ಹುಬ್ಲೋ ವಾಚ್ ಸರ್ಕಾರಕ್ಕೆ ವಾಪಸ್ ಕೊಟ್ಟಿದ್ದೇನೆ: ಸಿದ್ದರಾಮಯ್ಯ ಸ್ಪಷ್ಟನೆ

Update: 2022-05-05 17:20 GMT

ಮೈಸೂರು,ಮೇ.5; ಮಾತೆತ್ತಿದರೆ ಹುಬ್ಲೋ ವಾಚ್ ಬಗ್ಗೆ ಮಾತನಾಡುತ್ತೀರಿ, ವಾಚ್ ವಿಚಾರ ಎಸಿಬಿ ತನಿಖೆಯಾಗಿ ಇತ್ಯರ್ಥವಾಗಿ ಸರ್ಕಾರಕ್ಕೆ ವಾಪಸ್ ಕೊಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಯಾರೋ ಡಾಕ್ಟರ್ ವರ್ಮಾ ಅನ್ನೋರು ಕೊಟ್ಟಿದ್ದ ವಾಚ್ ಅದು. ಅದನ್ನು ನಾನು ಸರ್ಕಾರಕ್ಕೆ ಮರಳಿಸಿದ್ದೇನೆ. ಕುಮಾರಸ್ವಾಮಿ ಕಳ್ಳತನದ ವಾಚ್ ಅಂದರು. ಅದರ ಬೆಲೆ 35ಲಕ್ಷದಿಂದ 40ಲಕ್ಷ ಇರಬಹುದು. ಕಟ್ಟಿಕೊಂಡಿದ್ದರೆ ಏನಾಗಿತ್ತು? ನಿಮ್ಮ ಹಾಗೆ 300ಕೋಟಿ ವ್ಯವಹಾರಾನಾ ಎಂದು ಪ್ರಶ್ನಿಸಿದರು.

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ನ್ಯಾಯಯುತ ತನಿಖೆ ಅಸಾಧ್ಯ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸುವಂತೆ   ಆಗ್ರಹಿಸಿದರು. ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಎಡಿಜಿಪಿಯೇ ಭಾಗಿಯಾಗಿದ್ದಾರೆ. ಇನ್ನು ಸಿಐಡಿಯಿಂದ ನ್ಯಾಯಯುತ ತನಿಖೆ  ಹೇಗೆ ಸಾಧ್ಯ?  ಹೀಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಹಗರಣದಲ್ಲಿ ಸಚಿವರೇ ಭಾಗಿಯಾಗಿದ್ದಾರೆ. ನಿಜವಾದ ಆರೋಪಿಗಳನ್ನು ಬಂಧಿಸಿಲ್ಲ. ಮಧ್ಯವರ್ತಿಗಳನ್ನು ಮಾತ್ರ ಬಂಧಿಸಿದ್ದಾರೆ. ಸಚಿವ ಡಾ.ಸಿ.ಎಸ್.ಅಶ್ವತ್ಥ ನಾರಾಯಣ ಕಡೆಯವರು ಇಬ್ಬರು ಇದ್ದಾರೆ.  ಆಯ್ಕೆಯಾದ ದರ್ಶನ್ ಗೌಡನನ್ನು ಕರೆ ತಂದು ವಿಚಾರಣೆ ಮಾಡದೆ ಬಿಟ್ಟಿದ್ದಾರೆ. ನಿಷ್ಪಕ್ಷಪಾತ ತನಿಖೆ ಮಾಡುತ್ತಿಲ್ಲ.  ನ್ಯಾಯಾಂಗ ತನಿಖೆಯಾದರೆ ಎಲ್ಲಾ ಸತ್ಯ ಹೊರ ಬರುತ್ತೆ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಜನರಿಂದ ಆಯ್ಕೆಯಾದವರಲ್ಲ, ಅವರು ನೇಮಕವಾದ ಸಿಎಂ. ಯಡಿಯೂರಪ್ಪ ಅಹ ಜನರಿಂದ ಆಯ್ಕೆಯಾಗಿದ್ದ ಮುಖ್ಯಮಂತ್ರಿ ಅಲ್ಲ, ಹಣ ಬಳಸಿ ಚುನಾವಣೆ ನಡೆಸಿ ಗೆದ್ದು ಬಂದವರು. ಇದು ರಾಜ್ಯದ ಜನತೆಗೆ ಗೊತ್ತಿದೆ. ಇವರು ಜನರಿಂದ ಆಯ್ಕೆಯಾಗಿದ್ದಾರ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟೀಸ್ ನೀಡಿದ  ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ  ನೋಟಿಸ್ ನೀಡಲು ಸಿಐಡಿಗೆ ಅಧಿಕಾರವೇ ಇಲ್ಲ. ಪ್ರಿಯಾಂಕ್ ಖರ್ಗೆ ಸಾಕ್ಷಿಧಾರನಾ ಅಥವಾ ಅಪರಾಧಿನಾ..?  ಸಿಐಡಿಯೇ ಪ್ರಿಯಾಂಕ್ ಖರ್ಗೆ ಬಳಿ ಹೋಗಲಿ ಎಂದು ತಿಳಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News