ಕೊಳವೆಬಾವಿ ಅಕ್ರಮ ಆರೋಪ; ತನಿಖೆ ನಡೆಯುತ್ತಿರುವಾಗ ಕಾಮಗಾರಿ ಸ್ಥಗಿತ ಮಾಡುತ್ತಿಲ್ಲವೇಕೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

Update: 2022-05-17 14:30 GMT

ಬೆಂಗಳೂರು, ಮೇ 17: ‘ಹಿಂದುಳಿದ ವರ್ಗದ ಇಲಾಖೆಯಲ್ಲಿ ಒಂದು ಕೊಳವೆ ಬಾವಿ ಕೊರೆಯಲು 84 ಸಾವಿರ ರೂ.ವೆಚ್ಚ ತಗುಲಿದರೆ, ಸಮಾಜ ಕಲ್ಯಾಣ ಇಲಾಖೆ ಯೋಜನೆಯಲ್ಲಿ 1.92ಲಕ್ಷ ರೂ. ವೆಚ್ಚ ತಗುಲುತ್ತಿರುವುದು ಏಕೆ? ತನಿಖೆ ನಡೆಯುತ್ತಿರುವಾಗ ಕಾಮಗಾರಿ ಸ್ಥಗಿತ ಮಾಡುತ್ತಿಲ್ಲವೇಕೆ? ಇಲ್ಲಿ ಅಕ್ರಮ ಕಂಡು ಬಂದರೆ ಏನು ಮಾಡುತ್ತೀರಾ?' ಎಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆದಾಯ ತೆರಿಗೆ ಪ್ರಮಾಣ ಪತ್ರದ ನೈಜತೆ ವಿಚಾರವಾಗಿ ಆದಾಯ ಇಲಾಖೆಗೆ ಬರೆದ ಪತ್ರಕ್ಕೆ ಉತ್ತರ ಸಿಕ್ಕಿದೆಯೇ? ಸಿಕ್ಕಿದ್ದರೆ ಈ ಪ್ರಮಾಣ ಪತ್ರ ಅಸಲಿಯೋ ನಕಲಿಯೋ? ಈ ಮಾಹಿತಿ ಎಲ್ಲಿ? ಕಾಮಗಾರಿ ಪೂರ್ಣಗೊಳಿಸಿರುವ ಪ್ರಮಾಣ ಪತ್ರ ಹೇಗೆ ಸಿಕ್ಕಿದೆ? 100 ರೂ.ಮೊತ್ತದ ಅರ್ಹತೆ ಇರುವವರಿಗೆ 1 ಸಾವಿರ ರೂ. ಮೊತ್ತದ ಕಾಮಗಾರಿ ನೀಡುತ್ತಿರುವುದೇಕೆ?' ಎಂದು ಪ್ರಶ್ನಿಸಿದರು.

‘ಕೊಳವೆಬಾವಿ ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಅಕ್ರಮದ ಆರೋಪ ಬಂದ ನಂತರವೂ ಯಾವುದೇ ಅಧಿಕಾರಿಗಳ ವಿಚಾರಣೆಯೂ ಆಗಿಲ್ಲ ಏಕೆ? ನಮ್ಮ ಬಳಿ ಇರುವ ಸರಕಾರದ ಮಾಹಿತಿ, ಸರಕಾರದ ಬಳಿಯೇ ಯಾಕಿಲ್ಲ? ಈ ಸರಕಾರದಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಭರವಸೆ ಇಲ್ಲ. ಹೀಗಾಗಿ ಈ ಪ್ರಕರಣವನ್ನು ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು' ಎಂದು ಅವರು ಆಗ್ರಹಿಸಿದರು.

‘ಕಳೆದ ಬಾರಿ ನಾನು ಆ ಆರೋಪ ಮಾಡಿದಾಗ ಸಮಾಜ ಕಲ್ಯಾಣ ಇಲಾಖೆ ಸಚಿವರು ಜಿರೋ ಪರ್ಸೆಂಟ್ ಕಮಿಷನ್ ಸರಕಾರ ಎಂದಿದ್ದರು. ಆದರೆ, ಅವರು ತನಿಖೆ ಮಾಡಿಸುತ್ತಿರುವ ರೀತಿ ನೋಡಿದರೆ ಅವರ ಮೇಲಿನ ನಂಬಿಕೆ ವಿಶ್ವಾಸ ಹೋಗಿದೆ. ಅವರ ನಡುವಳಿಗೆ ತಾವು ರಕ್ಷಣೆ ಪಡೆದು, ಬೇರೆಯವರನ್ನು ರಕ್ಷಣೆ ಮಾಡುವಂತೆ ಇದೆ' ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News