ವಿಜಯಪುರ: ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿರುವ ದಲಿತ ಮಹಿಳೆಯ ಪುತ್ರ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಟಾಪರ್‌

Update: 2022-05-19 19:01 GMT
ವಿದ್ಯಾರ್ಥಿ ಅಮಿತ್ ಮಾದರ್

ವಿಜಯಪುರ: ಕರ್ನಾಟಕದ ವಿಜಯಪುರ ಜಿಲ್ಲೆಯ ಜುಮನಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದಲಿತ ವಿದ್ಯಾರ್ಥಿ ಅಮಿತ್ ಮಾದರ್ 2022 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯದ 145 ಮಂದಿ ಟಾಪರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. 

ಚಿಕ್ಕ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಅಮಿತ್ ಮಾದಾರ್ ರನ್ನು ಅವರ ತಾಯಿಯೇ ಬೆಳೆಸುತ್ತಿದ್ದಾರೆ.  ಕೃಷಿ ಭೂಮಿಗಳಲ್ಲಿ ಕೂಲಿ ಮಾಡಿ ತನ್ನ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಮಾಡಲು ಅವರು ಶ್ರಮಿಸುತ್ತಿದ್ದಾರೆ.

ಅಮಿತ್‌ಗೆ ಈ ಫಲಿತಾಂಶ ಸಂತಸ ತಂದಿದೆಯಾದರೂ ಇದು ಅನಿರೀಕ್ಷಿತವೇನಲ್ಲ ಎಂದು ಅವರು Thehindu.com ಜೊತೆ ಹೇಳಿಕೊಂಡಿದ್ದಾರೆ. “ನಾನು 8ನೇ ತರಗತಿಯಲ್ಲಿದ್ದಾಗಲೇ ಎಸೆಸೆಲ್ಸಿಯಲ್ಲಿ 625 ಅಂಕಗಳನ್ನು ಗಳಿಸಬೇಕೆಂದು ನಿರ್ಧರಿಸಿದ್ದೆ. ಅದರಂತೆ ಅಧ್ಯಯನ ಮಾಡಿ ಇದನ್ನು ಸಾಧಿಸಿದ್ದೇನೆ. ಇದು ನಮ್ಮೆಲ್ಲರಿಗೂ ಮರೆಯಲಾಗದ ದಿನ. ನನ್ನಿಂದಾಗಿ ಇಡೀ ಗ್ರಾಮವೇ ಖುಷಿಯಾಗಿದೆ. ಎಲ್ಲಾ ಗ್ರಾಮಸ್ಥರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ" ಎಂದು ಅವರು ಹೇಳಿದ್ದಾರೆ.

ಅಮಿತ್ ಕುಟುಂಬವು ಒಂದು ತುಂಡು ಕೃಷಿ ಭೂಮಿಯನ್ನು ಹೊಂದಿದ್ದರೂ, ಅದನ್ನು ನಿರ್ವಹಿಸಲು ಕುಟುಂಬದಲ್ಲಿ ಯಾರೂ ಇಲ್ಲದ ಕಾರಣ ಅದನ್ನು ಅಮಿತ್ ಅವರ ಚಿಕ್ಕಪ್ಪನಿಗೆ ಗುತ್ತಿಗೆಗೆ ನೀಡಲಾಯಿತು. ಮೂವರು ಒಡಹುಟ್ಟಿದವರಲ್ಲಿ ಅಮಿತ್ ಕಿರಿಯವರು. ಅವರ ಸಹೋದರಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು, ಹಿರಿಯ ಸಹೋದರ ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. 

“ಅಮಿತ್ ಪುಸ್ತಕದ ಹುಳು. ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿ ಉತ್ತಮ ಉದ್ಯೋಗ ಪಡೆದು ಕುಟುಂಬವನ್ನು ಬಡತನದಿಂದ ಹೊರತರಬೇಕೆಂದು ಆತ ನಿರಂತರವಾಗಿ ಪರಿಶ್ರಮ ಹಾಕುತ್ತಾನೆ. ಯಾವಾಗಲೂ ಓದಿನಲ್ಲೇ ತಲ್ಲೀನನಾಗುತ್ತಿದ್ದ ಆತ, ತನ್ನ  ಎಲ್ಲಾ ಬಾಲ್ಯದ ಇತರ ಸಂತೋಷಗಳನ್ನು ತ್ಯಾಗ ಮಾಡಿದ್ದಾನೆ. ಅಧ್ಯಯನದಲ್ಲಿ ತುಂಬಾ ನಿರತನಾಗುತ್ತಿದ್ದ ಆತ ಕೆಲವೊಮ್ಮೆ ತಿನ್ನುವುದನ್ನು ಮರೆತುಬಿಡುತ್ತಾನೆ, ” ಎಂದು ಅಮಿತ್‌ ಸಹೋದರಿ ಅಭಿಲಾಶಾ ಮಾದರ್ ದಿ ಹಿಂದೂಗೆ ತಿಳಿಸಿದ್ದಾರೆ.

