ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಮುನ್ನ ಸೌಜನ್ಯಯುತ ಚರ್ಚೆಗೆ ಬನ್ನಿ: ಸಚಿವರಿಗೆ ಪ್ರೊ.ಬಿ.ಕೆ.ಚಂದ್ರಶೇಖರ್ ಆಹ್ವಾನ

Update: 2022-05-05 16:10 GMT
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಪ್ರೊ .ಬಿ.ಕೆ.ಚಂದ್ರಶೇಖರ್

ಮೈಸೂರು,ಮೇ.5: ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಅಳವಡಿಸುತ್ತಿರುವ ವಿಚಾರವಾಗಿ ಶಿಕ್ಷಣ ಸಚಿವರು ಹಾಗೂ ಒಂದಿಬ್ಬರು ಬಿಜೆಪಿಯ ನಾಯಕರನ್ನು  ಸೌಜನ್ಯಯುತ ಚರ್ಚೆಗೆ ಮಾಜಿ ಸಚಿವ ಪ್ರೊ .ಬಿ.ಕೆ.ಚಂದ್ರಶೇಖರ್ ಅವರು ಆಹ್ವಾನ ನೀಡಿದ್ದಾರೆ.

ಪಠ್ಯದಲ್ಲಿ ಭಗವದ್ಗಿತೆಯನ್ನು ಅಳವಡಿಸುವುದರ ಬಗ್ಗೆ  ನನಗೆ ಯಾವುದೇ ವಿರೋಧವಿಲ್ಲ. ಭಗವದ್ಗೀತೆಯಲ್ಲಿ  ನೈತಿಕತೆ ಕುರಿತು, ಒಳ್ಳೆಯದು ಯಾವುದು-ಕೆಟ್ಟದು ಯಾವುದು ಎನ್ನುವುದರ ಕುರಿತು ಹಾಗೂ ವ್ಯಕ್ತಿ ತಪ್ಪುಗಳನ್ನು ಮಾಡಿದರೇ ಮುಂದೆ ಪರಿಣಾಮ ಏನಾಗುತ್ತದೆ ಎನ್ನುವಂತಹ ಉತ್ತಮ ವಿಚಾರಗಳು ಇವೆ. ಆದರೆ  ಇದು  ಒಂದು ಧರ್ಮದ ಆಧ್ಯಾತ್ಮಿಕ-ಧಾರ್ಮಿಕತೆಯನ್ನು ತಿಳಿಸುವ ಹೊತ್ತಿಗೆಯಾಗಿದೆ. ಆದ್ದರಿಂದ ಇದರೊಂದಿಗೆ ಬೇರೆ ಧರ್ಮಗಳ ಗ್ರಂಥಗಳ ಸಾರಗಳನ್ನು  ಪಠ್ಯದಲ್ಲಿ ಅಳವಡಿಸಲು ಏನು ಮಾಡಬಹುದು ಎನ್ನುವ ವಿಚಾರವಾಗಿ  ಒಂದು ಆರೋಗ್ಯಕರ ಸಂವಾದವನ್ನು ನಡೆಸುವ ಅವಶ್ಯಕತೆ ಇದೆ. ಅದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್, ಸಿ.ಟಿ.ರವಿ ಹಾಗೂ ಇನ್ನು ಯಾರಾದರು ನಾಯಕರು ಬನ್ನಿ ಚರ್ಚೆ ಮಾಡೋಣ. ಒಂದು ಚಿಂತನ-ಮಂಥನಗೋಷ್ಠಿ ನಡೆಯಲಿ? ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.

