ನಾರಾಯಣಗುರುಗಳಿಗೆ ಸರಕಾರದಿಂದ ಅವಮಾನ: ಜೆ.ಆರ್.ಲೋಬೋ

Update: 2022-05-18 11:21 GMT

ಮಂಗಳೂರು, ಮೇ 18: ಶಿಕ್ಷಣ ಇಲಾಖೆಯು 10ನೆ ತರಗತಿಯ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ವಿಷಯವನ್ನು ಕೈಬಿಟ್ಟಿರುವುದು ಸಮಾಜಕ್ಕೆ ಮಾಡಿರುವ ಅವಮಾನ ಎಂದು ಜೆ.ಆರ್. ಲೋಬೋ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬ್ಯಾಂಕ್‌ಗಳಾದ ಕಾರ್ಪೊರೇಶನ್, ವಿಜಯಾ, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಈಗಾಗಲೇ ಸರಕಾರ ಹೆಸರಿಲ್ಲದಂತೆ ಮಾಡಿದೆ. ಕಳೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಕೈಬಿಟ್ಟು ಅವಮಾನ ಮಾಡಲಾಗಿತ್ತು. ಇದೀಗ ಮತ್ತೆ ಪಠ್ಯದಿಂದ ಕೂಡಾ ಅವರ ಚಿಂತನೆಗಳುಳ್ಳ ವಿಷಯಗಳನ್ನು ಕೈಬಿಟ್ಟಿರುವ ಮಾಹಿತಿ ನಿಜಕ್ಕೂ ಖಂಡನೀಯ. ಸರಕಾರ ಅದನ್ನು ಸೇರ್ಪಡೆಗೊಳಿಸದಿದ್ದರೆ ಕಾಂಗ್ರೆಸ್‌ನಿಂದ ಚಳವಳಿ ಮೂಲಕ ಎಚ್ಚರಿಕೆ ನೀಡಲಾಗುವುದು ಎಂದರು.

ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣಕ್ಕೆ ಒತ್ತು ನೀಡಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ಭೇಟಿ ನೀಡಿ ಬಂದಿಳಿದ ಮಂಗಳೂರು ರೈಲು ನಿಲ್ದಾಣಕ್ಕೆ ಇಡಬೇಕೆಂಬ ಮನವಿಗೆ ಕೇಂದ್ರದಿಂದ ಇನ್ನೂ ಸ್ಪಂದನ ದೊರಕಿಲ್ಲ. ಕೋಟಿ-ಚೆನ್ನಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಬೇಕೆಂಬ ಒತ್ತಾಯಕ್ಕೂ ಮನ್ನಣೆ ದೊರಕಿಲ್ಲ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರ ಕೈಬಿಟ್ಟಾಗ ತೀವ್ರ ವಿರೋಧ, ಪ್ರತಿಭಟನೆ ನಡೆಸಲಾಯಿತು. ಆದರೂ ಅದೇನೋ ಸರಕಾರದ ಕಣ್ತಪ್ಪಿನಿಂದ ಆಗಿರಬಹುದೆಂಬ ಚಿಂತನೆಯೂ ನಮ್ಮಲ್ಲಿ ಬಂದಿತ್ತು. ಆದರೆ ಇದೀಗ ಪಠ್ಯದಿಂದ ಅವರ ವಿಷಯವನ್ನು ಕೈಬಿಡಲಾಗಿದೆ ಎಂಬ ಮಾಹಿತಿಯು ಇದು ಮಾತ್ರವಲ್ಲ, ಅಂದು ಕೂಡಾ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ನಾರಾಯಣಗುರುಗಳು ಸಾಮಾನ್ಯ ವ್ಯಕ್ತಿಯಲ್ಲ. ಅವರೊಬ್ಬ ಜಗತ್ತಿಗೆ ಒಂದೇ ಧರ್ಮ, ಜಾತಿಯೆಂದು ಸಾರಿದ ದಾರ್ಶನಿಕ. ಈ ರೀತಿ ಅವರ ಪಠ್ಯವನ್ನು ಕೈಬಿಡುವ ಮೂಲಕ ಯಾವ ಸಂದೇಶವನ್ನು ನೀಡಲಾಗುತ್ತಿದೆ ಎಂದು ಅವರು ಪ್ರಶಿಸಿದರು.

ಕ್ರಾಂತಿಕಾರಿ ಬಸವಣ್ಣ, ಪೆರಿಯಾರ್ ಅವರ ಹೆಸರನ್ನೂ ಪಠ್ಯದಿಂದ ಕೈಬಿಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಯಾರದ್ದೆಲ್ಲಾ ಹೊಸ ಪಠ್ಯಗಳು ಸೇರಿದೆ ಎಂಬ ಬಗ್ಗೆ ಮಾಹಿತಿ ಹೊಂದಿರುವ ಶಿಕ್ಷಣ ಸಚಿವರಿಗೆ ಕೈಬಿಡಲಾಗಿರುವ ಬಗ್ಗೆ ಮಾಹಿತಿ ಇಲ್ಲದಿರುವುದೇ? ಒಂದು ವೇಳೆ ಕೈಬಿಟ್ಟಿಲ್ಲ ಎಂದಾದರೆ ಸಂತಸದ ವಿಚಾರ. ಯಾವುದೇ ಕಾರಣಕ್ಕೂ ಕೈಬಿಡಬಾರದು. ಹೊಸ ಪಠ್ಯಪುಸ್ತಕಗಳು ಮುದ್ರಣವಾಗಿ ಬರುವಾಗ ಇವರ ವಿಷಯಗಳು ಪಠ್ಯದಲ್ಲಿ ಇರಬೇಕೆಂಬುದು ನಮ್ಮ ಒತ್ತಾಯ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ ಉಮೇಶ್ ದಂಡಕೇರಿ, ಅಬ್ದುಲ್ ಸಲೀಂ, ಸಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಚಂದ್ರಕಲಾ ಜೋಗಿ, ಹೇಮತ್ ಪೂಜಾರಿ, ಸವಾನ್ ಜೆಪ್ಪು, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News