ರಾಜ್ಯದಲ್ಲಿ ಮತಾಂತರ ತಡೆ ಕಾನೂನಿಗೆ ಸುಗ್ರೀವಾಜ್ಞೆ ?

Update: 2022-05-12 04:54 GMT
ಫೈಲ್‌ ಫೋಟೊ 

ಬೆಂಗಳೂರು: ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಮತಾಂತರ ತಡೆ ಮಸೂದೆಗೆ ಮರು ಜೀವ ನೀಡಿ ಅದನ್ನು ಕಾನೂನಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಚಿಂತನೆ ನಡೆಸಿದ್ದು, ಗುರುವಾರ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು deccanherald.com ವರದಿ ಮಾಡಿದೆ.

ಗೃಹ ಇಲಾಖೆ ಈಗಾಗಲೇ ಈ ಸಂಬಂಧ ಸಂಪುಟ ಟಿಪ್ಪಣಿ ಸಿದ್ಧಪಡಿಸಿದ್ದು, ಕರ್ನಾಟಕ ಪ್ರೊಟೆಕ್ಷನ್ ರೈಟ್ ಟೂ ಫ್ರೀಡಮ್ ಆಫ್ ರಿಲಿಜನ್ ಮಸೂದೆಗೆ ಸುಗ್ರೀವಾಜ್ಞೆ ಮೂಲಕ ಮರುಜೀವ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಸುಗ್ರೀವಾಜ್ಞೆ ಜಾರಿಗೆ ಯಾವುದೇ ಕಾನೂನು ತಡೆ ಇಲ್ಲ ಎಂದು ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ ಎಂದು ಮೂಲಗಳು ಹೇಳಿವೆ.

ಈ ವಿವಾದಾತ್ಮಕ ಮಸೂದೆಯು, ಉಚಿತ ವಿವಾಹ, ಉದ್ಯೋಗ ಅಥವಾ ಇತರ ಆಮಿಷಗಳ ಮೂಲಕ ವಿವಾಹ ನೆರವೇರಿಸಿ ಧಾರ್ಮಿಕ ಮತಾಂತರ ನಡೆಸುವುದನ್ನು ನಿಷೇಧಿಸುತ್ತಿದೆ. ಬಲವಂತದ ಮತಾಂತರಕ್ಕೆ 3 ರಿಂದ 5 ವರ್ಷ ವರೆಗೆ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಲು ಮಸೂದೆ ಅವಕಾಶ ನೀಡುತ್ತದೆ.

ಅಪ್ರಾಪ್ತ ವಯಸ್ಸಿನವರು, ಮಹಿಳೆ ಅಥವಾ ಎಸ್ಸಿ/ಎಸ್ಟಿಗಳ ಮತಾಂತರಕ್ಕೆ 3 ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರಪಾಯಿ ದಂಡ ವಿಧಿಸಲು ಅವಕಾಶವಿದೆ. ಸಾಮೂಹಿಕ ಮತಾಂತರಕ್ಕೆ 3-10 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ವಿಧಾನಸಭೆಯಲ್ಲಿ ಮಸೂದೆ ಆಂಗೀಕಾರವಾಗಿತ್ತು. ಆದಾಗ್ಯೂ ಆಡಳಿತಾರೂಢ ಬಿಜೆಪಿ ವಿಧಾನ ಪರಿಷತ್‍ನಲ್ಲಿ ಬಹುಮತಕ್ಕೆ ಒಂದು ಮತದ ಕೊರತೆ ಇದ್ದ ಕಾರಣ ಇದರ ಆಂಗೀಕಾರಕ್ಕೆ ಮುತುವರ್ಜಿ ವಹಿಸಿರಲಿಲ್ಲ. ಅದರೆ ಇದೀಗ ಮಸೂದೆಯ ಅಂಶಗಳನ್ನು ಸಾಧ್ಯವಾದಷ್ಟು ಬೇಗ ಜಾರಿಗೊಳಿಸಲು ಗೃಹ ಇಲಾಖೆ ಮುಂದಾಗಿದೆ ಎಂದು ಮೂಗಳು ವಿವರಿಸಿವೆ.‌

"ಸಚಿವ ಸಂಪುಟ ಸಭೆಯಲ್ಲಿ ಕರಡು ಸುಗ್ರೀವಾಜ್ಞೆಗೆ ಒಪ್ಪಿಗೆ ಪಡೆದು ಅಂತಿಮ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು. ಆ ಬಳಿಕ ತಕ್ಷಣವೇ ಅದನ್ನು ಜಾರಿಗೊಳಿಸಲಿದ್ದೇವೆ" ಎಂದು ಮೂಲಗಳು ಸ್ಪಷ್ಟಪಡಿಸಿವೆ. ದೇಶದಲ್ಲಿ ಮತಾಂತರ ತಡೆ ಕಾನೂನು ಜಾರಿಗೊಳಿಸಿದ ಒಂಬತ್ತನೇ ರಾಜ್ಯವಾಗಿ ಕರ್ನಾಟಕ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಈ ಬಗ್ಗೆ ಜ.25ರಂದು ʼವಾರ್ತಾಭಾರತಿʼ ವರದಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News