"ನಾನು ಮೋಸ ಹೋಗಿದ್ದೇನೆ": ಜ್ಞಾನವಾಪಿ ಮಸೀದಿಯಲ್ಲಿ ಚಿತ್ರೀಕರಣದ ನೇತೃತ್ವ ವಹಿಸಿದ್ದ ಅಧಿಕಾರಿ ಆರೋಪ

Update: 2022-05-17 14:05 GMT
Photo: NDTV

ಹೊಸದಿಲ್ಲಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ಚಿತ್ರೀಕರಣದ ನೇತೃತ್ವ ವಹಿಸಿದ್ದ ಉನ್ನತ ಅಧಿಕಾರಿಯನ್ನು ವಾರಣಾಸಿ ನ್ಯಾಯಾಲಯ ಇಂದು ವಜಾಗೊಳಿಸಿದೆ. ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಮುನ್ನವೇ ಚಿತ್ರೀಕರಣದ ಫಲಿತಾಂಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಕ್ಕಾಗಿ ಹಿಂದೂ ಅರ್ಜಿದಾರರು ಮತ್ತು ಮಸೀದಿಯ ಪ್ರತಿವಾದಿಗಳ ಪರ ವಕೀಲರ ನಡುವೆ ನಡೆದ ತೀವ್ರ ವಾಗ್ವಾದದ ಬಳಿಕ ವಕೀಲ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಲಾಗಿದೆ.

ಅಡ್ವೊಕೇಟ್ ಕಮಿಷನರ್ ವಿಶಾಲ್ ಸಿಂಗ್ ಅವರ ದೂರಿನ ಮೇರೆಗೆ ಅಜಯ್ ಮಿಶ್ರಾ ಅವರನ್ನು ಸರ್ವೆ ಕಮಿಷನರ್ ಹುದ್ದೆಯಿಂದ ತೆಗೆದುಹಾಕಲಾಗಿದೆ.

“ನಾನೇನೂ ತಪ್ಪು ಮಾಡಿಲ್ಲ. ವಿಶಾಲ್ ಸಿಂಗ್ ನನಗೆ ಮೋಸ ಮಾಡಿದ್ದಾರೆ. ಅವರು ನನ್ನ ವಿಶ್ವಾಸಾರ್ಹ ಸ್ವಭಾವದ ಲಾಭವನ್ನು ಪಡೆದರು,"   ಮಿಶ್ರಾ NDTV ಗೆ ತಿಳಿಸಿದ್ದಾರೆ.

“ನಾವು ನಿನ್ನೆ ರಾತ್ರಿ 12 ಗಂಟೆಯವರೆಗೆ ಒಟ್ಟಾಗಿ ವರದಿ ಸಿದ್ಧಪಡಿಸಿದ್ದೇವೆ. ವಿಶಾಲ್ ಸಿಂಗ್ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂಬುದು ನನಗೆ ಗೊತ್ತಿರಲಿಲ್ಲ. ನಾನು ನಿಜವಾಗಿಯೂ ದುಃಖಿತನಾಗಿದ್ದೇನೆ. ನಾನು ಪಕ್ಷಪಾತ ಮಾಡಲಿಲ್ಲ. ಸಮೀಕ್ಷೆಯ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ.” ಎಂದು ಮಿಶ್ರಾ ತಿಳಿಸಿದ್ದಾರೆ.

ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ದೇವಾಲಯದ ಭಾಗಗಳು ಇವೆ ಎಂಬ ಆರೋಪವನ್ನು ಒಳಗೊಂಡಿರುವ ಪ್ರಕರಣದಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದ ಚಿತ್ರೀಕರಣದ ವರದಿಗಾಗಿ ನ್ಯಾಯಾಲಯವು ಇನ್ನೂ ಎರಡು ದಿನಗಳ ಕಾಲಾವಕಾಶವನ್ನು ನೀಡಿದೆ.

ಅಜಯ್ ಮಿಶ್ರಾ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿರುವುದಾಗಿ ನೂತನ ಸಮೀಕ್ಷೆ ಮುಖ್ಯಸ್ಥ ವಿಶಾಲ್ ಸಿಂಗ್ ಹೇಳಿದ್ದಾರೆ. ʼಅಜಯ್ ಮಿಶ್ರಾ ಅವರ ಕಾರ್ಯವೈಖರಿ ಕುರಿತು ಮನವಿ ಪತ್ರ ನೀಡಿದ್ದೆ, ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ವದಂತಿ ಹಬ್ಬಿಸುತ್ತಿದ್ದ ವಿಡಿಯೋಗ್ರಾಫರ್ ಒಬ್ಬರನ್ನು ಅಜಯ್ ಮಿಶ್ರಾ ನೇಮಕ ಮಾಡಿದ್ದು, ನನ್ನ ಅಹವಾಲು ನ್ಯಾಯಯುತವಾಗಿರುತ್ತದೆ ಎಂದು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆʼ ಎಂದು ತಿಳಿಸಿದ್ದಾರೆ.

“ತಾನು ನೇಮಿಸಿಕೊಂಡ ವೀಡಿಯೋಗ್ರಾಫರ್ ವಿವರಗಳನ್ನು ಸೋರಿಕೆ ಮಾಡಿದ್ದಾನೆ” ಎಂದು ಪರೋಕ್ಷವಾಗಿ ಒಪ್ಪಿಕೊಂಡ ಮಿಶ್ರಾ, “ಇದರ ಬಗ್ಗೆ ನಾನು ಏನು ಮಾಡಬಹುದು? ನಾನು ಛಾಯಾಗ್ರಾಹಕನನ್ನು ನೇಮಿಸಿಕೊಂಡಿದ್ದೆ, ಆತ ತನಗೆ ಮೋಸ ಮಾಡಿದ್ದಾನೆ." ಎಂದು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News