"ವೈದ್ಯರು ನನ್ನ ಮಗಳನ್ನು ಹಣಕ್ಕಾಗಿ ಬ್ರೈನ್‌ವಾಶ್‌ ಮಾಡಿದ್ದರು": ಸರ್ಜರಿ ವೇಳೆ ಮತೃಪಟ್ಟ ನಟಿ ಚೇತನಾ ತಂದೆ ಆರೋಪ

Update: 2022-05-20 14:09 GMT
Photo: YouTube/PublicTV

ಬೆಂಗಳೂರು: ದೇಹದಲ್ಲಿನ ಕೊಬ್ಬನ್ನು ತೆಗೆಯುವ ಶಸ್ತ್ರಚಿಕಿತ್ಸೆಯ ನಂತರ ಯುವನಟಿ ಚೇತನಾ ರಾಜ್ ಮೃತಪಟ್ಟ ಕೆಲವು ದಿನಗಳ ನಂತರ, ಆಕೆಯ ತಂದೆ ವರದರಾಜು ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯನ ವಿರುದ್ಧ ಆರೋಪಿಸಿದ್ದಾರೆ. "ಈ ಸರ್ಜರಿಗೆ ಒಳಗಾಗುವಂತೆ ಆಕೆಯನ್ನು ಬ್ರೈನ್‌ ವಾಶ್‌ (ಮರುಳುಗೊಳಿಸು) ಮಾಡಲಾಗಿತ್ತು" ಎಂದು ಅವರು ಹೇಳಿದ್ದಾಗಿ Indiatoday.in ವರದಿ ಮಾಡಿದೆ.

21 ವರ್ಷದ ಕನ್ನಡ ನಟಿ ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ದೇಹದಿಂದ ಕೊಬ್ಬು ತೆಗೆಯುವ ಪ್ರಕ್ರಿಯೆಯ ನಂತರ ಆಕೆಯ ಶ್ವಾಸಕೋಶವು ನೀರಿನಿಂದ ತುಂಬಿದ ಕಾರಣ ಆಕೆಗೆ ಹೃದಯಸ್ಥಂಭನವಾಗಿತ್ತು.

ಇದು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಎಂದು ಉಪ ಪೊಲೀಸ್ ಆಯುಕ್ತ ವಿನಾಯಕ ಪಾಟೀಲ್ ಹೇಳಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸುವಂತೆ ನಟಿಯ ಕುಟುಂಬವೂ ಒತ್ತಾಯಿಸಿದೆ.

ವರದರಾಜು ಅವರ ದೂರಿನ ಆಧಾರದ ಮೇಲೆ ಕರ್ನಾಟಕ ಪೊಲೀಸರು ಡಾ. ಶೆಟ್ಟಿ ಅವರ ಸೌಂದರ್ಯವರ್ಧಕ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. "ವೈದ್ಯರು ಕೇವಲ ಹಣಕ್ಕಾಗಿ ಅವಳನ್ನು ಬ್ರೈನ್ ವಾಶ್ ಮಾಡಿದರು. ಇದು ಕೊಲೆಗೆ ಸಮಾನವಾಗಿದೆ ಮತ್ತು ಅಂತಹ ದುರಂತ ಮತ್ತೆ ಯಾರಿಗೂ ಸಂಭವಿಸಬಾರದು." ಎಂದು ವರದರಾಜು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಗೂ ಮುನ್ನ ಚೇತನಾ ತನ್ನ ಪೋಷಕರಿಗೆ ತಿಳಿಸಿರಲಿಲ್ಲ. ಅವಳ ಸ್ನೇಹಿತರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದರು ಎಂದೂ ಅವರು ಹೇಳಿದ್ದಾರೆ.

"ಆಕೆಗೆ ಕೆಲವು ಉಸಿರಾಟದ ತೊಂದರೆಗಳು ಬಂದ ನಂತರ, ಅವರು [ಅವಳ ಸ್ನೇಹಿತರು] ಅವಳನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವಳನ್ನು ಬದುಕಿಸುವ ಪ್ರಯತ್ನಗಳು ವಿಫಲವಾಯಿತು" ಎಂದು ತಂದೆ ಹೇಳಿದರು. “ಅವರು 1 ರಿಂದ 1.5 ಲಕ್ಷ ರೂಪಾಯಿ ತೆಗೆದುಕೊಂಡರು. ನಾವು ನಮ್ಮ ಹಣ ಮತ್ತು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ. ನಾವು ಅವಳ ಮೇಲೆ ಅವಲಂಬಿತರಾಗಿದ್ದೆವು. ನಮ್ಮಂತೆ ಇನ್ನೂ ಎಷ್ಟು ಜನರು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ" ಎಂದು ಭಾವುಕರಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News