ಕೊಡಗಿನಲ್ಲಿ ಮುಂದುವರಿದ ಮಳೆ: ಸಂಚಾರಕ್ಕೆ ಅಡ್ಡಿ, ವಿದ್ಯುತ್ ವ್ಯತ್ಯಯ

Update: 2022-05-18 11:24 GMT

ಮಡಿಕೇರಿ: ನೈಋತ್ಯ ಮುಂಗಾರಿನ ಪ್ರವೇಶಕ್ಕೂ ಮೊದಲೇ ವಾಯುಭಾರ ಕುಸಿತದಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಜನಜೀವನ ಅಸ್ತವ್ಯಸ್ತವಾಗಿರುವುದಲ್ಲದೆ ಕೃಷಿ ಚಟುವಟಿಕೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ.

ಕಳೆದ ಕೆಲವು ದಿನಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸೂರ್ಯ ದರ್ಶನವೇ ಇಲ್ಲದಂತೆ ಕಾರ್ಮೋಡಗಳು ಕವಿದಿವೆ. ಮಂಗಳವಾರ ರಾತ್ರಿ ಮಡಿಕೇರಿ, ತಲಕಾವೇರಿ ಕ್ಷೇತ್ರ ಭಾಗಮಂಡಲ, ನಾಪೋಕ್ಲು, ಶನಿವಾರಸಂತೆ, ಶಾಂತಳ್ಳಿ ವಿಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಕಿರು ತೊರೆಗಳು ಉಕ್ಕಿ ಹರಿದಿವೆ. ಗ್ರಾಮೀಣ ಭಾಗದ ಸಂಚಾರ ವ್ಯವಸ್ಥೆಗೆ ತೊಡಕುಂಟಾಯಿತು.
ಕಾವೇರಿ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಸರಾಸರಿ 3 ಇಂಚಿನಷ್ಟು ಮಳೆಯಾಗಿದ್ದರೆ, ಮಡಿಕೇರಿ ವ್ಯಾಪ್ತಿಯಲ್ಲಿ 2 ಇಂಚು ಮಳೆ ಸುರಿದಿದೆ. ಇಂದು ಬೆಳಗ್ಗೆ ಕೂಡ ಜಿಲ್ಲೆಯಲ್ಲಿ ಮಳೆಯ ವಾತಾವರಣವಿತ್ತು.

ಚಾಲಕರ ಪರದಾಟ
ಕವಿದ ಮೋಡ, ಸುರಿಯುವ ಮಳೆಯೊಂದಿಗೆ, ರಾತ್ರಿ ಮತ್ತು ಬೆಳಗ್ಗಿನ ಅವಧಿಯಲ್ಲಿ ದಟ್ಟವಾಗಿರುವ ಮಂಜಿನಿಂದ ರಸ್ತೆಗಳು ಸ್ಪಷ್ಟವಾಗಿ ಕಾಣದೆ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. 

ವಿದ್ಯುತ್ ವ್ಯತ್ಯಯ
ನಿರಂತರ ಮಳೆಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮಾರ್ಗದಲ್ಲಿ ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮಡಿಕೇರಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News