ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿದಿದ್ದಲ್ಲಿ ಸರಕಾರ ಸೇರಿದಂತೆ ಯಾರಿಗೂ ಉಳಿಗಾಲವಿಲ್ಲ: ಡಾ.ಗೊ.ರು.ಚನ್ನಬಸಪ್ಪ

Update: 2022-04-30 18:24 GMT

ಚಿಕ್ಕಮಗಳೂರು, ಎ.30: ಆಧುನಿಕತೆಯಿಂದಾಗಿ ಅವಸಾನದ ಅಂಚಿಗೆ ತಲುಪಿರುವ ಗ್ರಾಮೀಣರ ಬದುಕು ಮತ್ತು ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಸಂರಕ್ಷಿಸುವ ಕೆಲಸವಾಗದಿದ್ದರೆ ಸರಕಾರ ಸೇರಿದಂತೆ ಯಾರಿಗೂ ಉಳಿಗಾಲವಿಲ್ಲ. ಸರಕಾರಗಳು ಗ್ರಾಮೀಣ ಜನರ ಬದುಕು ನಿರ್ಲಕ್ಷ್ಯಿಸಿ ನಗರಗಳಿಗೆ ಆಧ್ಯತೆ ನೀಡುತ್ತಿರುವುದರಿಂದ ಗ್ರಾಮೀಣ ಜನರ ಬದುಕು ಸಂಸ್ಕೃತಿ ನಾಶವಾಗುತ್ತಿದೆ ಎಂದು ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಜಾನಪದ ಪರಿಷತ್‍ನ ಜಿಲ್ಲಾ ಘಟಕ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ತೃತೀಯ ಜಿಲ್ಲಾ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಓದು ಬರಹ ಬಾರದ ನಮ್ಮ ಪೂರ್ವಿಕರು ಶ್ರಮದ ದುಡಿಮೆಯ ನಡುವೆ ಕಟ್ಟಿ ಬೆಳೆಸಿರುವ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯು ಆಧುನಿಕತೆಯಿಂದಾಗಿ ನಲುಗುತ್ತಿದೆ. ಇತ್ತೀಚಿನ ವರ್ಷಗಳಲ್ಲಂತೂ ಆಧುನಿಕ ಸಂಸ್ಕøತಿಯ ನಾಗಲೋಟಕ್ಕೆ ಸಿಲುಕಿರುವ ಗ್ರಾಮೀಣ ಸಂಸ್ಕøತಿ ಅವಸಾನದ ಹಾದಿ ಹಿಡಿಯುತ್ತಿದೆ. ಇದರ ಪರಿಣಾಮ ಹಳ್ಳಿಗಳು ಮತ್ತು ಗ್ರಾಮೀಣ ಸಂಸ್ಕøತಿ ಹಾಗೂ ಜನರೂ ಬದಲಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಹಳ್ಳಿಗಳ ಉದ್ಧಾರವಾದರೆ ಮಾತ್ರ ದೇಶ ಅಭಿವೃದ್ದಿಯಾಗುತ್ತದೆ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬಲವಾಗಿ ಪ್ರತಿಪಾದಿಸಿದ್ದರು. ಆದರೆ ಅದನ್ನು ಸರಕಾರಗಳು ಅನುಷ್ಠಾನಕ್ಕೆ ತಾರದೆ ಗ್ರಾಮಗಳನ್ನು ನಿರ್ಲಕ್ಷಿಸಿ ನಗರಗಳನ್ನು ಅಭಿವೃದ್ಧಿ ಪಡಿಸಿದ್ದರಿಂದಾಗಿ ಹಳ್ಳಿಗಳು ಬದಲಾಗುತ್ತಿವೆ. ಹಳ್ಳಿಗಳ ಬದಲಾವಣೆಯಿಂದಾಗಿ ಹಳ್ಳಿ ಜನರು ಮೈಗೂಡಿಸಿಕೊಂಡಿದ್ದ ವಿಶಿಷ್ಟ ಜಾನಪದ ಸಂಸ್ಕೃತಿಯೂ ಬದಲಾಗುತ್ತಿದೆ ಎಂದರು. 

ನಮ್ಮ ಹಳ್ಳಿಗಳಿಂದ ಶೇ.80ರಷ್ಟು ಜನರು ನಗರಗಳಿಗೆ ತೆರಳಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಕಲ ಸವಲತ್ತುಗಳನ್ನೂ ಹೊಂದಿ ಐಷಾರಾಮಿಯಾಗಿ ಬದುಕುತ್ತಿರುವ ನಗರದ ಜನರು ತಾವು ಹುಟ್ಟಿ ಬೆಳೆದ ಹಳ್ಳಿಗಳನ್ನು ನಿರ್ಲಕ್ಷಿಸುತ್ತಿರುವುದು ಅದರತ್ತ ತಿರುಗಿ ನೋಡದಿರುವುದು ದುರಂತ ಬೇಸರ ವ್ಯಕ್ತಪಡಿಸಿದ ಅವರು, ಹಳ್ಳಿಗರ ಬದುಕು, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಯಾರೂ ಮರೆಯಬಾರದು, ಗ್ರಾಮಗಳಿಂದ ವಲಸೆ ಹೋಗಿ ನಗರದಲ್ಲಿ ವಾಸಿಸುತ್ತಿರುವವರು ತಾವು ಹುಟ್ಟಿ ಬೆಳೆದ ಹಳ್ಳಿಗಳ ಏಳಿಗೆಗೆ ದುಡಿಯಬೇಕು ಎಂದು ಕಿವಿಮಾತು ಹೇಳಿದರು.

