'ಮಂಡ್ಯ ಜಿಲ್ಲೆಗೆ ಕಾಳಿ ಸ್ವಾಮಿ, ಮುತಾಲಿಕ್ ಗೆ ಪ್ರವೇಶ ಬೇಡ': ಸಾಮರಸ್ಯ ಕದಡುವವರಿಗೆ ಎಚ್ಚರಿಕೆ ನೀಡಿದ ಸ್ಥಳೀಯರು

Update: 2022-05-17 16:48 GMT

ಮಂಡ್ಯ, ಮೇ 17: ಇತ್ತೀಚೆಗೆ ರಾಜ್ಯದಲ್ಲಿ ದ್ವೇಷದ ವಾತಾವರಣ ಸೃಷ್ಟಿಸುತ್ತಿರುವ ಕೆಲವು ಸಂಘಟನೆಗಳ ಮುಖಂಡರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

ಮಂಡ್ಯ ಜಿಲ್ಲೆಗೆ  ಕಾಳಿಮಠದ ಋಷಿಕು ಮಾರ ಸ್ವಾಮಿ ಮತ್ತು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರಂತಹ ವ್ಯಕ್ತಿಗಳಿಗೆ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧ ಹೇರಲು ಒತ್ತಾಯಿಸಿ  ಸ್ಥಳೀಯ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಸೇರಿ ಮಂಗಳವಾರ ಪ್ರತಿಭಟನೆ ನಡೆಸಿತು.

ಜಿಲ್ಲೆಯ ಶಾಂತಿ, ಸಾಮರಸ್ಯ, ಕೋಮುಸೌರ್ದತೆಯನ್ನು ಕದಡುವುದರ ಮೂಲಕ ಇಲ್ಲಿನ ಸಾಮಾಜಿಕ ಬದುಕನ್ನು ಅಶಾಂತಿಯತ್ತ ದೂಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸಮಾವೇಶಗೊಂಡ ನೂರಾರು ಮಂದಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಎಸ್.ಅಶ್ವಥಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಋಷಿಕುಮಾರ್‍ಸ್ವಾಮಿ, ಪ್ರಮೋದ್ ಮುತಾಲಿಕ್ ಸೇರಿದಂತೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿರುವವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಇಂದಿನ ಪ್ರತಿಭಟನೆಯಲ್ಲಿ ಶಾಂತಿ‌ ಕದಡುವವರ ವಿರುದ್ಧ ಹೋರಾಡಲು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದೇವೆ ಎಂದು ಪ್ರತಿಭಟನೆಗೆ ಕರೆ ನಿಡಿದ್ದ ಹಿರಿಯ ಪತ್ರಕರ್ತ, ಲೇಖಕ ಡಾ.ಜಗದೀಶ್ ಕೊಪ್ಪ ಅವರು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

ಡಾ.ಜಗದೀಶ್ ಕೊಪ್ಪ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ...

ಅನ್ಯಾಯ ಮತ್ತು ಅಧರ್ಮೀಯ ಕ್ರಿಯೆಗಳ ಬಗ್ಗೆ ಇಂದು ನಮ್ಮ ಮಂಡ್ಯ ಜಿಲ್ಲೆಯ ಮಿತ್ರರು ಸ್ಪಂದಿಸಿದ ರೀತಿ ನನಗೆ ಅಚ್ಚರಿ ಮೂಡಿಸುವುದರ ಜೊತೆಗೆ ನಮ್ಮೆಲ್ಲರ ನೈತಿಕ ಜವಾಬ್ದಾರಿಯನ್ನು ಹೆಚ್ಚಿಸಿತು.

ಕೇವಲ ಇಪ್ಪತ್ತುನಾಲ್ಕು ಗಂಟೆಯ ಅವಧಿಯೊಳಗೆ ಕಾಳಿಸ್ವಾಮಿ ಮತ್ತು ಪ್ರಮೋದ್ ಮುತಾಲಿಕ್ ಎಂಬ ಕಿಡಿಗೇಡಿಗಳನ್ನು ಮಂಡ್ಯ ಜಿಲ್ಲೆಗೆ ನಿರ್ಭಂದಿಸುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿ ಅಲ್ಲಿನ ರೈತ ಸಂಘದ ಕೆ.ಬೋರಯ್ಯ, ಸುನಂದಾ ಜಯರಾಂ, ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್, ಹುಲ್ಕರೆ ಮಹಾದೇವು, ಕೃಷಿ ಕೂಲಿ ಕಾರ್ಮಿಕ ಸಂಘಟನೆಯ ಮಿತ್ರರಾದ ಟಿ.ಎಲ್.ಕೃಷ್ಣೇಗೌಡ, ಯಶವಂತ ಮದ್ದೂರು ಮತ್ತು ಕುಮಾರಿಯವರ ಮುಂತಾದ ಮಿತ್ರರ ಜೊತೆ ಮಾತನಾಡಿದ್ದೆ.

