ಆರ್ ಟಿಐ ಅಡಿ ಮಾಹಿತಿ ಕೊಡದ ಮದ್ದೂರು ತಹಶೀಲ್ದಾರ್ ಗೆ 7,500 ರೂ. ದಂಡ

Update: 2022-05-05 13:28 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಮೇ 5: ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿದಾರರಿಗೆ ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಮದ್ದೂರು ತಾಲೂಕು ಕಚೇರಿಯ ಸಾರ್ವನಿಕ ಮಾಹಿತಿ ಅಧಿಕಾರಿ ಹಾಗೂ ತಹಶೀಲ್ದಾರ್ ಟಿ.ಎಂ.ನರಸಿಂಹಮೂರ್ತಿ ಅವರಿಗೆ 7,500 ಸಾವಿರ ರೂ. ದಂಡ ವಿಧಿಸಲಾಗಿದೆ.

ಈ ಸಂಬಂಧ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಎಸ್.ಎಲ್.ಪಾಟೀಲ್, ತಹಶೀಲ್ದಾರ್ ಅವರ ಸಂಬಳದಲ್ಲಿ ದಂಡದ ಹಣವನ್ನು ಕಡಿತಗೊಳಿಸಿ ಪಿರ್ಯಾದುದಾರರಿಗೆ ನೀಡುವಂತೆ ಮೇಲ್ಮನವಿ ಪ್ರಾಧಿಕಾರಿಯಾದ ಮಂಡ್ಯ ಉಪವಿಭಾಗಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಮದ್ದೂರು ತಾಲೂಕು ದುಂಡನಹಳ್ಳಿ ಗ್ರಾಮದ ಹಳೆ ಸರ್ವೆ ನಂ.23ರ ಜಮೀನಿಗೆ ಸಂಬಂಧಪಟ್ಟ ದರಖಾಸ್ತು ಮಂಜೂರಾತಿ ಆದೇಶದ ಕಾಪಿ, ನಕ್ಷೆ, ಮಹಜರ್, ಅರ್ಜಿ, ನೊಟೀಸ್ ಲೀಸ್ಟ್, ದೃಢೀಕೃತ ದಾಖಲೆಗಳ ಮಾಹಿತಿ ಕೋರಿ ಕೆಸ್ತೂರು ಗ್ರಾಮದ ಕೆ.ಟಿ.ನಾರಾಯಣಸ್ವಾಮಿ ತಹಶೀಲ್ದಾರ್ ಟಿ.ಎಂ.ನರಸಿಂಹಮೂರ್ತಿ ಅವರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದರು.

ಆದರೆ, ಎರಡು ವರ್ಷವಾದರೂ ತಹಶೀಲ್ದಾರ್ ಮಾಹಿತಿ ನೀಡಿರಲಿಲ್ಲ. ಆದ್ದರಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಮದ್ದೂರು ತಹಶೀಲ್ದಾರ್ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾದ ಉಪವಿಭಾಗಾಧಿಕಾರಿ ವಿರುದ್ಧ ನಾರಾಯಣಸ್ವಾಮಿ ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು.

ಆಯೋಗವು ಮಾಹಿತಿ ನೀಡುವಂತೆ ಪ್ರತಿವಾದಿ ತಹಶೀಲ್ದಾರ್ ಅವರಿಗೆ ನಿರ್ದೇಶಿಸಿದರೂ ಯಾವುದೇ ಮಾಹಿತಿಯನ್ನು ಒದಗಿಸಲಿಲ್ಲ. ಜತೆಗೆ ಆಯೋಗದ ಆದೇಶದಲ್ಲಿ ನಿರ್ದೇಶಿಸಿದಂತೆ ಕಾರಣ ಕೇಳಿ ನೊಟೀಸ್‍ಗೂ ಯಾವುದೇ ಲಿಖಿತ ಸಮಜಾಯಿಸಿ ನೀಡಿರುವುದಿಲ್ಲ. ಹಾಗಾಗಿ ತಹಶೀಲ್ದಾರ್ ಅವರಿಗೆ ದಂಡ ವಿಧಿಸಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News