ಮುಂದಿನ ವಾರದಿಂದ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ, ಜೂನ್‍ನಲ್ಲಿ ಫಲಿತಾಂಶ: ಸಚಿವ ಬಿ.ಸಿ. ನಾಗೇಶ್

Update: 2022-05-20 14:17 GMT

ಬೆಂಗಳೂರು, ಮೇ 20: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸುಸೂತ್ರವಾಗಿ ಮುಗಿದಿದ್ದು, ಮುಂದಿನ ವಾರದಿಂದ ಮೌಲ್ಯಮಾಪನ ಆರಂಭವಾಗುತ್ತದೆ. ಜೂನ್ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟ್ವೀಟ್ ಮಾಡಿದ್ದಾರೆ. 

ಸಮವಸ್ತ್ರ ವಿವಾದದ ನಡುವೆಯು ದ್ವಿತೀಯ ಪಿಯುಸಿ ಪರೀಕ್ಷೆಯು ಮುಗಿದಿದ್ದು, ಪರೀಕ್ಷೆಗೆ 6,84,255 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಒಟ್ಟು 1019 ಪರೀಕ್ಷಾ ಕೇಂದ್ರಗಳಲ್ಲಿ 6,00,519 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆದಿದ್ದು, 61,808 ಪುನರಾವರ್ತಿತ ಹಾಗೂ 21,928 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಒಟ್ಟು ವಿದ್ಯಾರ್ಥಿಗಳ ಪೈಕಿ 2,28,167 ಕಲಾ ವಿಭಾಗದಲ್ಲಿ, 2,45,519 ವಾಣಿಜ್ಯ ವಿಭಾಗದಲ್ಲಿ ಹಾಗೂ 2,10,569 ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದಾರೆ. ಹಾಗೆಯೇ 3,46,936 ಬಾಲಕರು, 3,47,319 ಬಾಲಕಿಯರು ಈ ವರ್ಷ ಪರೀಕ್ಷೆಯನ್ನು ಬರೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News