ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ

Update: 2022-05-17 16:37 GMT

ಬೆಂಗಳೂರು, ಮೇ 17: ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಆಯ್ಕೆಗೊಂಡ ಏಳು ಸದಸ್ಯರು ಜೂ.14ರಂದು ನಿವೃತ್ತರಾಗಲಿರುವುದರಿಂದ ಅವರ ಸ್ಥಾನಗಳನ್ನು ತುಂಬಲು ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗವು ನಿರ್ಧರಿಸಿದೆ.

ಚುನಾವಣಾ ಆಯೋಗವು ಮೇ 17ಕ್ಕೆ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಮೇ 24. ನಾಮಪತ್ರ ಪರಿಶೀಲನೆ ಮೇ 25ಕ್ಕೆ ನಡೆಯಲಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಮೇ 27ಕ್ಕೆ ಕೊನೆಯ ದಿನ. ಅವಶ್ಯಕವಿದ್ದಲ್ಲಿ ಜೂ.3ಕ್ಕೆ ಮತದಾನ ನಡೆಯಲಿದ್ದು, ಅಂದು ಸಂಜೆಯ ಮತ ಏಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.

ಈ ದ್ವೈವಾರ್ಷಿಕ ಚುನಾವಣೆಗೆ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಚುನಾವಣಾಧಿಕಾರಿಯಾಗಿ ಹಾಗೂ ಉಪಕಾರ್ಯದರ್ಶಿ ಬಿ.ಎಸ್.ಮಹಾಲಿಂಗೇಶ್ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ. ಚುನಾವಣೆಗೆ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳು ಮೇ 24ರವರೆಗೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರ ಕಚೆÉೀರಿಯಲ್ಲಿ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ಮೇ 22ರ ರವಿವಾರ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಆ ದಿನದಂದು ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.

ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ನಾಮಪತ್ರದ ದಸ್ತಾವೇಜನ್ನು ನಿಗದಿತ ನಮೂನೆ 2ಡಿ ಅಡಿಯಲ್ಲಿ ಸಲ್ಲಿಸಬೇಕು. ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ ಕನಿಷ್ಠ ಹತ್ತು ಜನ ಹಾಲಿ ವಿಧಾನಸಭಾ ಸದಸ್ಯರು ಸಹಿ ಮಾಡಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ 5ಸಾವಿರ ರೂ.ಗಳನ್ನು ಹಾಗೂ ಇತರ ಅಭ್ಯರ್ಥಿಗಳು 10ಸಾವಿರ ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News