ವಜ್ರದ ಆಭರಣಗಳ ಶುದ್ಧತೆಯ ನಕಲಿ ಪ್ರಮಾಣ ಪತ್ರ: ಇಬ್ಬರು ಮಹಿಳೆಯರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು

Update: 2022-05-17 13:53 GMT

ಬೆಂಗಳೂರು, ಮೇ 17: ವಜ್ರದ ಆಭರಣಗಳ ಶುದ್ಧತೆ ಪರಿಶೀಲಿಸಿ ಪ್ರಮಾಣಪತ್ರ ನೀಡುವ ಖಾಸಗಿ ಸಂಸ್ಥೆಯೊಂದರ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ವಿತರಿಸಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಂಗಳೂರಿನ ಇಬ್ಬರು ಮಹಿಳೆಯರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 

ಉಳ್ಳಾಲದ ಪ್ರತೀಕಾ ರೈ ಬೆಳ್ಯಾ ಹಾಗೂ ಅತ್ತಾವರದ ಹರಿಣಿ ಶೆಟ್ಟಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರು ಮಹಿಳೆಯರಾಗಿದ್ದು, ಅವರ ವಿರುದ್ಧ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಬಹುದಾದ ಕೃತ್ಯಗಳಿಗೆ ಸಂಬಂಧಿಸಿದ ಆರೋಪಗಳಿಲ್ಲ. ಅವರು ವಿತರಿಸಿದ್ದಾರೆ ಎನ್ನಲಾದ ನಕಲಿ ಪ್ರಮಾಣಪತ್ರಗಳು ದೂರುದಾರರ ಬಳಿ ಇದ್ದು, ಅವು ತನಿಖೆಗೆ ಲಭ್ಯ ಇವೆ. ಹೀಗಾಗಿ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ. 

ಏನಿದು ಪ್ರಕರಣ: ವಜ್ರದ ಆಭರಣಗಳ ಶುದ್ಧತೆ ಪರಿಶೀಲಿಸಿ ಪ್ರಮಾಣಪತ್ರ ನೀಡುವ ಬೆಂಗಳೂರಿನ ಇಂಟರ್‍ನ್ಯಾಷನಲ್ ಜೆಮೋಲಾಜಿಕಲ್ ಇನ್‍ಸ್ಟಿಟ್ಯೂಟ್‍ನ ಶಾಖಾ ವ್ಯವಸ್ಥಾಪಕ ಶಮಿಕ್ ಝವೇರಿ ಕಳೆದ ಮಾ.4ರಂದು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

2022ರ ಫೆ.1ರಂದು ಇಬ್ಬರು ವ್ಯಕ್ತಿಗಳು ಪ್ರತ್ಯೇಕ ಇ-ಮೇಲ್ ಕಳುಹಿಸಿದ್ದರು. ಅದರ ನೈಜತೆ ತಿಳಿಸುವಂತೆ ಕೋರಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಪ್ರತೀಕಾ ರೈ ಹಾಗೂ ಹರಿಣಿ ಶೆಟ್ಟಿ ಸಂಸ್ಥೆಯ ಪ್ರತಿನಿಧಿಗಳೇ ಅಲ್ಲ ಎಂದು ತಿಳಿದು ಬಂದಿದೆ. ಕಂಪೆನಿಯ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ವಿತರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಬಂಧನ ಭೀತಿಯಿಂದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು 24ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು.           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News