ಸಮ್ಮೇಳನಾಧ್ಯಕ್ಷ ಡಾ.ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಆಧುನಿಕತೆಯ ಬಿರುಗಾಳಿಯ ನಡುವೆಯೂ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿರುವ ಹಿರಿಯ ಜಾನಪದ ಕಲಾವಿದರು ಇಂದು ದುಡಿಯಲಾಗದೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆಶಕ್ತರು ಮತ್ತು ಅಸಹಾಯಕರಾಗಿರುವ ಎಲ್ಲಾ ಜಾನಪದ ಕಲಾವಿದರಿಗೂ ಸರಕಾರ ಮಾಸಾಶನ ನೀಡಬೇಕು, ಮಾಸಾಶನದ ಮೊತ್ತವನ್ನು 2 ಸಾವಿರದಿಂದ ಕನಿಷ್ಠ 3 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದ ಅವರು, ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ತಿಮ್ಮೇಗೌಡ ಅವರು ಕಲಾವಿದರ ಮಾಶಾಸನದ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು. 

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಜಾನಪದವನ್ನು ಮತ್ತು ಜಾನಪದ ಕಲಾವಿದರನ್ನು ಉಳಿಸಿ ಬೆಳೆಸುವ ಬಗ್ಗೆ ವಿಧಾನಸಭೆಯ ಅಧಿವೇಶನದ ವೇಳೆ ತಾವು ಚರ್ಚಿಸುತ್ತೇನೆಂದು ಭರವಸೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಜಾನಪದ ಕಲಾವಿದರಿಗೆ ಕಳೆದ ನಾಲ್ಕೈದು ವರ್ಷಗಳಿಂದ ಸರಿಯಾಗಿ ಮಾಸಾಶನ ದೊರೆಯುತ್ತಿಲ್ಲ ಎಂದು ವಿಷಾದಿಸಿ, ವರ್ಷದೊಳಗೆ ಸರಕಾರ  ಎಲ್ಲರಿಗೂ ಮಾಸಾಶನ ನೀಡಬೇಕು, ಮಾಸಾಶನದ ಮೊತ್ತವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸರಕಾರದ ಗಮನಸೆಳೆಯುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್‍ನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಪಾಶ್ಚಾತ್ಯ ಸಂಸ್ಕೃತಿಯ ದಾಳಿಯಿಂದಾಗಿ ನಶಿಸುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಸರಕಾರ ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನೂತನ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದರು.

ಸಮ್ಮೇಳದಲ್ಲಿ ಪರಿಷತ್ತಿನ ಜಿಲ್ಲಾ ಘಟಕ ಹೊರತಂದಿರುವ ಜಿಲ್ಲೆಯ ಜಾನಪದ ಕಲಾ ಸಾಧಕರು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬೆಳವಾಡಿಯ ಭಜನಾ ಕಲಾವಿದ ಬಿ.ಪಿ.ಪರಮೇಶ್ವರಪ್ಪ, ಕಾರೇಹಳ್ಳಿಯ ವೀರಗಾಸೆ ಕಲಾವಿದ ಬಸವರಾಜ್ ಗುರು ಮತ್ತು ನಾರ್ವೆಯ ಜಾನಪದ ಗಾಯಕಿ ಶ್ಯಾಮಲಾ ಅವರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಡಾ.ಮಾಳೇನಹಳ್ಳಿ ಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಜಾನಪದ ಕಲಾವಿದರು. ಮತ್ತು ಸಮ್ಮೇಳನಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಸಾಹಿತಿ ಡಾ.ಬಸವರಾಜ್ ನಲ್ಲಿಸರ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಡಾ.ವಿನಾಯಕ ಸಿಂದಿಗೆರೆ, ದಾನಿ ಅತ್ತಿಕಟ್ಟೆ ಗುರುನಾಥಗೌಡ, ಜಿಪಂ ಮಾಜಿ ಸದಸ್ಯ ಹಿರಿಗಯ್ಯ, ಜಾನಪದ ಅಕಾಡೆಮಿ ಸದಸ್ಯೆ ಲಕ್ಮೀದೇವಮ್ಮ, ಜಿ.ಬಿ.ವಿರೂಪಾಕ್ಷ  ಉಪಸ್ಥಿತರಿದ್ದರು. ಇದೇ ವೇಳೆ ಸಮ್ಮೇಳನದ ಆವರಣದಲ್ಲಿ ಏರ್ಪಡಿಸಿದ್ದ ಜಾನಪದರು ಮತ್ತು ಪೂರ್ವಿಕರು ಬಳಸುತ್ತಿದ್ದ ಜಾನಪದ ಪರಿಕರಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News