ಹೈಕೋರ್ಟ್ ಆವರಣದಲ್ಲಿ ನಮಾಝ್: ವಿಡಿಯೋ ಚಿತ್ರೀಕರಿಸಿದ 'ಸಂವಾದ' ವಿರುದ್ಧ ಎಫ್‍ಐಆರ್

Update: 2022-05-20 07:12 GMT

ಬೆಂಗಳೂರು, ಮೇ 19: ಹೈಕೋರ್ಟ್‍ನ ಕಚೇರಿ ಕೊಠಡಿಯೊಳಗೆ ಇಬ್ಬರು ಮಹಿಳೆಯರು ನಮಾಝ್ ಮಾಡುತ್ತಿರುವ ದೃಶ್ಯಾವಳಿಯನ್ನು ನ್ಯಾಯಾಲಯದ ಆವರಣದಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡಿದ 'ಸಂವಾದ' ಯೂಟ್ಯೂಬ್ ಚಾನಲ್ ಹಾಗೂ ಫೇಸ್ ಬುಕ್ ಪೇಜ್ ವಿರುದ್ಧ ಹೈಕೋರ್ಟ್‍ನ ಉಸ್ತುವಾರಿ ರಿಜಿಸ್ಟ್ರಾರ್ (ಆಡಳಿತ) ದೂರು ದಾಖಲಿಸಿದ್ದಾರೆ.

ಉಸ್ತುವಾರಿ ರಿಜಿಸ್ಟ್ರಾರ್ (ಆಡಳಿತ) ಎನ್.ಜಿ.ದಿನೇಶ್ ನೀಡಿರುವ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಆ ಸಂಸ್ಥೆ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ) ಮತ್ತು 505(2) (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆಗಳು) ಅಡಿ ಪ್ರಕರಣ ದಾಖಲಿಸಲಾಗಿದೆ.

ಎಫ್‍ಐಆರ್ ನಲ್ಲಿ ಏನಿದೆ: 'ಕರ್ನಾಟಕ ಹೈಕೋರ್ಟ್‍ನಲ್ಲಿ ನಮಾಜ್’ ಹೆಸರಿನಲ್ಲಿ ಫೇಸ್‍ಬುಕ್ ಮತ್ತು ಯೂಟ್ಯೂಬ್ ಚಾನೆಲ್‍ನಲ್ಲಿ 1.48 ನಿಮಿಷಗಳ ದೃಶ್ಯವನ್ನು ಮೇ 14 ರಂದು ಅಪ್‍ಲೋಡ್ ಮಾಡಲಾಗಿದೆ. ಅನುಮತಿ ಇಲ್ಲದೇ ಹೈಕೋರ್ಟ್ ಆವರಣದೊಳಗೆ ಪ್ರವೇಶಿಸುವುದು ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗಿದ್ದೂ, ಹೈಕೋರ್ಟ್ ಒಳಗೆ ಬಂದು ನಿಯಮ ಉಲ್ಲಂಘಿಸಿ ಚಿತ್ರೀಕರಿಸಲಾಗಿದೆ.

ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ವಿಡಿಯೊ ತುಣುಕು ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತದೆ. ಹೀಗಾಗಿ, ವಿಡಿಯೋ ಚಿತ್ರೀಕರಿಸಿ ಅಪ್‍ಲೋಡ್ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರುತ್ತೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಮೇರೆಗೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News