ಪರಿಶಿಷ್ಟ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹ: ವಾಲ್ಮೀಕಿ ಶ್ರೀಗಳ ಧರಣಿ ಬೆಂಬಲಿಸಿ ರಾಜ್ಯಾದ್ಯಂತ ಹೋರಾಟ

Update: 2022-05-20 14:41 GMT
photo- (ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭನಟನೆ)

ಬೆಂಗಳೂರು, ಮೇ 20: ‘ಪರಿಶಿಷ್ಟ ಜಾತಿ ಮತ್ತು ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಶೇ.24.1ರಷ್ಟು ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಎಸ್ಸಿ-ಎಸ್ಟಿ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮಿ ಕೈಗೊಂಡಿರುವ ಧರಣಿ ಸತ್ರಾಗ್ರಹ 100 ದಿನ ಪೂರೈಸಿದ್ದು, ಪರಿಶಿಷ್ಟರ ಬೇಡಿಕೆಗೆ ರಾಜ್ಯ ಸರಕಾರ ಇನ್ನೂ ಸ್ಪಂದಿಸಿಲ್ಲ' ಎಂದು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಶುಕ್ರವಾರ ಶ್ರೀಗಳ ಧರಣಿ ಸತ್ರಾಗ್ರಹವನ್ನು ಬೆಂಬಲಿಸಿ ಎಸ್ಸಿ-ಎಸ್ಟಿ ವರ್ಗದ ವಿವಿಧ ಸಂಘಟನೆಗಳು ಮತ್ತು ಸಮುದಾಯದ ಯುವಕರು, ‘ಎಸ್ಸಿ-ಎಸ್ಟಿ ವರ್ಗದ ಮೀಸಲಾತಿ ಪ್ರಮಾಣ ಶೇ.24.1ಕ್ಕೆ ಹೆಚ್ಚಳ ಮಾಡಬೇಕು' ಎಂದು ಒತ್ತಾಯಿಸಿ ರಾಜ್ಯದ 184 ತಾಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ಧರಣಿ ನಡೆಸಿ ತಹಶಿಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

‘ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿ ಅನ್ವಯ ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಒಟ್ಟಾರೆ ಶೇ.24.1ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು. ಎಸ್ಸಿಗಳಿಗೆ ಪ್ರಸ್ತುತ ಶೇ.15ರಷ್ಟು ಹಾಗೂ ಎಸ್ಟಿಗಳಿಗೆ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಆದರೆ, ಎಸ್ಸಿ-ಎಸ್ಟಿ ವರ್ಗದ ಜನಸಂಖ್ಯೆ ಶೇ.24.1ರಷ್ಟಿದ್ದು, ಅದರನ್ವಯ ಮೀಸಲಾತಿಯನ್ನು ಎಸ್ಸಿ-ಎಸ್ಟಿ ವರ್ಗಕ್ಕೆ ಶೇ.24.1ಕ್ಕೆ ಹೆಚ್ಚಳ ಮಾಡಬೇಕು' ಎಂದು ಒತ್ತಾಯಿಸಲಾಗಿದೆ.

ಭರವಸೆ ಸುಳ್ಳಾಗಿದೆ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ನ್ಯಾ.ನಾಗಮೋಹನ್ ದಾಸ್ ವರದಿ ಅನುಷ್ಠಾನ, ಎಸ್ಸಿ-ಎಸ್ಟಿ ವರ್ಗಕ್ಕೆ ಶೇ.24.1ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಸರಕಾರ ಭರವಸೆ ನೀಡಿತ್ತು. ಆದರೆ, ಸರಕಾರ ಆಶ್ವಾಸನೆ ನೀಡಿ 1 ವರ್ಷ 10 ತಿಂಗಳು ಕಳೆದರೂ ಇನ್ನೂ ಈಡೇರಿಸಿಲ್ಲ. ಹೀಗಾದರೆ, ಎಸ್ಸಿ-ಎಸ್ಟಿ ವರ್ಗದ ಜನರು ಸಮಾಜದ ಮುಖ್ಯವಾಹಿನಿಗೆ ಬರುವುದು ಯಾವಾಗ' ಎಂದು ಧರಣಿನಿರತ ವಾಲ್ಮೀಕಿ ಗುರಪೀಠದ ಪ್ರಸನ್ನಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ


‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಎಪ್ಪತ್ತು, ಎಂಬತ್ತು ಲಕ್ಷ ಜನಸಂಖ್ಯೆಯುಳ್ಳ ಒಂದು ಸಮುದಾಯದ ಸ್ವಾಮೀಜಿ ನೂರು ದಿನಗಳ ಸುದೀರ್ಘ ಕಾಲ ಧರಣಿ ಕೂತರೂ ಈ ಸರಕಾರ ಸ್ಪಂದಿಸಿಲ್ಲ. ಪರಿಶಿಷ್ಟರ ಹೋರಾಟವನ್ನು ಸರಕಾರ ಹಗುರವಾಗಿ ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಹೊಸಪೇಟೆಯ ರಾಘವೇಂದ್ರ ಗುಂಡಿ ಎಚ್ಚರಿಕೆ ನೀಡಿದ್ದಾರೆ.

‘ಮೀಸಲಾತಿ ಹೆಚ್ಚಳ ಸಂಬಂಧ ಸರಕಾರ ನೀಡಿದ್ದ ಭರವಸೆ ಸುಳ್ಳಾಗಿದ್ದು, ಇನ್ನಾದರೂ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಸ್ಪಂದಿಸಬೇಕು. ಎಸ್ಸಿ-ಎಸ್ಟಿ ವರ್ಗದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ.24.1ಕ್ಕೆ ಹೆಚ್ಚಳ ಮಾಡುವ ಸಂಬಂಧ ನ್ಯಾ.ನಾಗಮೋಹನ್‍ದಾಸ್ ಸಮಿತಿ ವರದಿ ಅನುಷ್ಠಾನ ಆಗುವವರೆಗೂ ಹೋರಾಟ ನಿಲ್ಲದು'

-ಶ್ರೀ ಪ್ರಸನ್ನಾನಂದ ಸ್ವಾಮೀಜಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News