ಉತ್ತರಪ್ರದೇಶ: ಅತ್ಯಾಚಾರಕ್ಕೀಡಾದ ಮರುದಿನ ಆತ್ಮಹತ್ಯೆಗೈದ ಬಾಲಕಿ, ಆರೋಪಿ ಸೆರೆ

Update: 2022-05-05 07:36 GMT

ಫತೇಪುರ್(ಉತ್ತರಪ್ರದೇಶ): ಫತೇಪುರ ಜಿಲ್ಲೆಯ ಚಾಂದ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ತನ್ನ ಗ್ರಾಮದಲ್ಲಿ ಯುವಕನಿಂದ ಅತ್ಯಾಚಾರಕ್ಕೊಳಗಾದ ಹದಿಹರೆಯದ ದಲಿತ ಬಾಲಕಿಯೊಬ್ಬಳು ವಿಷ ಸೇವಿಸಿ ಬುಧವಾರ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

15 ವರ್ಷದ ದಲಿತ ಬಾಲಕಿ ಮಂಗಳವಾರ ಸಂಜೆ ತನ್ನ ಹಳ್ಳಿಯ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗಿದ್ದಳು. ಆಗ ಆಕೆಯ ಗ್ರಾಮದ ಯುವಕನೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಫತೇಪುರ್ ಪೊಲೀಸ್ ಅಧೀಕ್ಷಕ ರಾಜೇಶ್ ಕುಮಾರ್ ಸಿಂಗ್  ಹೇಳಿದ್ದಾರೆ. 

ತಡರಾತ್ರಿಯಾದರೂ ಬಾಲಕಿ ಮನೆಗೆ ಬಾರದೇ ಇದ್ದಾಗ ಆಕೆಯ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದು, ಬಾಲಕಿ ಕಾಡಿನಲ್ಲಿ  ಪತ್ತೆಯಾಗಿದ್ದಳು ಎಂದು ಎಸ್ಪಿ ತಿಳಿಸಿದ್ದಾರೆ.

ಆಕೆಯ ಕುಟುಂಬಸ್ಥರು ಆಕೆಯನ್ನು ಖಾಸಗಿ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ನೀಡಿ ಮನೆಗೆ ಕರೆತಂದಿದ್ದಾರೆ. ಆದರೆ ಬುಧವಾರ ಬೆಳಗ್ಗೆ ವಿಷ ಸೇವಿಸಿದ ಬಾಲಕಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ ಎಂದು ಎಸ್ಪಿ ತಿಳಿಸಿದ್ದಾರೆ.

ಬಾಲಕಿಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News