ಗೃಹ ಸಚಿವರ ಗ್ರಾಮದಲ್ಲಿ ದಲಿತ ಮಹಿಳೆಯ ಅತ್ಯಾಚಾರಕ್ಕೆ ಯತ್ನ ಪ್ರಕರಣ: ಆರೋಪಿಗಳ ಬಂಧನಕ್ಕೆ ಬಿ.ಕೆ.ಹರಿಪ್ರಸಾದ್ ಆಗ್ರಹ

Update: 2022-05-12 14:33 GMT

ಬೆಂಗಳೂರು, ಮೇ 12: ‘ಗೃಹ ಸಚಿವ ಆರಗ ಜ್ಞಾನೇಂದ್ರರ ಸ್ವಗ್ರಾಮ, ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಪತಿ ಎದುರೇ ದಲಿತ ಮಹಿಳೆಯನ್ನ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ, ವಿಕೃತ ಘಟನೆಯನ್ನ ತೀವ್ರವಾಗಿ ಖಂಡಿಸುತ್ತೇನೆ' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಘಟನೆ ನಡೆದು 2 ದಿನಗಳಾದರೂ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಮಾಡಿರುವುದು ಏಕೆ? ಘಟನೆಯಲ್ಲಿ ಸಂತ್ರಸ್ತೆಯ ಪತಿಯ ಮೇಲೂ ದುಷ್ಕ್ರರ್ಮಿಗಳು ಹಲ್ಲೆ ನಡೆಸಿದ್ದಾರೆ. ಸಂಪತ್, ಆದರ್ಶ ಹಾಗೂ ಇನ್ನಿಬ್ಬರು ಯುವಕರಿಬ್ಬರು ಬೈಕ್ ಮೇಲೆ ಬಂದು ದುಷ್ಕøತ್ಯ ಎಸಗಿದ್ದಾರೆಂದು ಸಂತ್ರಸ್ತರೇ ಗುರುತಿಸಿರುವಾಗ ಇಲ್ಲಿವರೆಗೂ ಪೊಲೀಸರು ಬಂಧಿಸದಿರುವುದಕ್ಕೆ ಕಾರಣವೇನು?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

‘ಗೃಹ ಸಚಿವರ ಸ್ವಗ್ರಾಮದಲ್ಲೇ ನಡೆದಿರುವ ಅಮಾನವೀಯ ಘಟನೆ ಇಲ್ಲಿವರೆಗೆ ಸಚಿವರ ಗಮನಕ್ಕೆ ಬಂದಿಲ್ಲವೇ? ಅಪಘಾತದಲ್ಲಿ ಗಲಾಟೆಯಾಗಿ ಯುವಕನ ಕೊಲೆ ಎರಡೇ ನಿಮಿಷಕ್ಕೆ ಮಾಹಿತಿ ಸಿಗುತ್ತದೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ನಿಮ್ಮ ‘ಮಾಹಿತಿಯ ಮೂಲ' ಇನ್ನೂ ಮಾಹಿತಿಯೇ ನೀಡಿಲ್ಲವೇ? ಅಥವಾ ಸ್ಥಳೀಯ ದಲಿತ ಸಂಘರ್ಷ ಸಮಿತಿಯ ಮುಖಂಡರ ಆರೋಪದಂತೆ ಪ್ರಕರಣ ಮುಚ್ಚಿ ಹಾಕುವ ಯತ್ನವೇ?' ಎಂದು ಅವರು ಕೇಳಿದ್ದಾರೆ.

‘ದುಷ್ಕರ್ಮಿಗಳ ಅಟ್ಟಹಾಸವನ್ನ ಮಟ್ಟ ಹಾಕಬೇಕಿದೆ. ಸಂತ್ರಸ್ತರು ಶೋಷಿತ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೂಡಲೇ ಆರೋಪಿಗಳನ್ನ ಬಂಧಿಸಬೇಕು. ಸಂತ್ರಸ್ತೆ ಹಾಗೂ ಕುಟುಂಬಸ್ಥರಿಗೆ ರಕ್ಷಣೆ ನೀಡಬೇಕು ಹಾಗೂ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮಹಿಳೆ ರಕ್ಷಣೆಗೆ ಧಾವಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News