ಫೇಸ್ ಬುಕ್ ನಲ್ಲಿ ನಾನು ಬರೆದ ಮನವಿಯನ್ನು ನನಗೆ ಈವರೆಗೂ ಪರಿಚಯವಿಲ್ಲದ ಹಾಗೂ ನನ್ನೂರು ಪಕ್ಕದ ಕೀಲಾರ ನಾಗೇಗೌಡ ಮತ್ತು ಮಿತ್ರ ಎಸ್.ಸಿ ದಿನೇಶ್ ಕುಮಾರ್ ಮುಂತಾದವರು ಹಂಚಿಕೊಂಡ ಫಲವಾಗಿ ನೂರವೈತ್ತಕ್ಕೂ ಹೆಚ್ಚು ಮಂದಿ ಪ್ರತಿ ಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿ, ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಇಬ್ಬರಿಗೂ ಮನವಿ ಸಲ್ಲಿಸುವಾಗ ಹಾಜರಿದ್ದರು.

ನನ್ನ ಪುತ್ರನ ಸಮಾನನಾದ ರಾಜೇಂದ್ರ ಪ್ರಸಾದ್ ಗೆ ಕರೆದಿರಲಿಲ್ಲ. ಅವನೂ ಕೂಡ ತನ್ನೆಲ್ಲಾ ಕಾರ್ಯವನ್ನು ಬದಿಗೊತ್ತಿ ಕೊನೆಯವರೆಗೆ ಇದ್ದ. ಮಂಡ್ಯ ಜಿಲ್ಲೆಯ ಎಂಟತ್ತು ಸಂಘಟನೆಗಳು ವಿಶೇಷವಾಗಿ ಕ.ರಾ.ವೆ. ಕಾರ್ಯಕರ್ತರು ಮತ್ತು ಯುವ ಕಾಂಗ್ರೇಸ್ಸಿನ ಪದಾಧಿಕಾರಿಗಳು ಸಿ.ಎಂ. ದ್ಯಾವಪ್ಪ, ರವೀಂದ್ರ ಸೇರಿದಂತೆ ಅನೇಕ ಯುವ ವಕೀಲರು ನಮ್ಮ ಜೊತೆ ಕೈ ಜೋಡಿಸಿದರು.

ಈ ದಿನ ಕಾರ್ಯಕ್ರಮ ದ ಫಲಿತಾಂಶ ಏನೆಂದರೆ, ಜಿಲ್ಲೆಯ ಎಲ್ಲಾ ಸಂಘಟನೆಗಳು ಮಂಡ್ಯ ನೆಲದ ಶಾಂತಿ‌ ಕದಡುವವರ ವಿರುದ್ಧ ಹೋರಾಡಲು ತೀರ್ಮಾನಿಸಲಾಯಿತು. ಅದಕ್ಕಾಗಿ ಮುಂದಿನ ತಿಂಗಳು ಎಲ್ಲಾ ಸಂಘಟನೆಗಳ ಮುಖಂಡರ ಸಭೆ ಕರೆದು ಒಕ್ಕೂಟ ನಿರ್ಮಿಸಲು ನಿರ್ಧರಿಸಲಾಯಿತು.