ಒಂದೇ ಧರ್ಮವು ಹಲವು ಜನಾಂಗ-ಧರ್ಮಗಳ ಮೇಲೆ ಆಡಳಿತವನ್ನು ಬಲವಂತವಾಗಿ ಹೇರುವುದು ದುರಂತವೇ ಸರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ದೇಶ ಕಂಡ ಪ್ರಖ್ಯಾತ ತತ್ವಶಾಸ್ತ್ರಜ್ಞರಾದ ಡಾ.ಎಸ್.ರಾಧಕೃಷ್ಣನ್ ಅವರೂ ಹಲವಾರು ವರ್ಷದ ಹಿಂದೇ0iÉು  ಶಾಲಾ ಪಠ್ಯದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೋರಾಷ್ಟ್ರೀಯನ್, ಪಾರ್ಸಿ,ಜೈನ್,ಸಿಖ್,ಬೌದ್ಧ ಸೇರಿದಂತೆ ಇನ್ನು ಹಲವು ಧರ್ಮಗಳ ತತ್ವಸಾರವನ್ನು ಅಳವಡಿಸಬಹುದು ಎಂದು ವರದಿ ನೀಡಿದ್ದಾರೆ. ಆದ್ದರಿಂದ ಈಗೀನ ಸರ್ಕಾರ ಈ ವಿಚಾರಗಳನ್ನು ಗಣನೆಗೆ ತಗೆದುಕೊಂಡು ಧಾರ್ಮಿಕ ವಿಷಯವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಅವರು ಮನವಿ ಮಾಡಿದರು.

ರಾಜಕೀಯಕರಣಗೊಂಡಿರುವ ಪೊಲೀಸ್ ವ್ಯವಸ್ಥೆ:

ಪ್ರಸ್ತುತ ಪೊಲೀಸ್ ವ್ಯವಸ್ಥೆ ಕುರಿತು ಮಾತನಾಡಿದ ಪ್ರೊ .ಬಿಕೆಸಿ ಅವರು,ರಾಜ್ಯದಲ್ಲಿ ಪೊಲೀಸ್ ಇಲಾಖೆ ರಾಜಕೀಯಕರಣಗೊಂಡಿದೆ. ಅವರಿಗೆ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ಸರ್ಕಾರ ಅವರ ಕೈ ಕಟ್ಟಿಹಾಕಿ ಬಿಟ್ಟಿದೆ. ಗಲಾಟೆಗಳು ನಡೆಯುವ ಜಾಗದಲ್ಲಿ  ಅವರು ಮೂಕ ಪ್ರೇಕ್ಷಕರಂತೆ ನಿಂತುಕೊಳ್ಳುವಂತೆ ಮಾಡಿಬಿಟ್ಟಿದೆ. ಗೃಹ ಸಚಿವರು  ಬೆಂಗಳೂರಿನಲ್ಲಿ ನಡೆದ ಕೊಲೆಯೊಂದರ ವಿಚಾರವಾಗಿ ಪೂರ್ವಪರ ಆಲೋಚನೆ ಮಾಡದೆ ಹೇಳಿಕೆಯನ್ನು ನೀಡುತ್ತಾರೆ. ಪೊಲೀಸರಿಂದ ಮಾಹಿತಿ ಪಡೆದು ಮತ್ತೊಮ್ಮೆ ಹೇಳಿಕೆ ನೀಡುತ್ತಾರೆ. ಆದರೆ ಅವರ ಪಕ್ಷದ ನಾಯಕರೇ ಪೊಲೀಸರು ಹೇಳುತ್ತಿರುವುದು ಸುಳ್ಳು ಎನ್ನುತ್ತಾರೆ. ಇದರಿಂದ ಪೊಲೀಸ್ ಇಲಾಖೆಯ  ಮೇಲೆ ಪರಿಣಾಮ ಏನಾಗುತ್ತದೆ ಎನ್ನುವುದು ಅವರಿಗೆ ಅರಿವು ಇಲ್ಲವೇ ಎಂದು ಆಂತಕ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷಕ್ಕೆ ಗಲಾಟೆ- ಹಿಂಸೆ ಯಾವಾಗಲೂ ಜೀವಂತಿಕೆಯಾಗಿ ಇರಬೇಕು. ಈ ವಿಚಾರವನ್ನೇ ಚುನಾವಣೆಯ ವಿಷಯವನ್ನಾಗಿ ಬಳಕೆ ಮಾಡಿಕೊಳ್ಳುವ ಅ ಪಕ್ಷವು, ಕೆಲವು ತಿಂಗಳುಗಳಿಂದ ನಡೆಯುತ್ತಿರುವ  ವಿದ್ಯಮಾನಗಳಿಗೆ ಕಾರ್ಯಾಂಗದ ಮೂಲಕವೇ ಪರಿಹಾರ ನೀಡಬಹುದಾಗಿತ್ತು ಎಂದು ಅವರು ತಿಳಿಸಿದರು.

