ಹೈದರಾಬಾದ್‌ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ʼನಕಲಿʼ ಎಂದ ಸುಪ್ರೀಂಕೋರ್ಟ್‌ ಸಮಿತಿ: ಪೊಲೀಸರ ವಿಚಾರಣೆಗೆ ಸೂಚನೆ

Update: 2022-05-20 09:53 GMT

ಬೆಂಗಳೂರು: ಹೈದರಾಬಾದ್‌ನಲ್ಲಿ 2019 ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳ ಪೊಲೀಸ್ ಎನ್‌ಕೌಂಟರ್ ʼನಕಲಿʼ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ಶುಕ್ರವಾರ ಹೇಳಿದೆ ಎಂದು hindustantimes ವರದಿ ಮಾಡಿದೆ.

ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ನಾಲ್ವರು ಅತ್ಯಾಚಾರ ಮತ್ತು ಕೊಲೆ ಆರೋಪಿಗಳಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ಸಮಿತಿ ಹೇಳಿದೆ. ಸಮಿತಿಯು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ತನ್ನ ವರದಿಯಲ್ಲಿ ಆರೋಪಿ ಪೊಲೀಸರನ್ನು ಕೊಲೆ ಆರೋಪದ ಮೇಲೆ ವಿಚಾರಣೆಗೆ ಶಿಫಾರಸು ಮಾಡಿದೆ.

2019 ರ ನವೆಂಬರ್‌ನಲ್ಲಿ ಹೈದರಾಬಾದ್ ಬಳಿಯ ಶಂಶಾಬಾದ್‌ನಲ್ಲಿ 26 ವರ್ಷದ ಪಶುವೈದ್ಯೆಯೋರ್ವರನ್ನು ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದ್ದು, ಇದು ಭಾರೀ ರಾಷ್ಟ್ರೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ಪೊಲೀಸ್ ಕಸ್ಟಡಿಯಲ್ಲಿ ನಾಲ್ವರು ಆರೋಪಿಗಳ ಹತ್ಯೆ ನಡೆಸಿದ್ದನ್ನು 'ದಿಶಾ ಎನ್‌ಕೌಂಟರ್' ಎಂದು ಉಲ್ಲೇಖಿಸಲಾಗಿದೆ. ಆಕೆಯ ಗುರುತನ್ನು ರಕ್ಷಿಸಲು ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಗೆ ಪೊಲೀಸರು ದಿಶಾ ಎಂಬ ಹೆಸರನ್ನು ಇಟ್ಟಿದ್ದಾರೆ. ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಪಶುವೈದ್ಯಕೀಯ ಸಹಾಯಕ ಶಸ್ತ್ರಚಿಕಿತ್ಸಕರಾಗಿದ್ದರು.

ನಾಲ್ವರು ಪುರುಷರು ಯುವತಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ನಂತರ ಆಕೆಯ ದೇಹವನ್ನು ಟ್ರಕ್‌ಗೆ ತುಂಬಿಸಿ ಸೇತುವೆಯ ಕೆಳಗೆ ಸುಟ್ಟು ಹಾಕಿದ್ದರು. ಈ ಘಟನೆಯು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ತೆಲಂಗಾಣ ಪೊಲೀಸರು ತ್ವರಿತ ನ್ಯಾಯಾಲಯದ ವಿಚಾರಣೆಯ ಆಧಾರದ ಮೇಲೆ ವಿಳಂಬವಿಲ್ಲದೆ ಶಿಕ್ಷೆ ನೀಡುವ ಒತ್ತಡಕ್ಕೆ ಒಳಗಾದರು ಎಂದು ವರದಿ ತಿಳಿಸಿದೆ.

ಎಲ್ಲಾ ಆರೋಪಿಗಳನ್ನು 2019 ರ ಡಿಸೆಂಬರ್ 6 ರಂದು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಕೆಳಗೆ ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲಾಯಿತು. ಪೊಲೀಸರ ಪ್ರಕಾರ, ಆರೋಪಿಗಳು ಬಂದೂಕುಗಳನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದರು. 'ದಿಶಾ ಎನ್‌ಕೌಂಟರ್' ಅನ್ನು ನ್ಯಾಯಬಾಹಿರ ಮರಣದಂಡನೆಯ ನಿದರ್ಶನವೆಂದು ಅನೇಕರು ವಿಮರ್ಶಿಸಿದರೂ, ದೇಶಾದ್ಯಂತ ಸಾವಿರಾರು ಜನರು ಆರೋಪಿಗಳ ಸಾವಿನ ರೂಪದಲ್ಲಿ 'ತ್ವರಿತ ನ್ಯಾಯ'ವನ್ನು ಸಂಭ್ರಮಿಸಿದರು.

ಸೈಬರಾಬಾದ್ ಪೊಲೀಸರಿಂದ ಆರೋಪಿಗಳ ಕಾನೂನುಬಾಹಿರ ಹತ್ಯೆಗಳ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗವನ್ನು ರಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News