ಕಾಶ್ಮೀರ ಪಂಡಿತನ ಹತ್ಯೆ ಪ್ರಕರಣ; ಬಾರಾಮುಲ್ಲಾದಲ್ಲಿ ಪ್ರತಿಭಟನಕಾರರು-ಪೊಲೀಸರ ನಡುವೆ ಹೊಡೆದಾಟ

Update: 2022-05-14 18:07 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಮೇ 14: ಕಾಶ್ಮೀರ ಪಂಡಿತ ರಾಹುಲ್ ಭಟ್ ಅವರನ್ನು ಗುರಿಯಾಗಿರಿಸಿ ಹತ್ಯೆ ನಡೆಸಿರುವ ವಿರುದ್ಧ ಪ್ರತಿಭಟನೆ ಮುಂದುವರಿಯುತ್ತಿರುವಂತೆ ಜಮ್ಮು ಹಾಗೂ ಹಾಗೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಶನಿವಾರ ಹೊಡೆದಾಟ ನಡೆದಿದೆ. ಸರಕಾರದ ಸಿಬ್ಬಂದಿಯಾಗಿರುವ ಕಾಶ್ಮೀರಿ ಪಂಡಿತರು ಜಿಲ್ಲೆಯ ವೀರವಾನ್ ಕಾಲನಿಯಲ್ಲಿರುವ ಜಮ್ಮು ಹಾಗೂ ಕಾಶ್ಮೀರ ಪೊಲೀಸ್‌ನ ಸಿಬ್ಬಂದಿಯೊಂದಿಗೆ ಹೊಡೆದಾಟ ನಡೆಸಿದ್ದಾರೆ. ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಲು ಪ್ರತಿಭಟನಕಾರರು ಕಾಲನಿಯಿಂದ ಹೊರ ಹೋಗಲು ಪ್ರಯತ್ನಿಸಿದರು. ಆದರೆ, ಅವರು ಹೊರ ಹೋಗದಂತೆ ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಹೊಡೆದಾಟ ನಡೆದಿದೆ. ಆದರೆ, ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರತಿಭಟನಕಾರರು ಹಾಗೂ ಪೊಲೀಸರ ನಡುವಿನ ಹೊಡೆದಾಟದ ದೃಶ್ಯಾವಳಿಗಳನ್ನು ಹಲವು ಟ್ವೀಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.

ಶುಕ್ರವಾರ ಶ್ರೀನಗರ ವಿಮಾನ ನಿಲ್ದಾಣದತ್ತ ರ್ಯಾಲಿ ನಡೆಸಲು ಯತ್ನಿಸಿದ ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿತ್ತು. ಅಲ್ಲದೆ, ಅಶ್ರುವಾಯು ಸೆಲ್‌ಗಳನ್ನು ಪ್ರಯೋಗಿಸಲಾಗಿತ್ತು. ಪತ್ನಿ ಹಾಗೂ ಪುತ್ರಿಯನ್ನು ಅಗಲಿದ ಭಟ್ ಅವರ ಹತ್ಯೆಯ ವಿರುದ್ಧ ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದ ಹಲವು ಪ್ರತಿಭಟನೆಗಳಲ್ಲಿ ಇದು ಕೂಡ ಒಂದಾಗಿದೆ. ಈ ಹತ್ಯೆ ಕಣಿವೆಯಲ್ಲಿ ಸಾಮೂಹಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಪಂಡಿತ ಸಮುದಾಯದ ಸರಕಾರಿ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿರುವುದು ಕೂಡ ವರದಿಯಾಯಿತು. ಆದರೆ, ಇಂತಹ ಯಾವುದೇ ಬೆಳವಣಿಗೆಯನ್ನು ಬುಡ್ಗಾಂವ್ ಜಿಲ್ಲಾಡಳಿತ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News