ಭ್ರಷ್ಟಾಚಾರದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಮಾಹಿತಿ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಎಚ್.ಜಿ.ಸತ್ಯನ್ ಅವರ ಮೇಲೆ ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇಂತಹ ವ್ಯಕ್ತಿಯನ್ನು ತಕ್ಷಣ ಮಾಹಿತಿ ಹಕ್ಕು ಆಯೋಗದಿಂದ ತೆಗೆದುಹಾಕಬೇಕು ಎಂದು  ಪ್ರೊ .ಬಿ.ಕೆ.ಚಂದ್ರಶೇಖರ್ ಒತ್ತಾಯಿಸಿದರು.

ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕೆಪಿಸಿಸಿ ಮೈಸೂರು ನಗರಾಧ್ಯಕ್ಷ  ಆರ್.ಮೂರ್ತಿ , ಮಾಧ್ಯಮ ಸಂಯೋಜಕ ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಳಮಟ್ಟದ ಕಾರ್ಯಕರ್ತರನ್ನೂ ಮುಟ್ಟುವ ಕೆಲಸವಾಗಬೇಕಾಗಿದೆ

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ  ಪ್ರತಿಪಕ್ಷಗಳು ಕೇವಲ ಒಂದು ಸಾಲಿನ ಹೇಳಿಕೆಗಳ ಮೂಲಕ ಟೀಕಿಸಿದರೇ ಸಾಲದು, ಇದರಿಂದ ಯಾವುದೇ ಪ್ರಯೋಜನವೂ ಇಲ್ಲ. ಬದಲಾಗಿ ಆಡಳಿತದ ವೈಫಲ್ಯತೆ ಬಗ್ಗೆ ತಳಮಟ್ಟದ ಕಾರ್ಯಕರ್ತರಿಗೂ ತಿಳಿಯುವಂತೆ ಮಾಡಬೇಕು.  ತನ್ಮೂಲಕ  ಅಲ್ಲಿಂದಲೇ ವಾತಾವರಣ ಬದಲಾವಣೆಯಾಗುವಂತೆ ಮಾಡಬೇಕು ಎಂದು ಪ್ರೊ .ಬಿ.ಕೆ.ಚಂದ್ರಶೇಖರ್ ತಿಳಿಸಿದರು.

ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಮೇಲೆ ಹೊಸ ಹುರುಪು ತುಂಬುತ್ತಿದ್ದಾರೆ. ಸಿದ್ದರಾಮಯ್ಯ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಇದೆಲ್ಲ ಸರಿ, ಆದರೆ  ಇದನ್ನು ಮುಂದುವರಿಸಿಕೊಂಡು ಹೋಗಲು ಸಶಕ್ತ ಕಾರ್ಯಕರ್ತರ ಅವಶ್ಯಕತೆ ಇದೆ. ಆದ್ದರಿಂದ  ಹಳ್ಳಿ-ಹಳ್ಳಿಗಳಲ್ಲಿ  ಮಹಿಳೆಯರು, ಯುವಕರ ಮನಸೆಳೆದು, ಅವರಿಗೆ ಸ್ಫೂರ್ತಿ ತುಂಬಿ, ಆ ಮಟ್ಟದಿಂದಲೇ ಸರ್ಕಾರದ ವೈಫಲ್ಯದ ಬಗ್ಗೆ  ಸ್ಥಳೀಯ ಜನರಿಗೆ ಅರಿವು ಮೂಡಿಸುವಂತಹ ಕೆಲಸವನ್ನು  ಮಾಡಿಸಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News