ರಾಜ್ಯದಲ್ಲಿ ಮಳೆ ಅನಾಹುತಗಳಿಗೆ 9 ಬಲಿ; ಎನ್‍ಡಿಆ‌ರ್‌ಎಫ್ ನಿಯೋಜನೆ: ಕಂದಾಯ ಸಚಿವ ಆರ್.ಅಶೋಕ್

Update: 2022-05-20 02:23 GMT

ಬೆಂಗಳೂರು: ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಒಟ್ಟು ಒಂಬತ್ತು ಮಂದಿ ಜೀವ ಕಳೆದು ಕೊಂಡಿದ್ದಾರೆ. ಮತ್ತಷ್ಟು ಮಳೆ ನಿರೀಕ್ಷೆಯಲ್ಲಿ ಅಗತ್ಯ ಪೂರ್ವಸಿದ್ಧತೆಗಳಿಗಾಗಿ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್‍ಡಿಆರ್‌ಎಫ್)ಯ ನಾಲ್ಕು ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಜತೆ ಪರಿಸ್ಥಿತಿ ಅವಲೋಕನಾ ಸಭೆ ನಡೆಸಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಶಿವಮೊಗ್ಗ, ದಾವಣಗೆರೆ, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ವಿವರಿಸಿದರು.

ಇದುವರೆಗೆ 204 ಹೆಕ್ಟೇರ್ ಕೃಷಿ ಹಾಗೂ 431 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. 23 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಹೇಳಿದರು. ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಎನ್‍ಡಿಆರ್‌ಎಫ್ ನಿಯೋಜಿಸಲಾಗಿದೆ. ರಾಜ್ಯ ವಿಪತ್ತು ಸ್ಪಂದನೆ ಪಡೆ ಕೂಡಾ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದೆ ಎಂದರು.

ಪ್ರವಾಹ ಅಥವಾ ಭೂಕುಸಿದಂಥ ಸಂದರ್ಭದಲ್ಲಿ ತುರ್ತು ಸ್ಪಂದನೆಯಾಗಿ ಪ್ರತಿ ಜಿಲ್ಲೆಗಳಲ್ಲಿ ವಾಹನವನ್ನು ಮೀಸಲಿಡಲಾಗಿದೆ. ಮನೆ ಹಾಗೂ ಜಾನುವಾರುಗಳಿಗೆ ಹಾನಿಯಾದಲ್ಲಿ 48 ಗಂಟೆಗಳ ಒಳಗಾಗಿ ಪರಿಹಾರ ನೀಡಲಾಗುತ್ತದೆ ಎಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News