ತಾರತಮ್ಯ ಮಾಡದೇ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನುದಾನ ಹಂಚಿಕೆ ಮಾಡಲಾಗುತ್ತಿದೆ: ಸಿಎಂ ಬೊಮ್ಮಾಯಿ

Update: 2022-05-18 18:09 GMT

ಚಿಕ್ಕಮಗಳೂರು, ಮೇ 18: ರಾಜ್ಯ ಸರಕಾರ ಈ ಬಾರಿ ಮಂಡಿಸಿರುವ ಬಜೆಟ್ ಸರ್ವ ಸ್ಪರ್ಶಿ ಸರ್ವ ವ್ಯಾಪ್ತಿ ಬಜೆಟ್ ಆಗಿದ್ದು, ಈ ಬಜೆಟ್‍ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ತಾರತಮ್ಯ ಮಾಡದೇ ಅನುದಾನ ನೀಡಿಲಾಗಿದೆ. ಬಿಪಿಎಲ್ ಪಟ್ಟಿಯ ಕಡುಬಡವರಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿದ್ದು, ಅಭಿವೃದ್ಧಿಯನ್ನು ಜನರ ಬಳಿಗೆ ಕೊಂಡೊಯ್ಯಬೇಕೆಂಬ ನಿಟ್ಟಿನಲ್ಲಿ ರಾಜ್ಯ ಸರಕಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತು ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆ ನಿಸರ್ಗ ಸೌಂದರ್ಯದ ಜಿಲ್ಲೆಯಾಗಿದ್ದು, ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಚಿಕ್ಕಮಗಳೂರು ಜಿಲ್ಲೆಯ ನಿಸರ್ಗಸ ಕಂಪನ್ನು ಹಂಚುವ ಪವರ್‍ಹೌಸ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಸಮಸ್ಯೆಗಳನ್ನು ಸ್ಥಳೀಯ ಜನಪ್ರತಿನಿಧಿಗಳ ತನ್ನ ಗಮನಕ್ಕೆ ತಂದಿದ್ದು, ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಮಂಡಿಸಿರುವ ಬಜೆಟ್‍ನಲ್ಲಿ ಜಿಲ್ಲೆಗೆ ಅನೇಕ ಯೋಜನೆಗಳನ್ನು ನೀಡಲಾಗಿದೆ. ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಬಜೆಟ್‍ನ ಬಹುಪಾಲು ಅನುದಾನ ಚಿಕ್ಕಮಗಳೂರು ಜಿಲ್ಲೆಗ ಹರಿದು ಬಂದಿದೆ ಎಂದರು.

ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲೂಕಿನ ವಿವಿಧ ಕೆರೆಗಳಿಗೆ ಭದ್ರಾ ನದಿ ನೀರು ತುಂಬಿಸುವ ಯೋಜನೆಗೆ 1281 ಕೋ. ರೂ. ಅನುದಾನ ಮಂಜೂರು ಮಾಡಿದ್ದು, ಯೋಜನೆಯ ಮೊದಲ ಹಂತದ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಯೋಜನೆಯ 2 ಮತ್ತು ಮೂರನೇ ಹಂತದ ಕಾಮಗಾರಿಗೆ ಈ ಸಾಲಿನಲ್ಲೇ ಅನುಮೋದನೆ ನಿಡಲಾಗುವುದು. ಈ ಯೋಜನೆಯಿಂದಾಗಿ ಜಿಲ್ಲೆಯ ಬಯಲು ಭಾಗದ ರೈತರ ಕೃಷಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಸಂಚಾರಿ ಆಸ್ಪತ್ರೆ ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಚಿಂತನೆ ನಡೆಸಿದೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದ್ದು, ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯಲ್ಲೂ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದ ಸಿಎಂ ಬೊಮ್ಮಾಯಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಏರ್‍ಸ್ಟ್ರಿಪ್ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ರಾಜ್ಯದ ಹಂಪಿ, ಮಡಿಕೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಲಿಪ್ಯಾಡ್ ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗುತ್ತಿದ್ದು, ಚಾಮರಾಜನಗರ, ನಂದಿ ಬೆಟ್ಟ, ಅಂಜನಾದ್ರಿ ಬೆಟ್ಟ ಹಾಗೂ ಮುಳ್ಳಯ್ಯನಗಿರಿ, ಬಾಬಾಬುಡನ್‍ಗಿರಿ ಗಿರಿಶ್ರೇಣಿಗಳಲ್ಲಿ ರೋಪ್‍ವೇ ಯೋಜನೆ ಜಾರಿಗೆ ಕ್ರಮವಹಿಸಲಾಗಿದೆ. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಲಿಪ್ಯಾಡ್ ಹಾಗೂ ರೋಪ್‍ವೇ ಯೋಜನೆಗೆ ಈ ಸಾಲಿನಲ್ಲೇ ಮಂಜೂರಾತಿ ಸಿಗಲಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಜೆಟ್ ಮಂಡನೆಯಾಗಿ 3 ತಿಂಗಳೊಳಗೆ ಶೇ.90ರಷ್ಟು ಯೋಜನೆಗಳನ್ನು ಜಾರಿ ಮಾಡಿದ ಏಕೈಕ ಸರಕಾರ ಬೊಮ್ಮಾಯಿ ಸರಕಾರವಾಗಿದೆ. ಹಿಂದುಳಿದ ವರ್ಗಗಳಿಗೆ 50 ಕನಕದಾಸ ವಸತಿ ನಿಲಯಗಳು ಹಾಗೂ ಪರಿಶಿಷ್ಟರ ಶಿಕ್ಷಣಕ್ಕಾಗಿ 100 ಅಂಬೇಡ್ಕರ್ ವಸತಿ ನಿಲಯಗಳನ್ನು ಸಿಎಂ ಬೊಮ್ಮಾಯಿ ಅವರು ಮಂಜೂರು ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 100 ಕೋ.ರೂ. ವೆಚ್ಚದ ಕಾಮಗಾರಿಗಳಿಗೆ ಸರಕಾರ ಮಂಜೂರಾತಿ ನೀಡಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ 384 ಕೋ. ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದ್ದು, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 1281 ಕೋ. ರೂ. ಮಂಜೂರಾತಿ ನೀಡಿರುವ ಸಿಎಂ ಬೊಮ್ಮಾಯಿ ಬಯಲು ಭಾಗದ ಪ್ರತೀ ಮನೆಮನೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗೆ 1100 ಕೋ. ರೂ. ಯೋಜನೆಗೂ ಮಂಜೂರಾತಿ ನೀಡುವ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿದ್ದಾರೆ. ಜಿಲ್ಲೆಯಲ್ಲಿ 650 ಕೋ. ರೂ. ವೆಚ್ಚದಲ್ಲಿ ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರತ್ಯೇಕ ಹಾಲು ಒಕ್ಕೂಟ ಮಂಜೂರಾತಿಗೂ ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕ ಕುಮಾರಸ್ವಾಮಿ, ತರೀಕೆರೆ ಶಾಸಕ ಸುರೇಶ್, ಕಡೂರು ಶಾಸಕ ಬೆಳ್ಳಿಪ್ರಕಾಶ್, ಶೃಂಗೇರಿ ಶಾಸಕ ರಾಜೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ವಿಪ ಸದಸ್ಯ ಪ್ರಾಣೇಶ್, ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಡಿಸಿ ರಮೇಶ್, ಎಸ್ಪಿ ಅಕ್ಷಯ್, ಜಿಪಂ ಸಿಇಒ ಜಿ.ಪ್ರಭು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾನಿಧಿ ಯೋಜನೆ ಜಾರಿ ಮೂಲಕ ರೈತರ ಮಕ್ಕಳ ಶಿಕ್ಷಣಕ್ಕೆ ಸರಕಾರ ಒತ್ತು ನೀಡಿದೆ. ರೈತರ ಮಕ್ಕಳು ರೈತರಾಗಿಯೇ ಇರಬಾರದು, ಶಿಕ್ಷಣದ ಮೂಲಕ ಅವರೂ ಉನ್ನತ ಸ್ಥಾನಕ್ಕೇರಬೇಕೆಂಬ ಚಿಂತನೆಯಿಂದ ಸರಕಾರ ಈ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳಿಗೆ 8ನೇ ತರಗತಿಯಿಂದ ಸ್ಕಾಲರ್‍ಶಿಪ್ ನೀಡಲಾಗುತ್ತಿದೆ. ರೈತರ ಮಕ್ಕಳ ಶೈಕ್ಷಣಿಕ ಏಳಿಗೆಗೆ ಇಂತಹ ಯೋಜನೆಯನ್ನು ಜಾರಿ ಮಾಡಿದ ಏಕೈಕ ರಾಜ್ಯ ಕರ್ನಾಟಕ ಆಗಿದೆ. ಬಡವರ ತಲಾದಾಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿನೂತನ ಯೋಜನೆ ಜಾರಿಗೆ ಚಿಂತನೆ ನಡೆಸಿದೆ. ಈ ಯೋಜನೆ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುವುದು. ಪರಿಶಿಷ್ಟರ ಕಲ್ಯಾಣ ಸೇರಿದಂತೆ ಶಿಕ್ಷಣ, ಆರೋಗ್ಯಕ್ಕೆ ಸರಕಾರ ಒತ್ತು ನೀಡುತ್ತಿದ್ದು, ಅನೇಕ ಜನಪರ ಯೋಜನೆಗಳನ್ನು ರಾಜ್ಯ ಸರಕಾರ ಜಾರಿ ಮಾಡಿದೆ.
- ಬಸವರಾಜ ಬೊಮ್ಮಾಯಿ, ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News