ಪೋಷಕರಿಂದ ನೇರ ದತ್ತು ಪಡೆದರೆ ಅಪರಾಧವಲ್ಲ: ಹೈಕೋರ್ಟ್ ತೀರ್ಪು

Update: 2022-05-10 14:30 GMT

ಬೆಂಗಳೂರು ಮೇ 10: ಮಗುವನ್ನು ಹೆತ್ತ ಪೋಷಕರಿಂದ ನೇರವಾಗಿ ದತ್ತು ಪಡೆಯುವುದು ಅಪರಾಧವಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಹಲವು ಸಂದರ್ಭಗಳಲ್ಲಿ ದತ್ತು ನಿಯಮಗಳನ್ನು ಪಾಲಿಸದೆ ಮಕ್ಕಳನ್ನು ಪೋಷಕರಿಂದ ನೇರ ಪಡೆದು ಸಾಕುತ್ತಿದ್ದ ದಂಪತಿಗಳಿಗೆ ಇದು ಅತ್ಯಂತ ಮಹತ್ವದ ತೀರ್ಪಾಗಿದೆ. ದತ್ತು ನಿಯಮ ಉಲ್ಲಂಘಿಸಲಾಗಿದೆಯೆಂದು ತಮ್ಮ ವಿರುದ್ಧ ಹೂಡಿದ್ದ ಪ್ರಕರಣ ರದ್ದು ಕೋರಿ ಕೊಪ್ಪಳದ ಗಂಗಾವತಿಯ ಬಾನು ಬೇಗಂ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಮಗುವಿನ ತಂದೆ ತಾಯಿಯಿಂದ ನೇರವಾಗಿ ಮಗುವನ್ನು ಪಡೆದು ಪೋಷಿಸುವುದು ಬಾಲ ನ್ಯಾಯ ಕಾಯಿದೆ 2015ರ ಸೆಕ್ಷನ್ 80ರಡಿ ಅಪರಾಧವಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಪ್ರಸಕ್ತ ಪ್ರಕರಣದಲ್ಲಿ ಮಗು ಅನಾಥ ಅಥವಾ ನಿರಾಶ್ರಿತ ಮಗುವಲ್ಲ ಅಥವಾ ಬಾಲ ನ್ಯಾಯ ಕಾಯಿದೆಯ ಸೆಕ್ಷನ್ 2(1), 2(42) ಮತ್ತು 2(60)ರಡಿ ವಶಕ್ಕೆ ಒಪ್ಪಿಸಿರುವ ಮಗುವಲ್ಲ. ಹೀಗಾಗಿ, ಆರೋಪಪಟ್ಟಿ ಸಲ್ಲಿಕೆ ಊರ್ಜಿತವಾಗುವುದಿಲ್ಲ ಎಂದು ಹೇಳಿರುವ ನ್ಯಾಯಪೀಠ ದಂಪತಿಯ ವಿರುದ್ಧದ ಪ್ರಕರಣವನ್ನು ರದ್ದು ಮಾಡಿದೆ.

ಜೊತೆಗೆ ಮಗುವನ್ನು ಸ್ವಂತ ಪೋಷಕರು ಅಥವಾ ದತ್ತಕ ಪಡೆದಿರುವವರು ಅಥವಾ ಪಾಲಕರು ನಿರಾಶ್ರಿತ ಎಂದು ಘೋಷಿಸಿಲ್ಲ. ಹೀಗಾಗಿ, ಬಾಲ ನ್ಯಾಯ ಕಾಯಿದೆ ಅನ್ವಯವಾಗುವುದಿಲ್ಲ. ದಂಪತಿ ನಿಯಮ ಪಾಲಿಸದೆ ನೇರವಾಗಿ ಪೋಷಕರಿಂದ ದತ್ತು ತೆಗೆದುಕೊಂಡು ಮಗುವನ್ನು ಸಾಕುತ್ತಿದ್ದಾರೆಂದು ಪ್ರಕರಣವನ್ನು ಹೂಡಲಾಗಿತ್ತು. ಇದೀಗ ಆ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಬಾಲ ನ್ಯಾಯ ಕಾಯಿದೆ(ಆರೈಕೆ ಮತ್ತು ಮಕ್ಕಳ ರಕ್ಷಣಾ) 2015ರ ಸೆಕ್ಷನ್ 80ರಲ್ಲಿ ಮಗು ಅನಾಥವಾಗಿದ್ದರೆ, ನಿರಾಶ್ರಿತವಾಗಿದ್ದರೆ ಅಥವಾ ಬಾಲಮಂದಿರಗಳಿಗೆ ಒಪ್ಪಿಸಿರುವ ಮಗುವಾಗಿದ್ದರೆ ಆ ಮಗುವನ್ನು ದತ್ತು ಪಡೆದರೆ ಅಂತಹ ವೇಳೆ ನಿಯಮಗಳು ಅನ್ವಯವಾಗುತ್ತವೆ. ಸೆಕ್ಷನ್ 80ರಡಿ ಯಾರು ಮಕ್ಕಳನ್ನು ದತ್ತು ಪಡೆಯುವಾಗ ಬಾಲ ಕಾಯಿದೆ ನಿಯಮಗಳನ್ನು ಪಾಲಿಸುವುದಿಲ್ಲವೋ ಅಥವಾ ಉಲ್ಲಂಘಿಸುತ್ತಾರೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ದಂಡಿಸಲು ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಮಗು, ದಂಪತಿಗೆ ಸಹಜವಾಗಿ ಜನಿಸಿದೆ, ಅದನ್ನು ಆ ಪೋಷಕರಿಂದ ನೇರವಾಗಿ ದತ್ತು ಪಡೆದು ಸಾಕಲಾಗುತ್ತಿದೆ. ಹೀಗಾಗಿ, ಪ್ರಕರಣ ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು: ಮಹಬೂಬ್ ಸಾಬ್ ನಬಿಸಾಬ್ ಪತ್ನಿ ಬಾನು ಬೇಗಂ ಅವರಿಗೆ 2018ರ ಸೆ.18ರಂದು ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಆ ಪೈಕಿ ಒಂದು ಮಗುವನ್ನು 20 ರೂ. ಸ್ಟಾಂಪ್ ಪೇಪರ್ ಮೇಲೆ ಒಪ್ಪಂದ ಮಾಡಿಕೊಂಡು ಮಕ್ಕಳಿಲ್ಲದ ಜರೀನಾ ಬೇಗಂ ಮತ್ತು ಅಬ್ದುಲ್ ಸಾಬ್ ಹುಡೇದಮನಿ ದಂಪತಿ ದತ್ತು ಪಡೆದು ಸಾಕುತ್ತಿದ್ದರು. ಆದರೆ ಇದರಲ್ಲಿ ಬಾಲ ನ್ಯಾಯ ಕಾಯಿದೆ ಸೆಕ್ಷನ್ 80 ಉಲ್ಲಂಘಿಸಲಾಗಿದೆ ಎಂದು ಆರ್. ಜಯಶ್ರೀ ನರಸಿಂಹ ಎಂಬುವರು ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್, ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿತ್ತು. ಅದನ್ನು ಪ್ರಶ್ನಿಸಿ, ಪ್ರಕರಣವನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News