ನಮ್ಮ ಯುವಕರು ಸೂಕ್ತ ಮಾರ್ಗದರ್ಶನ ಇಲ್ಲದೆ ಬಜರಂಗಿಗಳಾಗುವುದನ್ನು ಮತ್ತು ಕಪಿ ಸೇನೆಯ ಸದಸ್ಯರಾಗುವುದನ್ನು ತಡೆಗಟ್ಟಲು ಜಿಲ್ಲೆಯ ಪ್ರತಿ ಹೋಬಳಿ ಮತ್ತು ತಾಲೂಕುಗಳಿಗೆ ಭೇಟಿ ಮಾಡಿ ಯುವಕರಿಗೆ ವಾಸ್ತವ ಭಾರತವನ್ನು ಮನವರಿಕೆ ಮಾಡೋಣ ಎಂದು ಎಲ್ಲರೂ ನಿರ್ಧರಿಸಿದೆವು. ಐವತ್ತು ವರ್ಷಗಳ ಹಿಂದೆ ಡಾ.ಬೆಸಗರಹಳ್ಳಿ ರಾಮಣ್ಣ ಮತ್ತು ಪ್ರೊ.ಹೆಚ್.ಎಲ್. ಕೇಶವಮೂರ್ತಿ ಮುಂತಾದವರು ನನ್ನ ತಲೆಮಾರಿನ ಗೆಳೆಯರ ಎದೆಗೆ ಬಿತ್ತಿದ ಬಾತೃತ್ವದ ಭಾವನೆಯ ಬೀಜಗಳ ಫಲವಾಗಿ ನಾವಿಂದು ಕನಿಷ್ಟ ಓರ್ವ ಸಜ್ಜನ ಮನುಷ್ಯನಂತೆ ಘನತೆಯ ಬದುಕನ್ನು ಬದುಕಲು ಸಾಧ್ಯವಾಗಿದೆ. ಈಗ ಯುವ ತಲೆಮಾರಿನ ಎದೆಗೆ ಇಂತಹದೇ ಬೀಜ‌ ಬಿತ್ತುವ ನೈತಿಕ ಜವಾಬ್ದಾರಿ ನನ್ನ ತಲೆಮಾರಿನ ಮೇಲಿದೆ ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

--------------------------------------------------------------------------------------

'ಮಂಡ್ಯ ಜಿಲ್ಲೆಯು ರಾಜ್ಯದ ಪ್ರಮುಖ ಕೃಷಿ ಪ್ರದಾನ ಜಿಲ್ಲೆಯಾಗಿದ್ದು ಇಲ್ಲಿನ ಜನತೆ, ರೈತರು, ದಲಿತರು, ಮುಸಲ್ಮಾನರು, ಬೌದ್ಧರು ಮತ್ತು ಕ್ರೈಸ್ತರು ಎಂಬ ಬೇಧಭಾವವಿಲ್ಲದೆ ಅಣ್ಣತಮ್ಮಂದಿರಂತೆ ಬದುಕುತ್ತಿರುವುದು ಈ ನೆಲದ ಪ್ರಧಾನ ಸಂಸ್ಕೃತಿಯಾಗಿದೆ. ಮಂಡ್ಯದ ಈ ಗುಣವು ಇತರೆ ಜಿಲ್ಲೆಗಳಿಗೂ ಮಾದರಿಯಾಗಿದೆ. ಇಲ್ಲಿನ ರೈತ ಮತ್ತು ದಲಿತ ಸಂಘಟನೆಗಳು ಹಾಗೂ ಕೃಷಿ ಕೂಲಿ ಕಾರ್ಮಿಕ ಸಂಘಟನೆಗಳಲ್ಲದೆ ಎಲ್ಲಾ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಜಿಲ್ಲೆಯ ಈ ಭಾತೃತ್ವದ ಸಂಸ್ಕೃತಿಯ ಭವ್ಯಪರಂಪರೆಯನ್ನು ಸದಾ ಕಾಪಾಡಿಕೊಂಡು ಬಂದಿರುವುದು ವಿಶೇಷವಾಗಿದೆ ಹಾಗಾಗಿ ಜಿಲ್ಲೆಯಲ್ಲಿ 70ರ ದಶಕದ ನಂತರ ಯಾವುದೇ ಕೋಮುಗಲಭೆಗಳು ಈವರೆಗೆ ನಡೆಯಲು ಸಾಧ್ಯವಾಗಿಲ್ಲ' ಎಂದು ಪ್ರತಿಭಟನಾಕಾರರು ಹೇಳಿದರು.