COVID-19 ಲಾಕ್‌ಡೌನ್‌ಗಳ ಸಮಯದಲ್ಲಿ ಜುಮನಾಲ್‌ನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಆನ್‌ಲೈನ್ ತರಗತಿಗಳನ್ನು ಆರಂಭಿಸಿದಾಗ, ತರಗತಿಗೆ ಹಾಜರಾಗಲು ಅಮಿತ್ ಬಳಿ ಸ್ಮಾರ್ಟ್‌ಫೋನ್ ಇರಲಿಲ್ಲ. ತರಗತಿಗಳಿಗೆ ಹಾಜರಾಗುವ ಸಲುವಾಗಿ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ಫೋನ್‌ಗಳನ್ನು ಎರವಲು ಪಡೆದು ತರಗತಿಗೆ ಹಾಜರಾಗುತ್ತಿದ್ದ ಎಂದು Thehindu ವರದಿ ಮಾಡಿದೆ.

“ನಾನು ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ಓದುತ್ತಿದ್ದೆ. ನನ್ನ ಮನಸ್ಸು ಚಂಚಲವಾಗಲು ಬಿಡಲಿಲ್ಲ. ನನ್ನ ಗುರಿಯು 100% ಅಂಕವಾಗಿತ್ತು ಮತ್ತು ನಾನು ಅದನ್ನು ಸಾಧಿಸಿದ್ದೇನೆ ಎಂದು ನನಗೆ ಸಂತೋಷವಾಗಿದೆ. ನನ್ನ ಶಿಕ್ಷಕರು ಪರೀಕ್ಷೆಗೆ ತಯಾರಾಗಲು ನನಗೆ ಸಹಾಯ ಮಾಡಿದರು, ”ಎಂದು ಅಮಿತ್ ಹೇಳಿದ್ದಾರೆ. 

ನಾನು ಐಎಎಸ್ ಅಧಿಕಾರಿಯಾಗಬೇಕು ಎಂದು ನನ್ನ ಶಿಕ್ಷಕರು ಹೇಳುತ್ತಲೇ ಇರುತ್ತಾರೆ. ನಾನು ಅದನ್ನು ಮಾಡಲು ಪ್ರಯತ್ನಿಸುತ್ತೇನೆ. ನಾನು ಸರ್ಕಾರಿ ಶಾಲೆಯಲ್ಲಿದ್ದೇನೆ ಎಂಬುದು ನನ್ನ ಮನಸ್ಸಿಗೆ ಬಂದಿರಲಿಲ್ಲ. ಬಡವರು ಮಾತ್ರ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಕೆಲವರು ಭಾವಿಸುತ್ತಾರೆ. ಸರಕಾರಿ ಶಾಲೆಗಳಲ್ಲಿ ಬೋಧನೆಯ ಗುಣಮಟ್ಟ ಕಡಿಮೆಯಾಗಿದೆ ಎಂದು ಕೆಲವರು ಆರೋಪಿಸುತ್ತಾರೆ. ಎರಡೂ ನಂಬಿಕೆಗಳು ಆಧಾರರಹಿತವಾಗಿವೆ,” ಎಂದು ಅಮಿತ್‌ ಹೇಳಿದ್ದಾರೆ.

‘ಜುಮನಾಳ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ನುರಿತ ಶಿಕ್ಷಕರು ಹಾಗೂ ಕಂಪ್ಯೂಟರ್‌ ವಿಭಾಗ, ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಇತರೆ ಮೂಲಸೌಕರ್ಯಗಳು ಸುಸಜ್ಜಿತವಾಗಿವೆ. ಶಾಲೆಯ ಶಿಕ್ಷಕರು ಎಷ್ಟು ಪರಿಣತರಾಗಿದ್ದಾರೆಂದರೆ, ಅವರ ಶಿಕ್ಷಕರಿಗೆ ತರಬೇತಿ ಪಡೆಯಲು ಕರ್ನಾಟಕದಾದ್ಯಂತ ಇತರ ಶಾಲೆಗಳು ಸಂಪನ್ಮೂಲ ವ್ಯಕ್ತಿಗಳಾಗಿ ಅವರನ್ನು ಆಗಾಗ್ಗೆ ಆಹ್ವಾನಿಸುತ್ತಿದ್ದರು. ವಿಜಯಪುರದಲ್ಲಿ ಉನ್ನತ ಖಾಸಗಿ ಪ್ರೌಢಶಾಲೆಗಳಿವೆ. ಆದರೆ, ವಿದ್ಯಾರ್ಥಿಗಳು ಮತ್ತು ಪೋಷಕರು ಅವರಿಗಿಂತ ಈ ಸರ್ಕಾರಿ ಪ್ರೌಢಶಾಲೆಗೆ ಆದ್ಯತೆ ನೀಡುತ್ತಾರೆ.” ಎಂದು ಅಮಿತ್‌ಗೆ ಒಂದೆರಡು ವರ್ಷ ಪಾಠ ಮಾಡಿದ್ದ ನಿವೃತ್ತ ಮುಖ್ಯೋಪಾಧ್ಯಾಯ ರುದ್ರಗೌಡರ್‌ ಹೇಳಿದ್ದಾರೆ. 

ಅಮಿತ್ ಹೊರತುಪಡಿಸಿ ಶಾಲೆಯ ಒಟ್ಟು  59 ಎಸೆಸೆಲ್ಸಿ ವಿದ್ಯಾರ್ಥಿಗಳ ಪೈಕಿ ಸುಮಾರು 35 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News