ತೀವ್ರ ವಿರೋಧದ ಮಧ್ಯೆ ‘ಮತಾಂತರ ನಿಷೇಧ ಸುಗ್ರೀವಾಜ್ಞೆ'ಗೆ ರಾಜ್ಯಪಾಲರ ಅಂಕಿತ

Update: 2022-05-17 13:19 GMT
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು, ಮೇ 17: ‘ಸಾರ್ವಜನಿಕರು, ಜನ ಸಂಘಟನೆಗಳು ಹಾಗೂ ಕ್ರೈಸ್ತ ಸಮುದಾಯದ ತೀವ್ರ ವಿರೋಧದ ಮಧ್ಯೆಯೇ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಸುಗ್ರೀವಾಜ್ಞೆ'ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ. 

2021ರ ಡಿಸೆಂಬರ್‍ನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜರುಗಿದ ಅಧಿವೇಶನದಲ್ಲಿ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ' ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಪರಿಷತ್‍ನಲ್ಲಿ ಈ ಮಸೂದೆಯನ್ನು ಮಂಡಿಸಲು ಸರಕಾರಕ್ಕೆ ಸಾಧ್ಯವಾಗಿರಲಿಲ್ಲ. ಆಹಿನ್ನೆಲೆಯಲ್ಲಿ ವಿಧಾನಸಭೆಯ ಅಂಗೀಕಾರ ಪಡೆದಿರುವ ಸ್ವರೂಪದಲ್ಲೇ ‘ಸುಗ್ರೀವಾಜ್ಞೆ' ಮೂಲಕ ಮೇ 12ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಸಚಿವ ಸಂಪುಟ ಸಭೆಯ ನಿರ್ಧಾರದಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ರವಾನಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳವಾರ ಅಂಕಿತ ಹಾಕಿದ್ದಾರೆ. ಹೀಗಾಗಿ ‘ಮತಾಂತರ ನಿಷೇಧ' ಸುಗ್ರೀವಾಜ್ಞೆ ರಾಜ್ಯದಲ್ಲಿ ಇಂದಿನಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದೆ. ಮತಾಂತರಕ್ಕೆ ಪ್ರಚೋದನೆ ನೀಡುವವರಿಗೆ ವಿವಿಧ ಹಂತದಲ್ಲಿ 10 ವರ್ಷಗಳ ವರೆಗೂ ಕಾರಾಗೃಹ ಶಿಕ್ಷೆ ಹಾಗೂ 1ಲಕ್ಷ ರೂ. ವರೆಗೆ ಜುಲ್ಮಾನೆಗೆ ವಿಧಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

‘ಆಮಿಷ, ಒತ್ತಾಯ, ಬಲವಂತ ಮತ್ತು ವಂಚನೆ ಸಾಧನೆಗಳ ಮೂಲಕ ಮಾಡಲಾದ ‘ಮತಾಂತರ' ಹಾಗೂ ಸಾಮೂಹಿಕ ಮತಾಂತರವನ್ನು ತಡೆಯುವುದಕ್ಕಾಗಿ ರಾಜ್ಯ ಸರಕಾರ ರೂಪಿಸಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ(ಮತಾಂತರ ನಿμÉೀಧ) ಸುಗ್ರೀವಾಜ್ಞೆ'ಗೆ ರೂಪಿಸಲಾಗಿದೆ' ಎಂದು ರಾಜ್ಯ ಸರಕಾರ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News