ಜಾತಿ ಗಲಭೆಗಳನ್ನೂ ನಿಗ್ರಹಿಸಿ ತಡೆಗಟ್ಟುವಲ್ಲಿ ಇಲ್ಲಿನ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಮುಖಂಡರು ಜಾಗ್ರತೆವಹಿಸಿ ಶಾಂತಿ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಜಿಲ್ಲೆಯ ಶಾಂತಿಯುತ ಬದುಕಿಗೆ ಜಿಲ್ಲೆಯ ಹೊರಗಿನ ವ್ಯಕ್ತಿಗಳಾದ ಕಾಳಿಮಠದ ಋಷಿಕುಮಾರಸ್ವಾಮಿ, ಹುಬ್ಬಳ್ಳಿಯ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಮತ್ತಿತರರು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಐತಿಹಾಸಿಕ ಜುಮ್ಮಾ ಮಸೀದಿಯ ಕುರಿತಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಕಳೆದ ತಿಂಗಳು ಶ್ರೀರಂಗಪಟ್ಟಣದಲ್ಲಿ ಮಸೀದಿ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ಜಿಲ್ಲೆಯ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ ಋಷಿಕುಮಾರಸ್ವಾಮಿ ಇದೀಗ ಜಾಮೀನಿನ ಮೇಲೆ ಹೊರಗೆ ಬಂದ್ದಿದ್ದು, ಬೆಂಗಳೂರಿನಲ್ಲಿ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಮೂಲಕ ಹೋಗಿ ಮಸೀದಿ ಇರುವ ಜಾಗದಲ್ಲಿ ಆಚಿಜನೇಯ ದೇವಾಲಯ ನಿರ್ಮಿಸುತ್ತೇನೆಂದು ಹೇಳಿಕೆ ನೀಡಿರುವುದು ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಕೋಮು ಸಂಘರ್ಷವನ್ನುಂಟುಮಾಡುವ ಪ್ರಯತ್ನವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಂತಿ ಸೌಹಾರ್ದತೆಯನ್ನು ಹಾಳುಮಾಡುವ ಹಾಗೂ ಕೋಮು ಸಂಘರ್ಷವನ್ನು ಉದೇಪಿಸುವ ಇಂತಹ ವ್ಯಕ್ತಿಗಳ ಮೇಲೆ ಭಾರತೀಯ ದಂಡ ಸಂಹಿತೆ ಪ್ರಕಾರ ಮೊಕದ್ದಮೆ ಹಾಕುವುದರ ಮೂಲಕ ಇವರನ್ನು ಶಾಶ್ವತವಾಗಿ ಮಂಡ್ಯ ಜಿಲ್ಲೆಗೆ ಪ್ರವೇಶ ಮಾಡದಂಎ ನಿರ್ಬಂಧ ಹೇರಬೇಕು ಎಂದು ಪ್ರತಿಭನಾಕಾರರು ಒತ್ತಾಯಿಸಿದರು. 

ಚಿಂತಕರಾದ ಪ್ರೊ.ಹುಲ್ಕೆರೆ ಮಹಾದೇವ, ಪ್ರೊ.ಜಿ.ಟಿ.ವೀರಪ್ಪ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಗುಡಿಗೇನಹಳ್ಳಿ ಚಂದ್ರಶೇಖರ, ಎಂ.ವಿ.ಕೃಷ್ಣ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಇಂಡುವಾಳು ಚಂದ್ರಶೇಖರ್, ಸುನಂದಾ ಜಯರಾಂ, ಕೆ.ಬೋರಯ್ಯ, ಮುದ್ದೇಗೌಡ, ಸಿಪಿಎಂ ಮುಖಂಡ ಟಿ.ಎಲ್.ಕೃಷ್ಣೇಗೌಡ, ಸಿಐಟಿಯುನ ಸಿ.ಕುಮಾರಿ, ಟಿ.ಯಶವಂತ, ಎಂ.ಬಿ.ನಾಗಣ್ಣಗೌಡ, ಚೀರನಹಳ್ಳಿ ಲಕ್ಷ್ಮಣ್, ಎ.ಎಸ್.ಶ್ರೀನಿವಾಸ, ಜಿ.ಡಿ.ಶಿವಕುಮಾರ್, ಟಿ.ಡಿ.ನಾಗರಾಜು, ಕಾಂಗ್ರೆಸ್ ಮುಖಂಡರಾದ ಅನಿಲ್‍ಕುಮಾರ್, ಸಿ.ಎಂ.ದ್ಯಾವಪ್ಪ, ಇತರೆ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News