10 ಗಿಗಾ ವ್ಯಾಟ್ ಹಸಿರು ಇಂಧನ ಉತ್ಪಾದನೆ: ಸಚಿವ ಸುನೀಲ್ ಕುಮಾರ್

Update: 2022-05-19 17:26 GMT

ಬೆಂಗಳೂರು, ಮೇ 19: ರಾಜ್ಯ ಸರಕಾರ ಮುಂದಿನ ಐದು ವರ್ಷದ ಅವಧಿಯಲ್ಲಿ ಹತ್ತು ಗಿಗಾ ವ್ಯಾಟ್ ಹಸಿರು ಇಂಧನ ಉತ್ಪಾದನೆಯ ಗುರಿ ಹಾಕಿಕೊಂಡಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಗುರುವಾರ ನಗರದ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಹೈಬ್ರಿಡ್ ವಿದ್ಯುತ್ ಪಾರ್ಕ್ ನಿರ್ಮಾಣ ನಮ್ಮ ಆದ್ಯತೆಯಾಗಿದೆ. ಗ್ರೀನ್ ಎನರ್ಜಿ ಕ್ಷೇತ್ರವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಮುಂದಿನ ಐದು ವರ್ಷದಲ್ಲಿ ಹತ್ತು ಗಿಗಾ ವ್ಯಾಟ್ ಉತ್ಪಾದನೆ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಈ ಗುರಿ ಸಾಧನೆಯ ಭಾಗವಾಗಿ ಹತ್ತು ಸಾವಿರ ಮೆಗಾ ವ್ಯಾಟ್ ಸಾಮಥ್ರ್ಯದ ಹೈಬ್ರಿಡ್ ಪಾರ್ಕ್ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಯ ಜತೆಗೆ ಸ್ಟೋರೇಜ್ ಸೌಲಭ್ಯವನ್ನೂ ಈ ಪಾರ್ಕ್ ಹೊಂದಿರುತ್ತದೆ. ಪಾವಗಡ ಸೋಲಾರ್ ಪಾರ್ಕ್ ನಲ್ಲಿ ಸದ್ಯಕ್ಕೆ ಪ್ರಾಯೋಗಿಕವಾಗಿ ಈಗ 50 ಮೆಗಾ ವ್ಯಾಟ್ ಸ್ಟೋರೇಜ್ ಕೇಂದ್ರ ಪ್ರಾರಂಭಿಸುತ್ತೇವೆ ಎಂದರು.

ರಾಜ್ಯದಲ್ಲಿ ಕಲ್ಲಿದ್ದಲು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇದೆ. ಮಾರ್ಚ್ ತಿಂಗಳಲ್ಲಿ ಅತೀ ಹೆಚ್ಚು 14,800 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಬಂದಿತ್ತು. ಅದನ್ನು ಸಮಸ್ಯೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಆರು ವರ್ಷದ ಬಳಿಕ ಎಲ್ಲಾ ಥರ್ಮಲ್ ಯುನಿಟ್‍ಗಳು ಕೆಲಸ ಮಾಡಿವೆ. ಕಲ್ಲಿದ್ದಲಿನ ಸಮಸ್ಯೆ ಆಗದಂತೆ ಕೇಂದ್ರ ಸರಕಾರದ ಜೊತೆ ಸಂಪರ್ಕ ಇಟ್ಟುಕೊಂಡಿದ್ದೇವೆ. ಮಳೆಯಾಗಿರುವ ಕಾರಣ ಐಪಿ ಸೆಟ್‍ಗಳ ಒತ್ತಡ ಕಡಿಮೆಯಾಗಿದೆ ಎಂದರು.

ಅದೇ ರೀತಿ, ಟ್ರಾನ್ಸ್‍ಫಾರ್ಮರ್ ನಿರ್ವಹಣಾ ಅಭಿಯಾನದಲ್ಲಿ ಈವರೆಗೆ 1,80,000 ಟ್ರಾನ್ಸ್‍ಫಾರ್ಮರ್‍ಗಳನ್ನು ನಿರ್ವಹಣೆ ಮಾಡಲಾಗಿದೆ. ಅಭಿಯಾನ ನಾಳೆ ಮುಕ್ತಾಯಗೊಳ್ಳುತ್ತದೆಯಾದರೂ ನಿರ್ವಹಣೆ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News