"5 ವರ್ಷಗಳಲ್ಲಿ ಏನೂ ಮಾಡಿಲ್ಲ": ಎಂಡೋ ಸಂತ್ರಸ್ತರಿಗೆ ಪರಿಹಾರ ನೀಡದ ಕೇರಳ ಸರಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

Update: 2022-05-17 07:33 GMT

 ಹೊಸದಿಲ್ಲಿ: ಎಂಡೋಸಲ್ಫಾನ್ ಸಂತ್ರಸ್ತರಿಗೆ ಕಳೆದ ಐದು ವರ್ಷಗಳಲ್ಲಿ ವಸ್ತುಶಃ ಏನನ್ನೂ ಮಾಡದ ಕೇರಳ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಅನಾಸ್ಥೆ ಆಘಾತಕಾರಿ ಹಾಗೂ ಸುಪ್ರೀಂ ಕೋರ್ಟಿನ 2017 ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಹೇಳಿದ ನ್ಯಾಯಾಲಯ, ಸಂತ್ರಸ್ತರಿಗೆ ತಲಾ ರೂ 5 ಲಕ್ಷ ಪರಿಹಾರವನ್ನು ಮೂರು ತಿಂಗಳೊಳಗೆ ಪಾವತಿಸುವಂತೆ  ಆದೇಶಿಸಿದೆ.

2017ರ ತೀರ್ಪಿನ ನಂತರ 3,704 ಸಂತ್ರಸ್ತರ ಪೈಕಿ ಕೇವಲ ಎಂಟು ಮಂದಿಗೆ ಪರಿಹಾರ ಒದಗಿಸಲಾಗಿದೆ ಎಂದು ನ್ಯಾಯಾಲಯ ಕಂಡುಕೊಂಡಿದೆ.

ಒಟ್ಟು 3,704 ಸಂತ್ರಸ್ತರ ಪೈಕಿ 102 ಮಂದಿ ಹಾಸಿಗೆ ಹಿಡಿದಿದ್ದರೆ, 326 ಮಂದಿ ಭಿನ್ನಚೇತನರು, 201 ಮಂದಿ ಅಂಗವಿಕಲರು, 119 ಮಂದಿ ಕ್ಯಾನ್ಸರ್ ಪೀಡಿತರಿದ್ದು 2966 ಮಂದಿ ಇತರ ವಿಭಾಗದಲ್ಲಿ ಬರುತ್ತಾರೆ.

"ಕೇರಳ ಸರಕಾರ ಐದು ವರ್ಷಗಳ ಕಾಲ ಏನನ್ನೂ ಮಾಡಿಲ್ಲ. ವಿಳಂಬ ಆಘಾತಕಾರಿ" ಎಂದು ಜಸ್ಟಿಸ್ ಡಿ.ವೈ ಚಂದ್ರಚೂಡ್ ಅವರ ನೇತೃತ್ವದ ಪೀಠವು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿನ ತನ್ನ ಆದೇಶದಲ್ಲಿ ಹೇಳಿದೆ.

ಜನವರಿ 2022ರಲ್ಲಿ  ಹೆಚ್ಚುವರಿ ರೂ 200 ಕೋಟಿ ಪರಿಹಾರ ವಿತರಿಸುವಂತೆ ನ್ಯಾಯಾಲಯ ಸೂಚಿಸಿದ್ದರೂ ಕೇವಲ ಎಂಟು ಮಂದಿಗೆ ತಲಾ ರೂ 5 ಲಕ್ಷ ದೊರಕಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲಿಸದೇ ಇರುವುದರಿಂದ ರಾಜ್ಯ ಸರಕಾರ ನ್ಯಾಯಾಂಗ ನಿಂದನೆಗೈದಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದವರಿಗೆ ಈ ಪರಿಹಾರ ನೀಡಿದೆ. ಆದರೆ ಇಷ್ಟು ವರ್ಷ ಅವರಂತೆಯೇ ಇರುವ ಇತರರನ್ನು ಹಾಗೂ ನ್ಯಾಯಾಲಯದ ಮೊರೆ ಹೋಗಲಾರದಷ್ಟು ಬಡವರನ್ನು ಸರಕಾರ  ನಿರ್ಲಕ್ಷ್ಯಿಸಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರತಿ ತಿಂಗಳು ಸಭೆ ನಡೆಸಿ ಸಂತ್ರಸ್ತರನ್ನು ಗುರುತಿಸಿ ಫಲಾನುಭವಿಗಳ ಪಟ್ಟಿ ರಚಿಸಲು ಮತ್ತು ಸಂತ್ರಸ್ತರಿಗೆ ತಲಾ ರೂ 5 ಲಕ್ಷ ಪರಿಹಾರ ದೊರಕುವಂತಾಗಲು ಮುಖ್ಯ ಕಾರ್ಯದರ್ಶಿ ಪ್ರತಿ ತಿಂಗಳು ಸಭೆ ನಡೆಸಬೇಕು, ವಿಳಂಬವಾಗಿ ಪರಿಹಾರ ವಿತರಿಸಿದ್ದಕ್ಕಾಗಿ ಎಂಟು ಮಂದಿ ಅರ್ಜಿದಾರರಿಗೆ ತಲಾ ರೂ 50,000 ಪರಿಹಾರವನ್ನು ಮೂರು ವಾರಗಳೊಳಗಾಗಿ ನೀಡಬೇಕು ಎಂದು ಹೇಳಿದ ನ್ಯಾಯಾಲಯ, ಮುಂದಿನ ವಿಚಾರಣೆ ನಡೆಯುವ ಜುಲೈ 18, 2022ರೊಳಗಾಗಿ ನ್ಯಾಯಾಲಯ ಆದೇಶ ಪಾಲನೆ ಕುರಿತಂತೆ ಅಫಿಡವಿಟ್ ಸಲ್ಲಿಸಬೇಕೆಂದು  ಕೇರಳ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News