VIDEO- ವ್ಯಾಪಾರಕ್ಕೆ ನಗರಸಭೆ ಸಿಬ್ಬಂದಿಯಿಂದ ಅಡ್ಡಿ ಆರೋಪ: ತಳ್ಳುಗಾಡಿಗೆ ಬೆಂಕಿ ಹಚ್ಚಿದ ಬೀದಿ ಬದಿ ವ್ಯಾಪಾರಿ

Update: 2022-05-17 17:15 GMT

ಚಿಕ್ಕಮಗಳೂರು, ಮೇ 17: ನಗರದಲ್ಲಿ ತಳ್ಳುಗಾಡಿ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿ, ಸಿಬ್ಬಂದಿ ಕಿರುಕುಳ ನೀಡುತ್ತಾ ಬಡಪಾಯಿ ಜನರ ವ್ಯಾಪಾರಕ್ಕೆ ತೊಂದರೆ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪೂರಕವಾಗಿ ನಗರಸಭೆ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ವ್ಯಾಪಾರಿಯೊಬ್ಬರು ತನ್ನ ಬದುಕಿಗೆ ಆಧಾರವಾಗಿದ್ದ ತಳ್ಳುಗಾಡಿಗೆ ಬೆಂಕಿ ಹಚ್ಚಿ ನಗರಸಭೆ ವಿರುದ್ಧ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಗರಸಭೆಯ ಕ್ರಮದ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಮಲ್ಲಂದೂರು ರಸ್ತೆಯಲ್ಲಿ ಸೋಮವಾರ ಸಂಜೆ ವೇಲೆ ಬಡ ತಳ್ಳುಗಾಡಿ ವ್ಯಾಪಾರಿಯೊಬ್ಬರು ನಗರಸಭೆ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ತನ್ನ ತಳ್ಳುಗಾಡಿಗೆ ಬೆಂಕಿ ಹಚ್ಚಿದ್ದು, ಸೋಮವಾರ ನಗರಸಭೆ ಸಿಬ್ಬಂದಿ ಮಲ್ಲಂದೂರು ರಸ್ತೆ ಬದಿಯಲ್ಲಿ ತಳ್ಳುಗಾಡಿ ಮೂಲಕ ವ್ಯಾಪಾರ ಮಾಡುತ್ತಿದ್ದವರನ್ನು ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ತಳ್ಳುಗಾಡಿ ವ್ಯಾಪಾರಿಯೊಬ್ಬರು ಗಾಡಿಯನ್ನು ತೆರವು ಮಾಡಲು ಒಪ್ಪದೇ ನಗರಸಭೆ ಸಿಬ್ಬಂದಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಳ್ಳುಗಾಡಿಯನ್ನು ತೆರವು ಮಾಡದಂತೆ ವ್ಯಾಪಾರಿ ಪರಿಪರಿಯಾಗಿ ಬೇಡಿಕೊಂಡರೂ ಒಪ್ಪದ ನಗರಸಭೆ ಸಿಬ್ಬಂದಿ ತಳ್ಳುಗಾಡಿಯನ್ನು ತೆರವು ಮಾಡಲು ಮುಂದಾಗಿದ್ದಾರೆ.

ಇದರಿಂದ ಬೇಸತ್ತ ವ್ಯಾಪಾರಿ ತನ್ನ ತಳ್ಳುಗಾಡಿಗೆ ತಾನೇ ಬೆಂಕಿ ಹಚ್ಚಿಕೊಂಡು ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಳ್ಳುಗಾಡಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ವ್ಯಾಪಾರ ಮಾಡಲು ಸಾಲ ಮಾಡಿದ್ದೇನೆ. ನಗರಸಭೆ ಅಧಿಕಾರಿ, ಸಿಬ್ಬಂದಿ ವ್ಯಾಪಾರ ಮಾಡಲು 500-1000 ಲಂಚ ಕೇಳುತ್ತಾರೆ. ಲಂಚ ನೀಡದಿದ್ದಲ್ಲಿ ತಳ್ಳುಗಾಡಿಯನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವಂತಿಲ್ಲ ಎಂದು ಗಾಡಿಯನ್ನೇ ಕೊಂಡೊಯ್ಯುತ್ತಿದ್ದಾರೆ. ನಾವು ಬಡವರು, ವ್ಯಾಪಾರ ಇಲ್ಲದಿದ್ದರೇ ಕುಟುಂಬವನ್ನು ಸಾಕುವುದು ಹೇಗೆ? ನಗರಸಭೆ ಅಧಿಕಾರಿ, ಸಿಬ್ಬಂದಿ ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ. ವ್ಯಾಪಾರ ಮಾಡಲು ನಗರಸಭೆಗೆ ತೆರಿಗೆ ಪಾವತಿ ಮಾಡುತ್ತಿದ್ದೇವೆ. ಆದರೂ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಬಡವರ ಹೊಟ್ಟೆಮೇಲೆ ಹೊಡೆಯುತ್ತಿದ್ದಾರೆ. ಅನೇಕ ವರ್ಷಗಳಿಂದ ತಳ್ಳುಗಾಡಿಯಲ್ಲೇ ವ್ಯಾಪಾರ ಮಾಡುತ್ತಿದ್ದು, ಹಿಂದೆಂದೂ ಇಲ್ಲದ ಕಿರುಕುಳ ಈಗ ಹೆಚ್ಚಾಗಿದೆ ಎಂದು ವ್ಯಾಪಾರಿ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಘಟನೆಯನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದವರು ಬಡ ವ್ಯಾಪಾರಿಗಳ ಮೇಲೆ ನಗರಸಭೆ ಅಧಿಕಾರಿ, ಸಿಬ್ಬಂದಿ ನೀಡುತ್ತಿರುವ ಕಿರುಕುಳದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಸಂಬಂಧ ಸ್ಪಷ್ಟನೆ ನೀಡಿರುವ ನಗರಸಭೆ ಅಧ್ಯಕ್ಷ ವೇಣುಗೋಪಾಲ್, ತಳ್ಳುಗಾಡಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ವಾಹನಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪೊಲೀಸ್ ಇಲಾಖೆಯವರು ನಗರಸಭೆಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ತಳ್ಳುಗಾಡಿಯನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡದೇ ತಳ್ಳಿಕೊಂಡೇ ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಆದರೂ ಕೆಲ ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ಇಂತಹ ವ್ಯಾಪಾರಿಗಳಿಗೆ ಅನೆಕ ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಸೋಮವಾರ ಮಲ್ಲಂದೂರು ರಸ್ತೆಯ ವ್ಯಾಪಾರಿಗೆ ನಗರಸಭೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರಷ್ಟೆ. ಅವರು ಗಾಡಿಗೆ ಬೆಂಕಿ ಹಚ್ಚಿಲ್ಲ. ವಿರೋಧ ಪಕ್ಷದವರ ಚಿತಾವಣೆಯಿಂದಾಗಿ ತಳ್ಳುಗಾಡಿ ಮಾಲಕನೇ ಗಾಡಿಗೆ ಬೆಂಕಿ ಹಚ್ಚಿ ಅದನ್ನು ನಗರಸಭೆ ಮೇಲೆ ಹೊರಿಸಿದ್ದಾನೆ. 

- ವರಸಿದ್ದಿ ವೇಣುಗೋಪಾಲ್, ನಗರಸಭೆ ಅಧ್ಯಕ್ಷ
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News