಲಬಯಸಿರುವ ದೇಶವಿರೋಧಿಗಳ ಹಿಟ್ ಲಿಸ್ಟ್ ಸಿದ್ಧಗೊಳಿಸಿರುವುದಾಗಿ ಹೇಳಿಕೊಂಡಿದ್ದ.

ಹೆಚ್ಚಿನ ಸಂದರ್ಭಗಳಲ್ಲಿ ಮಿಶ್ರಾನ ಗಲಭೆಯನ್ನು ಉತ್ತೇಜಿಸುವ ಭಾಷಣಗಳು ಮತ್ತು ಮತಾಂಧ ದೃಷ್ಟಿಕೋನಗಳ ಕುರಿತು ಕ್ರಿಮಿನಲ್ ಆರೋಪಗಳು ದಾಖಲಾಗಿಲ್ಲ,ದಂಡನೆಯೂ ಆಗಿಲ್ಲ. ಉತ್ತರ ಪ್ರದೇಶ ಪೊಲೀಸರು ತಿಳಿಸಿರುವಂತೆ ಮಿಶ್ರಾ ನೇತೃತ್ವದ ‘ಹಿಂದು ಯೋಧಾ ಸಂಘಟನ್’ ಎಂಬ ಹಿಂದು ಮೂಲಭೂತವಾದಿ ಗುಂಪು ಅಯೋಧ್ಯೆಯಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನಕ್ಕೆ ಹೊಣೆಗಾರನಾಗಿದೆ. ಪೊಲೀಸರು ಮಿಶ್ರಾನ ಸಂಚನ್ನು ವಿಫಲಗೊಳಿಸಿದ್ದಾರೆ. ರೌಡಿ ಶೀಟರ್ ಆಗಿರುವ ಮಿಶ್ರಾ ವಿರುದ್ಧ ನಾಲ್ಕು ಕ್ರಿಮಿನಲ್ ಪ್ರಕರಣಗಳಿವೆ.
  ‌
2016ರಲ್ಲಿ ಮಕ್ಕಳಿಗಾಗಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ಸಂಘಟಿಸಿದ್ದ ಆರೋಪದಲ್ಲಿ ಕೆಲ ಕಾಲ ಮಿಶ್ರಾನನ್ನು ಜೈಲಿಗೆ ತಳ್ಳಲಾಗಿತ್ತು. ಈ ಶಿಬಿರದಲ್ಲಿ ಮುಸ್ಲಿಮರಂತೆ ಉಡುಪುಗಳನ್ನು ಧರಿಸಿದವರ ಮೇಲೆ ದಾಳಿ ನಡೆಸಲು ಮತ್ತು ಅವರನ್ನು ಕೊಲ್ಲಲು ಮಕ್ಕಳಿಗೆ ತರಬೇತಿ ನೀಡಲಾಗಿತ್ತು. ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡಿ ದ್ವೇಷವನ್ನು ಉತ್ತೇಜಿಸುತ್ತಿದ್ದ ಆರೋಪವನ್ನು ಆತನ ಮೇಲೆ ಹೊರಿಸಲಾಗಿತ್ತು. ಈಗ ರಾಮಮಂದಿರ ಟ್ರಸ್ಟ್ ನ ಉಸ್ತುವಾರಿಯಾಗಿರುವ ವಿಹಿಂಪ ನಾಯಕ ಚಂಪತ್ ರಾಯ್ ಆಗ ಮಿಶ್ರಾನನ್ನು ಮತ್ತು ಆತನ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಬೆಂಬಲಿಸಿದ್ದರು. ಮಿಶ್ರಾ ಬಂಧನವನ್ನು ಕಾನೂನುಬಾಹಿರ ಎಂದು ಅವರು ಬಣ್ಣಿಸಿದ್ದರು.

2017,ಡಿ.6ರಂದು ಬಾಬ್ರಿ ಮಸೀದಿ ಧ್ವಂಸದ 25ನೇ ವರ್ಷಾಚರಣೆಯ ಪ್ರಯುಕ್ತ ಸ್ಥಳೀಯ ಬಜರಂಗ ದಳ ಘಟಕದ ಮುಖ್ಯಸ್ಥನಾಗಿ ಮಿಶ್ರಾ ಅಯೋಧ್ಯೆಯಲ್ಲಿ ‘ಶೌರ್ಯ ದಿವಸ್ ’ ರ್ಯಾಲಿಯನ್ನು ನಡೆಸಿದ್ದ. ಪೊಲೀಸರು ಇದಕ್ಕೆ ಅನುಮತಿ ನಿರಾಕರಿಸಿದ್ದರು ಮತ್ತು ಪ್ರದೇಶದಲ್ಲಿ ಕಲಂ 144 ಅನ್ನು ಜಾರಿಗೊಳಿಸಿದ್ದರು ಎನ್ನಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಬೇಕೆಂಬ ಆಂದೋಲನವು ಮಿಶ್ರಾ ನೇತೃತ್ವದಲ್ಲಿ ನಿರಂತರವಾಗಿ ನಡೆಯುತ್ತಿದೆ. ನ್ಯೂಸ್ ನೇಷನ್ನಲ್ಲಿ ‘ಹಿಂದು ವಿರುದ್ಧ ಮುಸ್ಲಿಮ್’ ಚರ್ಚೆಗಳನ್ನು ಧ್ರುವೀಕರಿಸುವಲ್ಲಿ ಪ್ಯಾನೆಲಿಸ್ಟ್ ಆಗಿಯೂ ಆತ ಕಾಣಿಸಿಕೊಂಡಿದ್ದ. ಆತನ ಸಾಮಾಜಿಕ ಮಾಧ್ಯಮ ಖಾತೆಗಳು ‘ದೇಶ ವಿರೋಧಿಗಳನ್ನು ಕೊಲ್ಲಿ ’ಎಂಬ ಸಂದೇಶಗಳಿಂದ ತುಂಬಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News