ಹಲವು ರಾಜ್ಯಗಳಲ್ಲಿ ಹಣದುಬ್ಬರಕ್ಕೆ ಹೈರಾಣಾದ ಜನ

Update: 2022-05-16 02:20 GMT

ಹೊಸದಿಲ್ಲಿ: ದೇಶದಲ್ಲಿ ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಏಪ್ರಿಲ್ ತಿಂಗಳ ಹಣದುಬ್ಬರ ಶೇಕಡ 9 ಕ್ಕಿಂತ ಅಧಿಕ ಇದ್ದು, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ದೇಶಾದ್ಯಂತ ಬೆಲೆ ಏರಿಕೆಯ ಬಿಸಿಗೆ ಜನ ಹೈರಾಣಾಗಿದ್ದಾರೆ.

ನ್ಯಾಷನಲ್ ಸ್ಟೆಟಿಸ್ಟಿಕಲ್ ಆಫೀಸ್ (ಎನ್‌ಎಸ್‌ಓ) ಅಂಕಿ ಅಂಶಗಳ ಪ್ರಕಾರ, ತೈಲ ಮತ್ತು ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕ ಬೆಲೆ ಸೂಚ್ಯಂಕ ಮಾನದಂಡದಲ್ಲಿ ಹಣದುಬ್ಬರ ಎಂಟು ವರ್ಷಗಳಲ್ಲೇ ಗರಿಷ್ಠ ಅಂದರೆ ಶೇಕಡ 7.8 ತಲುಪಿದೆ. ಕೆಲ ರಾಜ್ಯಗಳಲ್ಲಿ ಉಕ್ರೇನ್ ಸಂಘರ್ಷದಿಂದಾಗಿ ಸರಬರಾಜು ವ್ಯತ್ಯಯವಾಗಿದ್ದು, ಈ ರಾಜ್ಯಗಳಲ್ಲಿ ಬೆಲೆ ಏರಿಕೆಯ ಒತ್ತಡ ಅತ್ಯಧಿಕವಾಗಿದೆ.

ಹರ್ಯಾಣ ಮತ್ತು ತೆಲಂಗಾಣ ಶೇಕಡ 9ಕ್ಕಿಂತ ಅಧಿಕ ಹಣದುಬ್ಬರ ದಾಖಲಿಸಿದ ಇತರ ಎರಡು ರಾಜ್ಯಗಳು. ಏಳು ರಾಜ್ಯಗಳಲ್ಲಿ ಹಣದುಬ್ಬರ ಶೇಕಡ 8ಕ್ಕಿಂತ ಅಧಿಕ ಇದ್ದು, ಹಣದುಬ್ಬರ ದರ ಗರಿಷ್ಠವಾಗಿರುವುದರಿಂದ ಒತ್ತಡ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ತಮಿಳುನಾಡು ಮತ್ತು ಕೇರಳದಲ್ಲಿ ಮಾತ್ರ ಹಣದುಬ್ಬರ ದರ ಶೇಕಡ 5ರ ಆಸು ಪಾಸಿನಲ್ಲಿದೆ.

"ಗ್ರಾಮೀಣ ಆರ್ಥಿಕತೆಯನ್ನು ಅಗಾಧವಾಗಿ ತಲುಪಿರುವುದು ಮತ್ತು ಇಂಧನ ಮೇಲಿನ ತೆರಿಗೆಗಳು ಬೆಲೆಏರಿಕೆಗೆ ಪ್ರಮುಖ ಕಾರಣ ಎನ್ನುವುದು ಕ್ರಿಸಿಲ್ ರೇಟಿಂಗ್ ಏಜೆನ್ಸಿಯ ಮುಖ್ಯ ಅರ್ಥಶಾಸ್ತ್ರಜ್ಞ ಡಿ.ಕೆ.ಜೋಶಿಯವರ ಅಭಿಪ್ರಾಯ. ಅಂಕಿ ಅಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರ ದರ ಗ್ರಾಮೀಣ ಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಶೇಕಡ 8.4ನ್ನು ತಲುಪಿದ್ದರೆ, ನಗರ ಪ್ರದೇಶಗಳಲ್ಲಿ ಇದು ಶೇಕಡ 7.1ರಷ್ಟಿದೆ.

ಅಧಿಕ ಹಣದುಬ್ಬರದಿಂದ ಜನ ಹೈರಾಣಾಗಿದ್ದಾರೆ. "ಮಾಸಿಕ ಖರ್ಚು ಅಗಾಧವಾಗಿ ಹೆಚ್ಚಿದೆ. ದಿನಸಿ, ಮೀನು, ತರಕಾರಿ, ಇಂಧನ, ಶಾಲಾ ಶುಲ್ಕ ಎಲ್ಲವೂ ಹೆಚ್ಚಿದೆ. ಮಾಸಿಕ ಖರ್ಚು ಕಳೆದ ಒಂದು ವರ್ಷದಲ್ಲಿ ಶೇಕಡ 20ರಷ್ಟು ಹೆಚ್ಚಿದೆ. ಮಾಸಿಕ 2000 ರೂಪಾಯಿಗಳನ್ನು ಇಂಧನಕ್ಕೇ ಖರ್ಚು ಮಾಡಬೇಕಾಗುತ್ತಿದೆ" ಎಂದು ಕೊಲ್ಕತ್ತಾದ ಹಣಕಾಸು ಸೇವಾ ವಲಯದ ಉನ್ನತ ಅಧಿಕಾರಿ ಮಲಯ್ ಬಿಸ್ವಾಸ್ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News